Guddada Bhootha.News

Monday, October 19, 2026

 

*ಸಮರ್ಜಿತ್ ಲಂಕೇಶ್ ಅಭಿನಯದ "ಗುಡ್ಡದ ಭೂತ" ಚಿತ್ರದ ಟೀಸರ್ ಗೆ ಮೆಚ್ಚುಗೆಯ‌ ಮಹಾಪೂರ* ..

 

 *ಕರಾವಳಿ ಭಾಗದ ಈ ಕಥೆಗೆ ಎನ್ ಎಂ ಕಾಂತರಾಜ್ ನಿರ್ಮಾಣ, ಭರತ್ ಎಸ್ ನಾವುಂದ್ ನಿರ್ದೇಶನ* .                    

 

ಈ ಹಿಂದೆ "ಫಾರೆಸ್ಟ್" ಎಂಬ ಯಶಸ್ವಿ ಚಿತ್ರವನ್ನು ನಿರ್ಮಾಣ ಮಾಡಿದ್ದ ಎನ್ ಎಂ ಕಾಂತರಾಜ್ ನಿರ್ಮಾಣದ, "ಮುಗಿಲ್ ಪೇಟೆ", " ಅಡಚಣೆಗಾಗಿ ಕ್ಷಮಿಸಿ" ಚಿತ್ರಗಳ ನಿರ್ದೇಶಕ ಭರತ್ ಎಸ್ ನಾವುಂದ್ ನಿರ್ದೇಶನದ ಹಾಗೂ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ "ಗುಡ್ಡದ ಭೂತ" ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಟೀಸರ್ ಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಟೀಸರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.             

 

"ಗುಡ್ಡದ ಭೂತ" ಎಂದ ತಕ್ಷಣ ನಮಗೆಲ್ಲಾ ನೆನಪಾಗುವುದು ತೊಂಭತ್ತರ ದಶಕದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ. ಈಗ ಅದೇ ಹೆಸರೆ ನಮ್ಮ ಚಿತ್ರಕ್ಕೆ ಇಡಲಾಗಿದೆ. ಅದು ಕೂಡ ಕರಾವಳಿ ಭಾಗದ ಕಥೆಯಾಗಿತ್ತು. ಇದು ಕೂಡ ಕರಾವಳಿ ಭಾಗದ ಕಥೆಯೇ ಆಗಿದೆ. ಇದು ನೈಜಘಟನೆಯ ಕಥೆಯಲ್ಲ. ಇದೊಂದು ಮರ್ಡರ್ ಮಿಸ್ಟರಿ. ಕುಟುಂಬವೊಂದರಲ್ಲಿ ನಡೆಯುವ ಕೊಲೆಯ ಸುತ್ತ ಹೆಣೆದಿರುವ ಕಥೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು, ಶಿರಸಿ, ಮಂಚಿಕೆರೆ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ನಿರ್ಮಾಪಕ ಕಾಂತರಾಜ್ ಅವರು ಯಾವುದೇ ಕೊರತೆ ಬಾರದ ಹಾಗೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀಹರಿ ಸಂಗೀತ ನಿರ್ದೇಶನ, ದೀಪಕ್ ಕುಮಾರ್ ಅವರ ಛಾಯಾಗ್ರಹಣ ಹಾಗೂ ಶಶಿಧರ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಸಮರ್ಜಿತ್ ಲಂಕೇಶ್ ಅವರೆ ನಾಯಕರಾದರೂ, ನಿಜವಾದ ನಾಯಕ ಚಿತ್ರದ ಕಥೆಯೇ ಆಗಿರುತ್ತದೆ. ಈ ಚಿತ್ರದ ಮೂಲಕ ಸಾಕಷ್ಟು ರಂಗಭೂಮಿ ಕಲಾವಿದರನ್ನು ಪರಿಚಯಿಸಲಾಗುತ್ತಿದೆ ಎಂದು ನಿರ್ದೇಶಕ ಭರತ್ ಎಸ್ ನಾವುಂದ್ ಹೇಳಿದರು.           

ನಿರ್ದೇಶಕ ಭರತ್ ಅವರು ನನ್ನ ಆಫೀಸ್ ಗೆ ಬಂದು ಕಥೆ ಹೇಳಿದಾಗ,‌ ಕಥೆ ಕೇಳಿ ನನಗೆ ರೋಮಾಂಚನವಾಯಿತು. ತಕ್ಷಣವೇ ಅಡ್ವಾನ್ಸ್ ಕೊಟ್ಟು ಸಿನಿಮಾ ಮಾಡೋಣ ಅಂದೆ. ಮೂವತ್ತು ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಮುಗಿಸುವುದು ಅಂತ ತೀರ್ಮಾನವಾಗಿತ್ತು. ಆದರೆ ಅಂದುಕೊಂಡದಕ್ಕಿಂತ ಸ್ವಲ್ಪ ಹೆಚ್ಚಿನ ದಿನಗಳ ಚಿತ್ರೀಕರಣವಾಗಿದೆ. ಸಮರ್ಜಿತ್ ಅವರ ಅಭಿನಯ ಕೂಡ ಚೆನ್ನಾಗಿದೆ.  ಈಗ ವಿ ಎಫ್ ಎಕ್ಸ್ ನಡೆಯುತ್ತಿದೆ. ಇದು ಪೂರ್ಣವಾದ ಬಳಿಕ ಬಿಡುಗಡೆಯ ದಿನಾಂಕ ತಿಳಿಸುತ್ತೇವೆ ಎಂದರು ನಿರ್ಮಾಪಕ ಎನ್ ಎಂ ಕಾಂತರಾಜ್.                 

 

ಭರತ್ ಅವರು ಕಥೆ ಹೇಳಿದ ರೀತಿಯೇ ಬಹಳ ಅದ್ಭುತವಾಗಿತ್ತು. ಅವರು ಕೂಡ ನಟಿಸುತ್ತಲೆ ಕಥೆ ಹೇಳುತ್ತಿದ್ದರು. ನಾನು ಈ ಚಿತ್ರದಲ್ಲಿ ಎಸ್ ಐ ಪಾತ್ರ ಮಾಡಿದ್ದೇನೆ. ಅಲೋಕ್ ನನ್ನ ಪಾತ್ರದ ಹೆಸರು. ನಿರ್ಮಾಪಕ ಕಾಂತರಾಜ್ ಅವರು ಕೂಡ ಯಾವುದೇ ಕೊರತೆ ಬಾರದ ಹಾಗೆ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಶ್ರೀಹರಿ ಅವರ ಸಂಗೀತ ಸಂಯೋಜನೆ ಹಾಗೂ ದೀಪಕ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ಈ ಚಿತ್ರದಲ್ಲಿ ನಟಿಸಿರುವ ಹಿರಿಯ ಕಲಾವಿದರಿಂದ ನಾನು ಕೂಡ ಸಾಕಷ್ಟು ಕಲಿತಿದ್ದೇನೆ. ಕಂಟೆಂಟ್ ಚೆನ್ನಾಗಿರುವ ಚಿತ್ರಗಳನ್ನು ಕನ್ನಡಿಗರು ಕೈ ಬಿಡುವುದಿಲ್ಲ ಎಂದು ನಾಯಕ ಸಮರ್ಜಿತ್ ಲಂಕೇಶ್ ತಿಳಿಸಿದರು.           

 

ಚಿತ್ರದಲ್ಲಿ ನಾಲ್ಕು‌ ಹಾಡುಗಳಿದೆ. ಪ್ರಸಿದ್ದ ಗಾಯಕ - ಗಾಯಕಿಯರು ಈ ಹಾಡುಗಳನ್ನು ಹಾಡಿದ್ದಾರೆ. ರೀರೆಕಾರ್ಡಿಂಗ್ ಕೂಡ ಬಹಳ ಚೆನ್ನಾಗಿದೆ ಎಂದು ಸಂಗೀತ ನಿರ್ದೇಶಕ ಶ್ರೀಹರಿ ತಿಳಿಸಿದರು.

 

Copyright@2018 Chitralahari | All Rights Reserved. Photo Journalist K.S. Mokshendra,