Detective Teekshana.News

Monday, July 20, 2026

 

*ಪ್ರಿಯಾಂಕ ಉಪೇಂದ್ರ 50ನೇ ಚಿತ್ರ ಡಿಟೆಕ್ಟಿವ್ ತೀಕ್ಷ್ಣ*

 

       ಆಕ್ಷನ್ ಕಿಂಗ್ *ಪ್ರಿಯಾಂಕ ಉಪೇಂದ್ರ ಅಭಿನಯದ 50ನೇ* ಚಿತ್ರ *’ಡಿಟೆಕ್ಟಿವ್ ತೀಕ್ಷ್ಣ’* ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭವು ಎಸ್‌ಆರ್‌ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಇವೆಂಟ್ ಲಿಂಕ್ಸ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ *ಗುತ್ತ ಮುನಿಪ್ರಸನ್ನ, ಜಿ.ಮುನಿ ವೆಂಕಟ್‌ಚರಣ್ ಮತ್ತು ಪುರುಷೋತ್ತಮ್.ಬಿ.ಕೊಯ್ಯೂರು* ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. *ತ್ರಿವಿಕ್ರಮ ರಘು ರಚನೆ, ಸಂಭಾಷಣೆ ಮತ್ತು ನಿರ್ದೇಶನ* ಮಾಡಿರುವುದು ಹೊಸ ಅನುಭವ.

 

      ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ರೈತನ ಮಗನಾಗಿ ಮೊದಲ ಬಾರಿ ನಿರ್ದೇಶನ ಮಾಡಿದ್ದೆನೆ. ಡಿಟಿ ಜೀವಂತಿಕೆ ಇರುವ ಸಿನಿಮಾ. ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಅಧಿಕಾರ ಹಣ ಇರಬಹುದು. ಏನೇ ಇದ್ದರೂ ಸಾಮ್ರಾಜ್ಯವನ್ನು ಕಟ್ಟಿ ಉಳಿಸಬೇಕಾದರೆ ಬುದ್ದಿ ಪ್ರಮುಖವಾಗಿದೆ. ಒಬ್ಬ ವ್ಯಕ್ತಿಗೆ ಬುದ್ದಿ ಇದ್ದರೆ ಡಿಟೆಕ್ಟಿವ್ ತೀಕ್ಮ್ಣ ಆಗ್ತಾರೆ. ಅದೇ ದುರಳಳಾದರೆ ಪ್ರಾತ್ರ ಆಗ್ತಾರೆ. ಅವರ ನಡುವೆ ಬುದ್ದಿಯಲ್ಲೇ ಒಂದು ಪೈಪೋಟಿಯಲ್ಲಿ ಕರೆದುಕೊಂಡು ಹೋಗುವ ಕಥೆ ಇಡೀ ಸಿನಿಮಾದ ಸಾರಾಂಶವಾಗಿದೆ. ಮೇಡಂಗೆ ಕಥೆ ಹೇಳಿದಾಗ ಖುಷಿಪಟ್ಟು ಡೈರಕ್ಷನ್ ಮಾಡು ಎಂದು ಧೈರ್ಯ ತುಂಬಿದರು. ಉಪ್ಪಿ ಸರ್ ಇದೇ ಟೈಟಲ್ ಇಡು ಅಂತ ಸಲಹೆ ಕೊಟ್ಟರು. ಮೂರು ತಲೆಮಾರು ಉಪಕಥೆಗಳು ಬರುವುದರಿಂದ ಅದಕ್ಕೆ ಹೊಂದಿಕೊಳ್ಳುವಂತೆ ಸೆಟ್ ಹಾಕಬೇಕಿತ್ತು. ಅದಕ್ಕಾಗಿ ತಡವಾಯಿತು. ಜಗತ್ತಿನಲ್ಲಿ ಎಲ್ಲದಕ್ಕೂ ಪ್ರಮಾಣಪತ್ರ ಬೇಕು. ಅದೇ ಡಿಟೆಕ್ಟಿವ್ ಆಗಲು ಅನುಭವ ಬೇಕಿಲ್ಲ. ಕೇವಲ ಬುದ್ದಿ ಶಕ್ತಿ ಇದ್ದರೆ ಸಾಕು. ಸೆನ್ಸಾರ್‌ನವರು ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದೆ ಪ್ರಶಂಸೆ ವ್ಯಕ್ತಪಡಿಸಿದರು ಎಂದು ತ್ರಿವಿಕ್ರಮ ರಘು ಒಂದಷ್ಟು ಮಾಹಿತಿ ತೆರೆದಿಟ್ಟರು.

       ನಂತರ ಮೈಕ್ ತೆಗೆದುಕೊಂಡ ಪ್ರಿಯಾಂಕ ಉಪೇಂದ್ರ, ಸಿನಿಮಾ ಪಯಣದಲ್ಲಿ  ಒಳ್ಳೆ ಕತೆಗಳು ಸಿಕ್ಕಿದ್ದು ಪುಣ್ಯ ಎನ್ನಬಹುದು. ಪ್ರತಿ ಕಲಾವಿದೆಗೂ ಈ ತರಹದ ಸ್ಕ್ರಿಪ್ಟ್ ಸಿಗಬೇಕೆಂಬ ಆಸೆ ಇರುತ್ತದೆ. ಅದರಂತೆ ಮೇಕರ‍್ಸ್ ನನ್ನನ್ನು ಆಯ್ಕೆ ಮಾಡಿರುತ್ತಾರೆ. ದೈಹಿಕ ಶಕ್ತಿಗಿಂತ ಬುದ್ದಿವಂತಿಕೆ ಮೇಲೆ ಸನ್ನಿವೇಶಗಳು ಸಾಗುತ್ದೆ. ನನ್ನ ಪಾತ್ರವು ಹೆಣ್ಣುಮಕ್ಕಳು ಅದರಲ್ಲೂ ಚಿಕ್ಕ ವಯಸ್ಸಿನವರಿಗೆ ಗುರಿಯಾಗಿಸಿದೆ. ಮಕ್ಕಳು ನೋಡಿ ತಮ್ಮ ಜೀವನದಲ್ಲಿ ಮಾದರಿಯಾಗಿಸಿಕೊಳ್ಳಬೇಕು. ಇಂದಿನ ತಲೆಮಾರಿನಲ್ಲಿ ಭಾವನೆಗಳಿಗೆ ಬೆಲೆ ಕೊಡದೆ ಇರುವುದು ಬೇಸರ ತರಿಸಿದೆ. ಮುಖ್ಯವಾಗಿ ಕ್ಯಾಮರಾ, ಕಲೆ ಮತ್ತು ಮ್ಯೂಸಿಕ್ ತುಂಬ ಕೆಲಸ ಮಾಡಿದೆ. ನೋಡುಗರಿಗೆ ಹಾಲಿವುಡ್ ಸಿನಿಮಾದಂತೆ ಭಾಸವಾಗುತ್ತದೆ. ಈ ವರ್ಷ ಮಗನ ಸಿನಿಮಾ ಹಾಗೂ ನನ್ನದು ಬರುತ್ತಿರುವುದರಿಂದ ಡಬ್ಬಲ್ ಖುಷಿಯಾಗಿದೆ ಎಂದರು.

 

     ಹಿರಿಯ ನಟ ಸಿದ್ಲಿಂಗು ಶ್ರೀಧರ್, ಅರುಣ ಬಾಲರಾಜ್, ವಿನ್ಸಿನ್ ಡಯಾಸ್,  ರೋಬೋ ಗಣೇಶ್, ಶಶಿಧರ್, ಸಂಕಲನಕಾರ ಶ್ರೀಧರ್ ಮುಂತಾದವರು ಉಪಸ್ತಿತರಿದ್ದು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. ಸಂಗೀತ ಪದಪಲ್ಲಿ ರೋಹಿತ್, ಛಾಯಾಗ್ರಹಣ ಮನು ದಾಸಪ್ಪ ಅವರದಾಗಿದೆ. ಅಂದಹಾಗೆ ಚಿತ್ರವು ಸುಗೂರು ಕುಮಾರ್ ಮುಖಾಂತರ ಆಗಸ್ಟ್ ಮೊದಲವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,