R...R...RX.Film News

Thursday, July 09, 2026

 

*ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿದೆ "ರಾ.. ರಾ.. RX"* .      

 

*ಅದ್ದೂರಿಯಾಗಿ ಆರಂಭವಾಯಿತು ಯತಿರಾಜ್ ನಿರ್ದೇಶನದ ಹಾಗೂ ಕಾರ್ತೀಕೇಯ ಎಂಟರ್ ಪ್ರೈಸಸ್ ನಿರ್ಮಾಣದ ಈ ಚಿತ್ರ* .                            

 

ಪತ್ರಕರ್ತ, ಕಲಾವಿದ ಹಾಗೂ ನಿರ್ದೇಶಕ ಯತಿರಾಜ್ ನಿರ್ದೇಶನದ ಮತ್ತು ಕಾರ್ತಿಕೇಯ ಎಂಟರ್ ಪ್ರೈಸಸ್ ಲಾಂಛನದಲ್ಲಿ ವೃದ್ಧಿ ಸುನೀಲ್,  ಚೇತನ್ ಟಿ.ಆರ್ ಹಾಗೂ ಚಂದ್ರಶೇಖರ್ ಎಸ್ ಎಂ ನಿರ್ಮಿಸುತ್ತಿರುವ "ರಾ.. ರಾ..RX" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಹಿರಿಯ ಛಾಯಾಗ್ರಾಹಕ ಕೆ.ಎನ್ ನಾಗೇಶ್ ಕುಮಾರ್, ಪತ್ರಕರ್ತ ವಿ.ಸಿ.ಎನ್ ಮಂಜು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ನಿರ್ಮಾಪಕ ವೃದ್ಧಿ ಸುನೀಲ್ ಅವರ ಪತ್ನಿ ಪ್ರಿಯ ಕ್ಯಾಮೆರಾ ಚಾಲನೆ ಮಾಡಿದರು. ಸಮಾರಂಭಕ್ಕೆ ಆಗಮಿಸಿದ ಅಮ್ಮಂದರಿಂದ ಚಿತ್ರದ ಟೈಟಲ್ ಟೀಸರ್ ಅನಾವರಣವಾಗಿದ್ದು ವಿಶೇಷವಾಗಿತ್ತು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.                          

ಇದು, ನಾನು ಬರೆದಿರುವ ಕಥೆ. ಪುಸ್ತಕರೂಪದಲ್ಲಿ ಹೊರತರೋಣ ಅಂದುಕೊಂಡೆ. ಆದರೆ ಈಗ ಅದು ಚಿತ್ರವಾಗುತ್ತಿದೆ. ಈ ಕಥೆಯನ್ನು ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಅವರ ಹತ್ತಿರ ಹೇಳಿದ್ದೆ. ಅವರು ಅವರ ಸ್ನೇಹಿತರಾದ ವೃದ್ಧಿ ಸುನೀಲ್ ಅವರ ಬಳಿ ಕಥೆ ಚೆನ್ನಾಗಿದೆ ಎಂದು ಹೇಳಿದರಂತೆ. ಸುನೀಲ್ ಅವರು ನನ್ನ ಕರೆಸಿ ಕಥೆ ಕೇಳಿ,‌ ಕಥೆ ಮೆಚ್ಚಿಕೊಂಡು ನಿರ್ಮಾಣಕ್ಕೆ ಮುಂದಾದರು. ವೃದ್ಧಿ ಸುನೀಲ್ ಅವರ ಜೊತೆಗೆ ಚೇತನ್ ಹಾಗೂ ಚಂದ್ರಶೇಖರ್ ಅವರು ಸಹ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. "ರಾ.. ರಾ.. RX",  ರಾಜೀವ ಹಾಗೂ ರಾಕೇಶ‌ ಎಂಬ ಸ್ನೇಹಿತರು RX ಬೈಕ್ ನಲ್ಲಿ ಪಯಣಿಸುವಾಗ ನಡೆಯುವ ಕಥೆ. ತಾಯಿ - ಮಗನ ಬಾಂಧವ್ಯದ ಕಥೆಯೂ ಹೌದು. ಈ ಚಿತ್ರದಲ್ಲಿ RX ಬೈಕ್ ಸಹ ಪ್ರಮುಖ ಪಾತ್ರಧಾರಿ. ಕಥೆಯೇ ಈ ಚಿತ್ರದ ನಾಯಕ. ಅನೇಕ ನೂತನ ಪ್ರತಿಭೆಗಳನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಂಡಿದ್ದೇವೆ. ಈ ಚಿತ್ರದಲ್ಲಿ ನಟಿಸುತ್ತಿರುವ ಬಹುತೇಕರಿಗೆ ಇದು ಮೊದಲ ಸಿನಿಮಾ. ಇದೇ ಇಪ್ಪತ್ತನೇ ತಾರೀಖಿನಿಂದ ಮದ್ದೂರಿನಲ್ಲಿ ಚಿತ್ರೀಕರಣ ಆರಂಭ. ಎಲ್ಲಾ ಅಂದುಕೊಂಡಂತೆ ಆದರೆ ಮೂವತ್ತೈದು ದಿನಗಳಲ್ಲಿ ಚಿತ್ರೀಕರಣ ಮುಕ್ತಾಯ. ವಿಜಯ್ ಹರಿತ್ಸ ಅವರ ಸಂಗೀತ ನಿರ್ದೇಶನ ಹಾಗೂ ದೀಪಕ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರ ಅದ್ದೂರಿಯಾಗಿ ಮೂಡಿ ಬರಲಿದೆ. ಅದಕ್ಕೆ ನಿರ್ಮಾಪಕರ ಸಹಕಾರ ಅಪಾರವಾಗಿದೆ. ನಾನು ನಿರ್ದೇಶನದ ಜೊತೆಗೆ ಒಂದು ಸಣ್ಣ ಪಾತ್ರದಲ್ಲಿ ಅಭಿನಯ ಕೂಡ ಮಾಡುತ್ತಿದ್ದೇನೆ‌ ಎಂದು ನಿರ್ದೇಶಕ ಯತಿರಾಜ್ ಹೇಳಿದರು.                           

 

ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಅವರ ಮೂಲಕ ಯತಿರಾಜ್ ಅವರ ಪರಿಚಯವಾಯಿತು. ಮೊದಲಿನಿಂದಲೂ ಒಳ್ಳೆಯ ಕಥೆ ಸಿಕ್ಕರೆ ಸಿನಿಮಾ ಮಾಡುವ ಆಸೆ ಇತ್ತು. ಯತಿರಾಜ್ ಅವರು ಹೇಳಿದ  ಕಥೆ ಇಷ್ಟವಾಗಿ ನಿರ್ಮಾಣ ಮಾಡುತ್ತಿರುವುದಾಗಿ ನಿರ್ಮಾಪಕ ವೃದ್ಧಿ ಸುನೀಲ್ ತಿಳಿಸಿದರು. ಮತ್ತಿಬ್ಬರು ನಿರ್ಮಾಪಕರಾದ ಚೇತನ್ ಟಿ.ಆರ್ ಹಾಗೂ ಚಂದ್ರಶೇಖರ್ ಅವರು ಸಹ ಕಥೆಯ ಬಗ್ಗೆ ಮೆಚ್ಚುಗೆ ಮಾತುಗಳಾಡಿದರು.                              

 

ಚಿತ್ರದಲ್ಲಿ ಮೂರು ಹಾಡುಗಳಿದೆ. ಅದರಲ್ಲಿ ಒಂದು ಆರ್ ಎಕ್ಸ್ ಬೈಕ್ ನ ಕುರಿತಾಗಿಯೇ ಇದೆ ಎಂದು ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಹೇಳಿದರು.                   

 

"ವಸುದೈವ ಕುಟುಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ನಾಯಕನಾಗಿ ಇದು ಮೊದಲ ಚಿತ್ರ. ರಾಜೀವ ನನ್ನ ಪಾತ್ರದ ಹೆಸರು ಎಂದರು ನಟ ಅನೂಪ್ ಬೆಳ್ಳಾವಿ. ಆಡಿಷನ್ ಮೂಲಕ ಆಯ್ಕೆಯಾದೆ. ನನ್ನ ಪಾತ್ರ ಚೆನ್ನಾಗಿದೆ ಎಂದು ರಾಕೇಶ್ ಪಾತ್ರಧಾರಿ ನಟ ಭರತ್ ತಿಳಿಸಿದರು. ನಾಯಕಿಯರಾಗಿ ಆಭಿನಯಿಸುತ್ತಿರುವ ಕೀರ್ತನ, ಐಶ್ವರ್ಯ, ನಟ ಭರತ್, ನಟಿ ಸಹನಾ ಶ್ರೀ ಮುಂತಾದ ಕಲಾವಿದರು ಹಾಗೂ ಛಾಯಾಗ್ರಾಹಕ ದೀಪಕ್ ಸೇರಿದಂತೆ ಅನೇಕ ತಂತ್ರಜ್ಞರು ಚಿತ್ರದ ಕುರಿತು ಮಾತನಾಡಿದರು. ಕಾರ್ಯಕಾರಿ ನಿರ್ಮಾಪಕ ಅಲೋಕ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,