*ಇಟಗಿ ಶ್ರೀಗಳಿಂದ ಅಭಿಜಿತ್ ಅಭಿನಯದ "ಶ್ರೀಅನ್ನದಾನೀಶ್ವರ ಮಹಾತ್ಮೆ" ಚಿತ್ರದ ಟ್ರೇಲರ್ ಅನಾವರಣ*
ಮಮತಾ ಎನ್. ಎಸ್. ನಿರ್ಮಾಣದ, ಗೌರಿ ಎಲ್. ರಾಮೇಗೌಡ ಅವರ ನಿರ್ದೇಶನದ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಡೆದಾಡುವ ದೇವರು, ಪುಸ್ತಕದ ಜಗದ್ಗುರು, ನಾಡೋಜ ಪ್ರಶಸ್ತಿ ಪುರಸ್ಕೃತ ಶ್ರೀ ಜಗದ್ಗುರು ಡಾ||ಅನ್ನದಾನೀಶ್ವರ ಮಹಾಸ್ವಾಮಿಗಳ ಜೀವನ ಚರಿತ್ರೆ ಆಧಾರಿತ "ಶ್ರೀಅನ್ನದಾನೀಶ್ವರ ಮಹಾತ್ಮೆ" ಚಿತ್ರದ ಟ್ರೇಲರ್ ಅನಾವರಣ ಸಮಾರಂಭ ಇತ್ತೀಚೆಗೆ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. " ಚಿತ್ರದ ಟ್ರೇಲರ್ ಅನ್ನು ಪರಮಪೂಜ್ಯ ಇಟಗಿ ಶ್ರೀಗಳು ಬಿಡುಗಡೆ ಮಾಡಿ"ಶ್ರೀ ಅನ್ನದಾನೀಶ್ವರ ಸ್ವಾಮಿಗಳ" ಕುರಿತು ಭಕ್ತಿತುಂಬಿದ ಮಾತುಗಳನ್ನಾಡಿ, ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು . ಪರಮಪೂಜ್ಯ ಅಂತಃಪುರ ಶ್ರೀಗಳು ಸಾನಿಧ್ಯ ವಹಿಸಿ ಜ್ಞಾನ ಮೇರುವಾಗಿ ಹಾಡನ್ನು ಬಿಡುಗಡೆ ಮಾಡಿ ಕುಟುಂಬ ಸಮೇತ ಆಗಮಿಸಿ ಈ ಚಿತ್ರವನ್ನು ವೀಕ್ಷಿಸಿ ಗೆಲ್ಲಿಸಿ ಎಂದು ಹೇಳಿದರು ಡಾ. ರಮೇಶ್ ಶೆಟ್ಟಿ (ಬೈಂದೂರು), ಪುಷ್ಪಲತಾ, ರಕ್ಷಕ ವಿಜಯಕುಮಾರ್ ಸೂರಿ ಮೆರಾಡೇ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಈ ಚಿತ್ರದಲ್ಲಿ ಫ್ಯಾಮಿಲಿ ಸ್ಟಾರ್ ಅಭಿಜಿತ್ ಅವರು ಅನ್ನದಾನೀಶ್ವರ ಶ್ರೀಗಳ ಪಾತ್ರ ನಿರ್ವಹಿಸಿದ್ದು, ಮತ್ತು
ಅನ್ನದಾನೀಶ್ವರ ಶಾಖಾಮಠದ ಕುಕುನೂರಿನ ಡಾ||ಮಹದೇವ ದೇವರು ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ಕುಮಾರ್ ಬೇವಿನಾಳ್ ಅವರು ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದಿರುವ ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ವೇದಿಕೆಯಲ್ಲಿ ನಿರ್ದೇಶಕಿ ಗೌರಿ ಅವರು ಮಾತನಾಡಿ, ಹಲವಾರು ಸಿನಿಮಾಗಳು, ಧಾರಾವಾಹಿಗಳಲ್ಲಿ ನಟಿಸಿರುವ ನನಗೆ ನಿರ್ದೇಶಕಿಯಾಗಿ ಇದು ಮೊದಲ ಚಿತ್ರ. ನನಗೆ ದೈವದ ಬಗ್ಗೆ ಒಲವು ಜಾಸ್ತಿ. ರಾಯರ ಪರಮ ಭಕ್ತೆ. ಅಭಿಜಿತ್ ಅವರು ಅನ್ನದಾನೀಶ್ವರ ಸ್ವಾಮಿಗಳ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. 100ಕ್ಕೂ ಹೆಚ್ಚು ಸ್ವಾಮಿಗಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ, ಸಿದ್ದಗಂಗಾ ಮತ್ತು ಅನ್ನದಾನೀ ಶ್ವರ ಮಠಧ 25 ಸಾವಿರ ಮಕ್ಕಳು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೊಪ್ಪಳ, ಶಿವಯೋಗ ಮಂದಿರ ಮುಂಡರಗಿ ಬೆಂಗಳೂರು, ಶ್ರೀರಂಗಪಟ್ಟಣ ಸಿದ್ದಗಂಗಾ ಮಠದ ಸುತ್ತಮುತ್ತ 60 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ ಎಂದರು.
ನಾಯಕ ನಟ ಅಭಿಜಿತ್ ರಾವ್ ಮಾತನಾಡಿ ಈ ಚಿತ್ರದಲ್ಲಿ ಎಲ್ಲವನ್ನೂ ಗುರುಗಳು ನನ್ನ ಕೈಯಿಂದ ಮಾಡಿಸಿದ್ದಾರೆ. ಅದು ಗುರುಗಳ ಆಶೀರ್ವಾದ ಹಾಗೂ ಇಚ್ಛೆ ಆಗಿತ್ತು. ಗೌರಿ ಅವರು ನನ್ನಿಂದ ತುಂಬಾ ಚೆನ್ನಾಗಿ ಪಾತ್ರ ಮಾಡಿಸಿದ್ದಾರೆ. ಇಂಥ ಕಥೆ ಮಾಡಬೇಕಾದರೆ ನೇಟಿವಿಟಿ ಬಹಳ ಮುಖ್ಯ. ಛಾಯಾಗ್ರಾಹಕರಾದ ಮೈಸೂರು ಸಿದ್ದರಾಜು ಮತ್ತು ಶಿವಶರಣ ವಿ ಸುಗ್ನಳ್ಳಿ ಅದ್ಭುತವಾಗಿ ಚಿತ್ರವನ್ನು ಸೆರೆ ಹಿಡಿದಿದ್ದು ವಿ.ಮನೋಹರ್ ಸಂಗೀತ ಸಂಯೋಜನೆ ಅದ್ಭುತವಾಗಿದೆ. ಈ ಪಾತ್ರ ಸಿಕ್ಕಿದ್ದು ನನ್ನ ಪೂರ್ವಜನ್ಮದ ಪುಣ್ಯ ಎಂದರು.
ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದಿರುವ ಸಂಜಯ್ ಕುಮಾರ್ ಬೇವಿನಾಳ್ ಮಾತನಾಡಿ ಅತ್ಯಂತ ಸರಳವಾಗಿ ಪುಸ್ತಕಗಳ ಮಧ್ಯ ಜೀವನ ನಡೆಸುತ್ತ ಅನ್ನ ಅರಿವು ಶಿಕ್ಷಣ ತ್ರಿವಿಧ ದಾಸೋಹದ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಸೃಷ್ಟಿ ಮಾಡಿ ಸಾಹಿತ್ಯ ಲೋಕದಲಿ ತಮ್ಮದೇ ಆದ ವಿಶೇಷ ಸ್ಥಾನವನ್ನು ಪಡೆದುಕೊಂಡಿರುವ, ಗುರುಗಳ ಬಗ್ಗೆ ಬರೆಯುವುದು ನನಗೆ ಸಿಕ್ಕ ಸೌಭಾಗ್ಯ ಎಂದರು.
ಅನ್ನ ಪ್ರತಿಯೊಬ್ಬರ ಬದುಕಿನಲ್ಲಿ ತುಂಬಾ ಮುಖ್ಯ ಈ ಚಿತ್ರಕ್ಕೆ ಹಲವುಪ್ರಶಸ್ತಿಗಳು ಬರುವ ನಿರೀಕ್ಷೆ ಇದೆ ಎಂದು ಸಂಕಲನಕಾರ ಎನ್‌ಎಂ.ವಿಶ್ವ ಮಾತನಾಡಿದರು
ನಟ ಶಿವಕುಮಾರ್ ಆರಾಧ್ಯ ರತ್ನಮಾಲ ಸುಂದರ್ ಜೂನಿಯರ್ ರಾಜಕುಮಾರ್ ಗಣೇಶ್ ಭಟ್ರು ಮೂಗು ಸುರೇಶ್ ಡಿಂಗರಿ ನಾಗರಾಜ್ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಿರ್ಮಾಪಕಿ ಮಮತಾ ಎನ್ ಎಸ್ ಆಗಮಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು.