Bangle Bangari.Film News

Friday, September 25, 2026

 

*ಬಲಮುರಿ ಪ್ರಸಿದ್ದಿ ಶ್ರೀವಿನಾಯಕ ದೇವಸ್ಥಾನದಲ್ಲಿ "ಬ್ಯಾಂಗಲ್ ಬಂಗಾರಿ" ಚಿತ್ರಕ್ಕೆ ಚಾಲನೆ* .

                                        

 *ಜನಪ್ರಿಯ ಗೀತೆಯ ಮೊದಲ ಸಾಲೇ ಈಗ ನೂತನ ಚಿತ್ರದ ಶೀರ್ಷಿಕೆ* . 

 

ಯುವ ರಾಜಕುಮಾರ್ ಅಭಿನಯದ "ಎಕ್ಕಾ" ಚಿತ್ರದ "ಬ್ಯಾಂಗಲ್ ಬಂಗಾರಿ" ತುಂಬಾ ಜನಪ್ರಿಯವಾದ ಹಾಡು. ಈಗ ಆ ಹಾಡಿನ ಮೊದಲ ಸಾಲೇ ಚಿತ್ರದ ಶೀರ್ಷಿಕೆಯಾಗಿದೆ. ಹೌದು. ಶಂಕರ್ ರಾಮರೆಡ್ಡಿ ನಿರ್ಮಿಸಿ, ಮರಡಿಹಳ್ಳಿ ಚಂದ್ರ ನಾಗ್ ಅವರು ನಿರ್ದೇಶಿಸುತ್ತಿರುವ ನೂತನ ಚಿತ್ರಕ್ಕೆ "ಬ್ಯಾಂಗಲ್ ಬಂಗಾರಿ" ಎಂದು ಹೆಸರಿಡಲಾಗಿದೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನಂದಿನಿ ಬಡಾವಣೆಯ ಬಲಮುರಿ ಪ್ರಸಿದ್ಧಿ ಶ್ರೀವಿನಾಯಕ ದೇವಸ್ಥಾನದಲ್ಲಿ ನೆರವೇರಿತು. "ಮುಂಗಾರು ಮಳೆ" ಚಿತ್ರದ ನಿರ್ಮಾಪಕರಾದ ಇ.ಕೃಷ್ಣಪ್ಪ ಅವರು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಶಾಸಕ ಗೋಪಲಯ್ಯ ಅವರು ಕ್ಯಾಮೆರಾ ಚಾಲನೆ ಮಾಡಿದರು. ಇಬ್ಬರು ಗಣ್ಯರು ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಶುಕ್ರವಾರ, ಅನಂತ ಚತುರ್ದಶಿಯ ಶುಭದಿನ ನಮ್ಮ "ಬ್ಯಾಂಗಲ್ ಬಂಗಾರಿ" ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಇದೊಂದು ಪ್ರೇಮಕಥೆ. ಜೊತೆಗೆ ಕ್ರೈಮ್ ಸಹ ಇದೆ.  ಸುನೀಲ್ ಶಶಿಧರ್, ಪ್ರಕೃತಿ ರಾಜೇಂದ್ರ ನಾಯಕ - ನಾಯಕಿಯಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಶರತ್ ಲೋಹಿತಾಶ್ವ, ಗೋಪಾಲಕೃಷ್ಣ ದೇಶಪಾಂಡೆ, ಪ್ರಕಾಶ್ ಬೆಳವಾಡಿ, ರವಿ ಕಾಳೆ, ಸಂಪತ್ ಮೈತ್ರೇಯ ಮುಂತಾದವರು ತಾರಾಬಳಗದಲ್ಲಿದ್ದಾರೆ. ಟಾಪ್ ಸ್ಟಾರ್ ರೇಣು ಸಂಗೀತ ನಿರ್ದೇಶನ, ಸತೀಶ್ ಕೆ ಛಾಯಾಗ್ರಹಣ ಹಾಗೂ ಗಿರೀಶ್ ಕುಮಾರ್ ಅವರ ಸಂಕಲನವಿರುವ ಈ ಚಿತ್ರಕ್ಕೆ "ಫುಲ್ ಮೀಲ್ಸ್" ಚಿತ್ರದ ನಿರ್ದೇಶಕ ಎನ್ ವಿನಾಯಕ ಸಂಭಾಷಣೆ ಬರೆದಿದ್ದಾರೆ. ಹಾಡುಗಳನ್ನು ಕೆ.ಕಲ್ಯಾಣ್, ಲೋಕೇಶ್ ಕೃಷ್ಣ ಹಾಗೂ ಟಾಪ್ ಸ್ಟಾರ್ ರೇಣು ರಚಿಸಿದ್ದಾರೆ. ವಿಜಯ್ ಪ್ರಕಾಶ್, ಕೈಲಾಶ್ ಖೇರ್ , ಜಸ್ಕರಣ್ ಸಿಂಗ್, ಅನುರಾಧಾ ಭಟ್ ಹಾಡುಗಳನ್ನು ಹಾಡಲಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಎರಡನೇ ಹಂತದ ಚಿತ್ರೀಕರಣ ಸಕಲೇಶಪುರದಲ್ಲಿ ನಡೆಸಲು ಸಿದ್ದತೆ ನಡೆಯುತ್ತಿದೆ. ನಾನೇ ಕಥೆ ಹಾಗೂ ಚಿತ್ರಕಥೆ ಬರೆದಿದ್ದೇನೆ. ಶಂಕರ್ ರಾಮ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಮರಡಿಹಳ್ಳಿ ಚಂದ್ರ ನಾಗ್ ತಿಳಿಸಿದರು.                  

 

 ಇದು ನನಗೆ ನಾಯಕನಾಗಿ ಎರಡನೇ ಚಿತ್ರ. ಈ ಚಿತ್ರದಲ್ಲಿ ನಾನು AI ಎಂಜಿನಿಯರ್. ಆಡಿಶನ್ ಮೂಲಕ ಆಯ್ಕೆಯಾದೆ. ನಟನೆಗೆ ಬೇಕಾದ ತರಬೇತಿ ಪಡೆದುಕೊಂಡು ಬಂದಿದ್ದೇನೆ ಎಂದು ನಾಯಕ ಸುನೀಲ್ ಶಶಿಧರ್ ಹೇಳಿದರು.

 

ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಕಾವ್ಯ. ನಿರ್ದೇಶಕರು ನನ್ನ ಪಾತ್ರದ ಬಗ್ಗೆ ಹೇಳಿದ ತಕ್ಷಣ ತುಂಬಾ ಇಷ್ಡವಾಯಿತು. ನಾನು ಮೂಲತಃ ನೃತ್ಯಗಾರ್ತಿ. ‌ಈ ಚಿತ್ರದಲ್ಲೂ ನೃತ್ಯ ಮಾಡಲು ಅವಕಾಶವಿದೆ ಎಂದರು ನಾಯಕಿ ಪ್ರಕೃತಿ ರಾಜೇಂದ್ರ.           

 

ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣ ಮಾಡುತ್ತಿರುವುದಾಗಿ ಹೇಳಿದ ನಿರ್ಮಾಪಕ ಶಂಕರ್ ರಾಮ್ ರೆಡ್ಡಿ ಅವರು, ಆಗಮಿಸಿದ ಅತಿಥಿಗಳಿಗೆ ಹಾಗೂ ಚಿತ್ರತಂಡದ ಸದಸ್ಯರಿಗೆ ಧನ್ಯವಾದ ಹೇಳಿದರು. ಸಂಗೀತ ನಿರ್ದೇಶಕ ಟಾಪ್ ಸ್ಟಾರ್ ರೇಣು, ಛಾಯಾಗ್ರಾಹಕ  ಸತೀಶ್, ನಟ ಸಂಪತ್ ಮೈತ್ರೇಯ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,