Brindavihari.Film News

Thursday, September 24, 2026

 

*ಅರಮನೆ ಆವರಣದಲ್ಲಿ ಅದ್ದೂರಿಯಾಗಿ ಅನಾವರಣವಾಯಿತು ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ “ಬೃಂದಾವಿಹಾರಿ” ಚಿತ್ರದ ಐದನೇ ಹಾಡು* .. 

 

*ನಾಡಹಬ್ಬ ದಸರಾ ಸಂದರ್ಭದಲ್ಲಿ ಅಕ್ಟೋಬರ್ 16 ರಂದು ಬಹು ನಿರೀಕ್ಷಿತ ಈ ಚಿತ್ರ ತೆರೆಗೆ* .

 

ಸಮೃದ್ಧಿ ಮಂಜುನಾಥ್ ನಿರ್ಮಾಣದ, ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ಹಾಗೂ ಶ್ರೀನಿವಾಸರಾಜು ನಿರ್ದೇಶನದ  "ಬೃಂದಾವಿಹಾರಿ" ಚಿತ್ರದ ಐದನೇ ಹಾಡು "ಒಂದೇ ಒಂದು" ಇತ್ತೀಚಿಗೆ ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ದೂರಿಯಾಗಿ ಅನಾವರಣವಾಯಿತು. ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅವರ ಪತ್ನಿ ಪದ್ಮ ಮಂಜುನಾಥ್ ಅವರು ಈ ಹಾಡನ್ನು ಬಿಡುಗಡೆ ಮಾಡಿದರು. ಕವಿರತ್ನ ಡಾ||ವಿ.ನಾಗೇಂದ್ರಪ್ರಸಾದ್ ಬರೆದಿರುವ ಈ ಹಾಡನ್ನು ಹೆಸರಾಂತ ಗಾಯಕಿ ಕೆ.ಎಸ್ ಚಿತ್ರ ಹಾಗೂ ಖ್ಯಾತ ಗಾಯಕ ಜಸ್ಕರಣ್ ಸಿಂಗ್ ಹಾಡಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನೀಡಿರುವ ಈ ಹಾಡಿಗೆ ಗಣೇಶ್ ಹಾಗೂ ದೇವಿಕ ಭಟ್ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ನಾಲ್ಕು ಹಾಡುಗಳು ಸೂಪರ್ ಹಿಟ್ ಆಗಿದ್ದು, ಐದನೇ ಹಾಡಾಗಿ ಬಿಡುಗಡೆಯಾಗಿರುವ ’ಒಂದೇ ಒಂದು" ಎಲ್ಲರ ಮನ ಗೆಲ್ಲುತ್ತಿದೆ. ಆನಂದ್ ಆಡಿಯೋ ಮೂಲಕ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಅಕ್ಟೋಬರ್ 16, ನಾಡಹಬ್ಬ ದಸರಾ ಸಂದರ್ಭದಲ್ಲಿ ಈ ಚಿತ್ರ ತೆರೆಗೆ ಬರಲಿದೆ.  ’ಕೃಷ್ಣಂ ಪ್ರಣಯ ಸಖಿ” ಚಿತ್ರದ ನಂತರ ಶ್ರೀನಿವಾಸರಾಜು ಹಾಗೂ ಗಣೇಶ್ ಜೋಡಿ ತೆರೆಯ ಮೇಲೆ ಮತ್ತೊಮ್ಮೆ ಮೋಡಿ ಮಾಡಲಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.    

ಈ ವೇಳೆ ಮಾತನಾಡಿದ ನಾಯಕ  ಗಣೇಶ್, ಒಳ್ಳೆಯ ಸಾಲುಗಳನ್ನು ಕೊಟ್ಟಾಗ ನಮಗೆ ಅಂತ ಕೆಲಸವಿರುವುದಿಲ್ಲ. ಅಂತಹ ಅದ್ಭುತ ಸಾಲುಗಳನ್ನು ಕೊಟ್ಟ ಡಾ||ನಾಗೇಂದ್ರಪ್ರಸಾದ್ ಅವರಿಗೆ, ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ಅವರಿಗೆ, ಗಾಯಕ ಜಸ್ಕರಣ್ ಸಿಂಗ್ ಅವರಿಗೆ, ನಿರ್ದೇಶಕ ಶ್ರೀನಿವಾಸರಾಜು ಹಾಗೂ ಚಿತ್ರವನ್ನು ಸಮೃದ್ಧಿಯಾಗಿ ನಿರ್ಮಾಣ ಮಾಡಿರುವ ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳುತ್ತೇನೆ. ಈ ಹಾಡನ್ನು ನೋಡಿದವರು ನೀವು ಈ ಹಾಡಿನಲ್ಲಿ ತುಂಬಾ ಮುದ್ದಾಗಿ ಕಾಣುತ್ತೀರಾ ಹಾಗೂ ಅಭಿನಯ ಕೂಡ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ನಾನು ಎಲ್ಲವನ್ನು ಪ್ರೀತಿಯಿಂದ ಮಾಡುತ್ತೇನೆ. ಆದರೆ ಅದು ತೆರೆಯ ಮೇಲೆ ಚೆನ್ನಾಗಿ ಕಾಣಲು ನೀವೆಲ್ಲಾ ನನ್ನ ಮೇಲಿಟ್ಟಿರುವ ಪ್ರೀತಿಯೇ ಕಾರಣ. ಆ ಪ್ರೀತಿ ಸದಾ ಇರಲಿ. ಅಕ್ಟೋಬರ್ 16 ನಮ್ಮ "ಬೃಂದಾವಿಹಾರಿ" ಚಿತ್ರ ನಿಮ್ಮ ಮುಂದೆ ಬರಲಿದೆ. ನೋಡಿ. ಪ್ರೋತ್ಸಾಹ ನೀಡಿ ಎಂದರು. 

 

ಕ್ರಿಕೆಟ್ ನಿಂದ ನಮ್ಮ ಸ್ನೇಹ ಆರಂಭವಾಯಿತು. ನನ್ನನ್ನು ಚಿತ್ರರಂಗಕ್ಕೆ ಕರೆತಂದವರು ಗಣೇಶ್ ಅವರೆ. ಈಗ ನಮ್ಮ ಸಂಸ್ಥೆಯ ನಿರ್ಮಾಣದ ಚಿತ್ರಕ್ಕೆ ಅವರೆ ನಾಯಕರಾಗಿರುವುದು ಬಹಳ ಖುಷಿಯಾಗಿದೆ. "ಬೃಂದಾವಿಹಾರಿ"  ಒಂದೊಳ್ಳೆ ಕೌಟುಂಬಿಕ ಚಿತ್ರ. ಹಾಡುಗಳು ಒಂದಕ್ಕಿಂತ ಒಂದು ಅದ್ಭುತ. ಇಂದು ನಮ್ಮ ಸಮೃದ್ಧಿ ಸಂಸ್ಥೆಗೆ ಹದಿನೈದು ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ "ಒಂದೇ ಒಂದು" ಹಾಡು ಕೂಡ ಬಿಡುಗಡೆಯಾಗಿರುವುದು ಬಹಳ ಸಂತೋಷವಾಗಿದೆ. ಈ ಹಾಡನ್ನು ನಾನು ನಮ್ಮ ಸಮೃದ್ಧಿ ಸಂಸ್ಥೆಯ ಎಲ್ಲರಿಗೂ ಅರ್ಪಿಸುತ್ತೇನೆ. ಅಕ್ಟೋಬರ್ 16 ನಾಡಹಬ್ಬದ ಸಂದರ್ಭದಲ್ಲಿ ನಮ್ಮ ಸಿನಿಮಾ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.  ನೀವೆಲ್ಲರು ಕುಟುಂಬ ಸಮೇತ ಬಂದು ನಮ್ಮ ಚಿತ್ರ ನೋಡಿ ಎಂದು ನಿರ್ಮಾಪಕ ಸಮೃದ್ಧಿ ಮಂಜುನಾಥ್ ಹೇಳಿದರು.

                                               

ನಿರ್ದೇಶಕ ಶ್ರೀನಿವಾಸ ರಾಜು ಮಾತನಾಡಿ, ಈಗಾಗಲೇ ಬಿಡುಗಡೆಯಾಗಿರುವ ನಮ್ಮ ಚಿತ್ರದ ನಾಲ್ಕು ಹಾಡುಗಳನ್ನು ತಾವೆಲ್ಲರು ತುಂಬಾ ಮೆಚ್ಚಿಕೊಂಡಿದ್ದೀರಿ. ಐದನೇ ಹಾಡಾಗಿ "ಒಂದೇ ಒಂದು" ಬಿಡುಗಡೆಯಾಗಿದೆ. ಈ ಹಾಡನ್ನು ಬರೆಯಲು ನಾಗೇಂದ್ರ ಪ್ರಸಾದ್ ಅವರು ಎರಡು ತಿಂಗಳ ಸಮಯ ತೆಗೆದುಕೊಂಡಿದ್ದಾರೆ.  ಸಾಮಾನ್ಯವಾಗಿ ಹದಿನಾರರಿಂದ ಅರವತ್ತು ವಯಸ್ಸಿನವರೆಗೂ ಎಲ್ಲಾ ಹೆಂಗಸರು ತಾವು ಪ್ರೀತಿಸುವ ಗಂಡಸರನ್ನು ಕೇಳುವ ಪ್ರಶ್ನೆ, ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರಾ? ಎಂದು. ಅವರೆಲ್ಲರ ಪ್ರಶ್ನೆಗೆ ಉತ್ತರವಾಗಿ ಈ ಹಾಡು ಮೂಡಿಬಂದಿದೆ.‌ ನಮ್ಮ ಚಿತ್ರದ ಎಲ್ಲಾ ಹಾಡುಗಳನ್ನು ನಾಗೇಂದ್ರ ಪ್ರಸಾದ್ ಅವರೆ ಬರೆದಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನೀಡಿದ್ದಾರೆ. ಈ ಹಾಡನ್ನು ಕೆ.ಎಸ್ ಚಿತ್ರ ಹಾಗೂ ಜಸ್ಕರಣ್ ಸಿಂಗ್ ಹಾಡಿದ್ದಾರೆ. ನಮ್ಮ ಚಿತ್ರ ಅಕ್ಟೋಬರ್ 16 ರಂದು ತೆರೆಗೆ ಬರುತ್ತಿದೆ. ಎಲ್ಲರಿಗೂ ಮೆಚ್ಚುಗೆಯಾಗುವ ಭರವಸೆ ಇದೆ ಎಂದರು.  

 

ಈ ಚಿತ್ರದಲ್ಲಿ ಏಳು ಹಾಡುಗಳಿದೆ.  ವಿಶೇಷವೆಂದರೆ ಎಲ್ಲಾ ಹಾಡುಗಳನ್ನು ದ್ವಿರುಕ್ತಿ ಬಳಸಿ ಬರೆದಿದ್ದೇನೆ. "ರಾಮ ರಾಮ", " ರಾಧೆ ರಾಧೆ" ಹೀಗೆ.‌ ಪ್ರಸ್ತುತ "ಒಂದೇ ಒಂದು" ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ತೆರೆಯ ಮೇಲೆ ನೋಡಿದ ಮೇಲೆ ಮನಸ್ಸು ತುಂಬಿ ಬಂದಿದೆ ಎಂದು ಗೀತರಚನೆಕಾರರಾದ ವಿ.ನಾಗೇಂದ್ರಪ್ರಸಾದ್ ತಿಳಿಸಿದರು.        

 

"ಬೃಂದಾವಿಹಾರಿ" ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಹಾಡುಗಳು ಸಹ ಚೆನ್ನಾಗಿದೆ. ಇದು ನನ್ನ ಮೊದಲ ಚಿತ್ರ ಎಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕಿ ದೇವಿಕಾ ಭಟ್.                   

 

ಆಗಷ್ಟೇ ಅನಾವರಣವಾದ "ಒಂದೇ ಒಂದು" ಹಾಡಿನ ಕೆಲವು ಸಾಲುಗಳನ್ನು ಹಾಡುವ ಮೂಲಕ‌ ಗಾಯಕ ಜಸ್ಕರಣ್ ಸಿಂಗ್ ನೆರೆದಿದ್ದ ಜನಸಮೂಹವನ್ನು ರಂಜಿಸಿದರು.

Copyright@2018 Chitralahari | All Rights Reserved. Photo Journalist K.S. Mokshendra,