Tarangaantaranga.News

Tuesday, September 22, 2026

 

*ಪುನರ್ಜನ್ಮದ ಕಥೆ ಹೊತ್ತು ಬರುತ್ತಿದೆ ’ತರಂಗಾಂತರಂಗ’*

 

*ನವ ಪ್ರತಿಭೆ ಶ್ರೀಷ ಅಭಿನಯದ ’ತರಂಗಾಂತರಂಗ’ ಚಿತ್ರದ ಟೀಸರ್ ಬಿಡುಗಡೆ*

 

ಕರ್ನಾಟಕದ ಕಡಲ ತೀರದ ಅನೇಕ ಪ್ರತಿಭೆಗಳು ಪ್ರತಿ ವರ್ಷ ಕನ್ನಡ ಚಿತ್ರರಂಗಕ್ಕೆ ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ತಂತ್ರಜ್ಞರಾಗಿ ಪರಿಚಯವಾಗುತ್ತಲೇ ಇರುತ್ತಾರೆ. ಈಗ ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಹೆಸರು ಶ್ರೀಷ ಅವರದ್ದು.

 

ಹೌದು, ಉಡುಪಿಯ ಬೈಂದೂರು ಮೂಲದ ಯುವ ಪ್ರತಿಭೆ ಶ್ರೀಷ ಇದೀಗ ’ತರಂಗಾಂತರಂಗ’ ಚಿತ್ರದ ಮೂಲಕ ನಾಯಕ ನಟನಾಗಿ ಮತ್ತು ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಗ್ರಾಫಿಕ್ಸ್ ಡಿಸೈನರ್ ಆಗಿ ಮತ್ತು ಇವೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದ ಅನುಭವ ಇರುವ ಶ್ರೀಷ, ’ತರಂಗಾಂತರಂಗ’ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿ ಜೊತೆಗೆ ಈ ಚಿತ್ರಕ್ಕೆ ನಿರ್ದೇಶನವನ್ನೂ ಮಾಡಿದ್ದಾರೆ. ಈಗಾಗಲೇ ’ತರಂಗಾಂತರಂಗ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣವಾಗಿದ್ದು, ಇದೀಗ ಈ ಚಿತ್ರದ ಮೊದಲ ಟೀಸರ್ ಬಿಡುಗಡೆ ಆಗಿದೆ.

 

’ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ’ದ ಅಧ್ಯಕ್ಷ ಎನ್.ಆರ್.ಕೆ ವಿಶ್ವನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ’ತರಂಗಾಂತರಂಗ’ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ’ತರಂಗಾಂತರಂಗ’ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರು ಹಾಜರಿದ್ದರು.

ಇದೇ ವೇಳೆ ಮಾತನಾಡಿದ ’ತರಂಗಾಂತರಂಗ’ ಚಿತ್ರದ ನಾಯಕ ನಟ ಮತ್ತು ನಿರ್ದೇಶಕ ಶ್ರೀಷ, ’ಇದೊಂದು ಪುನರ್ಜನ್ಮದ ಕಥೆ ಹೊಂದಿರುವ ಚಿತ್ರ. ನಾವು ದೇವರಿಗೆ ಕಟ್ಟಿಕೊಂಡ ಹರಕೆ ಅಥವಾ ಸೇವೆಗಳನ್ನು ತೀರಿಸಲು ವಿಫಲವಾದರೆ, ಅದರಿಂದ ಏನು ಆಗಬಹುದು ಎಂಬ ಕಥೆಯ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಹಿಸ್ಟರಿ, ಸಸ್ಪೆನ್ಸ್, ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಈ ಸಿನಿಮಾವನ್ನು ನಿರ್ದೇಶನ ಮಾಡಿ, ತೆರೆ ಮೇಲೆ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನೋಡುಗರಿಗೆ ಈ ಸಿನಿಮಾ ಹೊಸ ಅನುಭವ ಕೊಡಲಿದೆ’ ಎಂದು ಭರವಸೆಯ ಮಾತುಗಳನ್ನಾಡಿದರು.

 

’ತರಂಗಾಂತರಂಗ’ ಚಿತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ’ತರಂಗಾಂತರಂಗ’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಪ್ರಮೋದ್ ಶೆಟ್ಟಿ, ’ಯುವ ನಟ, ನಿರ್ದೇಶಕ ಶ್ರೀಷ ಮತ್ತು ಅವರ ತಂಡ ಸೇರಿಕೊಂಡು ಒಂದು ಒಳ್ಳೆಯ ಸಿನಿಮಾ ಮಾಡಿದ್ದಾರೆ. ನಾನು ಈ ಚಿತ್ರತಂಡದ ಭಾಗವಾಗಿರುವುದಕ್ಕೆ ಖುಷಿಯಿದೆ. ಯುನಿಫಾರ್ಮ್ ಧರಿಸಿಕೊಂಡು ಈ ಸಿನಿಮಾದ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರತಂಡದ ಜೊತೆ ಕೆಲಸ ಮಾಡಿದ್ದು ಒಂದು ಒಳ್ಳೆಯ ಅನುಭವ’ ಎಂದರು.

 

ಉಳಿದಂತೆ ನಟಿ ಚೆರಿಕಾ ಮೂರ್ತಿ, ಛಾಯಾಗ್ರಹಕ ವೆಂಕಟೇಶ್ ಸೇರಿದಂತೆ ಚಿತ್ರದ ಹಲವು ಕಲಾವಿದರು ಮತ್ತು ತಂತ್ರಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

 

’ತರಂಗಾಂತರಂಗ’ ಚಿತ್ರದಲ್ಲಿ ನಟ ಶ್ರೀಷ ಅವರಿಗೆ ಚೆರಿಕಾ ಮೂರ್ತಿ ಮತ್ತು ಯಶಸ್ವಿನಿ ಸ್ವಾಮಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟರಾದ ರಮೇಶ್ ಪಂಡಿತ್, ಪ್ರಭಾಕರ ಕುಂದರ್, ಲಿಖಿತಾ ಶೆಟ್ಟಿ, ಮುರಳಿ ಮತ್ತಿತರರು ಇತರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿ ಮರೆಯಾದ ನಟರಾದ ದಿವಂಗತ ದಿನೇಶ್ ಮಂಗಳೂರು ಮತ್ತು ದಿವಂಗತ ರಾಕೇಶ್ ಪೂಜಾರಿ ಕೂಡ ಕೊನೆಯದಾಗಿ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದು ವಿಶೇಷ.

 

ಸದ್ಯ ಟೀಸರ್ ಬಿಡುಗಡೆ ಮಾಡಿ, ’ತರಂಗಾಂತರಂಗ’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಮುಂದಿನ ಜನವರಿ ತಿಂಗಳಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆ ಹಾಕಿಕೊಂಡಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,