Kaandhari.News

Thursday, September 10, 2026

 

*ಉತ್ತರ ಕನ್ನಡ ಜಿಲ್ಲೆಯನ್ನು ಬಣ್ಣಿಸಲು ಪದಗಳು ಸಾಲದು - ಹಿರಿಯ ನಟ ದೊಡ್ಡಣ್ಣ*

 

      1801 ರಿಂದ 2026ರ ವರೆಗಿನ ಮೂರು ಕಾಲಘಟ್ಟ, ಉತ್ತರ ಕನ್ನಡ ಜಿಲ್ಲೆಯ ನೆಲದ ಕಥೆಯನ್ನು ಸಾರುವ *’ಕಾನ್ಧಾರಿ’* ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಹಿರಿಯ ನಟ ದೊಡ್ಡಣ್ಣ ಟ್ರೇಲರ್ ಬಿಡುಗಡೆ ಮಾಡಿ, ಜಿಲ್ಲೆಯ ಬಗ್ಗೆ ಸಕರಾತ್ಮಕವಾಗಿ ಖುಷಿ ಹಂಚಿಕೊಂಡರು. ಅಲ್ಲಿನವರೇ ಆಗಿರುವ *ಸುಪ್ರೀತ್ ಹೆಗಡೆ ಸೋಮನಮನೆ ಅವರು ಅಖ್ಯಾನ  ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ* ಮಾಡಿದ್ದಾರೆ. *ಪರಿಕಲ್ಪನೆ ಮತ್ತು ನಿರ್ದೇಶನ ವಿನಾಯಕ ಹೆಗಡೆ ಬೊಮ್ಮನಳ್ಳಿ* ಅವರದಾಗಿದೆ. ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಹಿರಿಯ  ಐಎಎಸ್ ಅಧಿಕಾರಿ ಸಂಜಯ ಶೆಟ್ಟನ್ನವರ್ ಮತ್ತು ಇತಿಹಾಸಕಾರ ಹಾಗೂ ಚಿತ್ರಕ್ಕೆ ಮಾಹಿತಿ ಒದಗಿಸಿರುವ ಲಕ್ಷೀಶ ಸೊಂದಾ ಉಪಸ್ತಿತರಿದ್ದು ಔಪಚಾರಿಕವಾಗಿ ಒಂದಷ್ಟು ವಿಷಯಗಳನ್ನು ಹಂಚಿಕೊಂಡರು. ’ಕರ್ನಾಟಕದ ಕವಿತೆ ಇದು’ ಎಂಬ ಅಡಿಬರಹ ಇರಲಿದೆ.

 

        ದೊಡ್ಡಣ್ಣ ಮಾತನಾಡಿ ’ಒಂದು ಮುತ್ತಿನ ಕಥೆ’ ಚಿತ್ರೀಕರಣ ಸಮಯದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಹೋಗಿದ್ದುಂಟು. ಆಗ ಅಲ್ಲಿಯ ಜನರ ಗುಣ, ಸಂಸ್ಕ್ರತಿ ಕಂಡು ಖುಷಿಯಾಗಿತ್ತು. ಮತ್ತೆ ಅಲ್ಲಿಗೆ ಹೋಗುವ ಅವಕಾಶ ಸಿಗಲಿಲ್ಲ. ಈಗ ಈ ಸಿನಿಮಾದ ತುಣುಕುಗಳನ್ನು ನೋಡಿದ ಮೇಲೆ ನನ್ನ ಸ್ವಂತ ಖರ್ಚಿನಲ್ಲಿ ಖಂಡಿತ ಭೇಟಿ ಕೊಡುತ್ತೇನೆ. ನಿರ್ದೇಶಕರ ಸಾಮರ್ಥ್ಯ, ಅದರಲ್ಲೂ ಛಾಯಾಗ್ರಾಹಕರ ಕೈಚಳಕ ಅದ್ಬುತವಾಗಿದೆ. ಇದನ್ನು ಬಣ್ಣಿಸುವುದು ಅಸಾಧ್ಯ. ಪ್ರಕೃತಿ ಅಂದರೆ ತಾಯಿ. ನಮ್ಮ ತಾಯಿಯನ್ನು ಉಳಿಸುವುದು ಎಲ್ಲರ ಹೊಣೆಯಾಗಿದೆ. ಇಲ್ಲದಿದ್ದರೆ ಮುಂದಿನ ಜನಾಂಗದವರು ಶಾಪ ಹಾಕುತ್ತಾರೆ. ’ರಾಮನಡಿ ಇಟ್ಟ ಭೂಮಿ’ ಎಂಬ ಡಿವಿಜಿರವರ ಮಂಕುತಿಮ್ಮನ ಕಗ್ಗವನ್ನು ಪ್ರಸ್ತಾಪಿಸಿಕೊಂಡು, ಪರಿಸರವನ್ನು ನಾಶ ಮಾಡಬೇಡಿ. ಅದನ್ನು ಕಾಪಾಡಬೇಕೆಂದು ಕರೆ ನೀಡಿ, ಮಾಧ್ಯಮದವರು ಇದನ್ನು ಎಲ್ಲಾ ಕಡೆ ಪಸರಿಸಬೇಕೆಂದು ಕೋರಿಕೊಂಡರು.

     ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ಎರಡು ವರ್ಷದ ಕಠಿಣ ಪಯಣ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಇಲ್ಲಿನ ಜಿಲ್ಲೆಯಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಕಲೆ, ಸಾಹಿತ್ಯ ಮತ್ತು ಸಂಸ್ಕ್ರತಿ, ಇವುಗಳಲ್ಲಿ ಸಾಕಷ್ಟು ಪ್ರಥಮಗಳು ಅಡಕವಾಗಿದೆ. 1600 ವರ್ಷಗಳ ಹಿಂದೆ ಇದೇ ಜಿಲ್ಲೆಯ ವನವಾಸಿ ಕರ್ನಾಟಕದ ರಾಜಧಾನಿಯಾಗಿತ್ತು, ಸಾಮ್ರಾಜ್ಯ ಕಟ್ಟಿದ್ದು, ಬೆಳವಾಡಿ ಮಲ್ಲಮ್ಮ ಮಹಿಳಾ ಸೈನ್ಯ ಕಟ್ಟಿದ್ದು, ಬ್ರಿಟಿಷರನ್ನು ಸೋಲಿಸಿದ ಸದಾಶಿವರಾಯ ಹೀಗೆ ಮೊದಲು ಎಂಬುದು ಹಲವು ರೋಚಕ ಸಂಗತಿಗಳು ಇರಲಿದೆ. ಪ್ರತಿಯೊಬ್ಬರಿಗೂ ಇತಿಹಾಸದ ಅರಿವು ಇರಬೇಕು ಎನ್ನುವ ದೃಷ್ಟಿಯಿಂದ ಚಿತ್ರ ಮಾಡಲಾಗಿದೆ. ಕರ್ನಾಟಕದಲ್ಲಿ ಹನ್ನೊಂದು ಟ್ರೈಬಲ್ ಜನಾಂಗದವರು ಇದ್ದು, ಅದರಲ್ಲಿ ಐದು ನಮ್ಮಲ್ಲಿ ವಾಸವಾಗಿರುತ್ತಾರೆ. ಪ್ರತಿ ಇಪ್ಪತ್ತು ವರ್ಷಕ್ಕೊಮ್ಮೆ ಇತಿಹಾಸ ಕಟ್ಟಿದಂತ ದಾಖಲೆ ಶೇಖರಿಸಬೇಕು. ಇಲ್ಲದಿದ್ದರೆ ಮುಂದಿನ ಜನಾಂಗಕ್ಕೆ ತಿಳಿಯದೆ ಹೋಗುತ್ತದೆ. ಎರಡು ಹಾಡುಗಳು ಇರಲಿದೆ. ಭಟ್ಕಳದಿಂದ ವನವಾಸಿವರೆಗೆ ಕ್ಯಾಮಾರ ಓಡಾಡಿದೆ. ಮೂರು ಕಾಲಘಟ್ಟ, ಒಂದು ನೆಲೆ, ಅಸಂಖ್ಯ ಕಥೆಗಳನ್ನು ತೋರಿಸಲಾಗಿದೆ. ಇದು ಕೇವಲ ಸಿನಿಮಾ ಮಾತ್ರವಲ್ಲ. ಒಂದು ನೆಲದ ಶಾಶ್ವತ ದಾಖಲೆ ಎನ್ನಬಹುದು ಅಂತ ವಿನಾಯಕ ಹೆಗಡೆ ಬೊಮ್ಮನಳ್ಳಿ ಸವಿವರವಾಗಿ ಮಾಹಿತಿ ನೀಡಿದರು.

 

      ನಿರ್ಮಾಪಕ ಹಾಗೂ ನಿರ್ದೇಶಕರು ಹೊರತುಪಡಿಸಿದರೆ, ಮಿಕ್ಕವರೆಲ್ಲರೂ  ಚಿತ್ರರಂಗದ ಹಿರಿಯ ತಂತ್ರಜ್ಞರು ಕೆಲಸ ಮಾಡಿರುವುದು ವಿಶೇಷ. ಸಂಗೀತ ಹರ್ಷವರ್ಧನ್ ರಾಜ್, ಛಾಯಾಗ್ರಹಣ ಸತೀಶ್, ಸಂಕಲನ ಕೆ.ಎಂ.ಪ್ರಕಾಶ್, ಸಾಹಿತ್ಯ ಕವಿರಾಜ್, ಸಂತೋಷ್ ಅವರದಾಗಿದೆ. ಹಿಲ್ಲಿವುಡ್ ಪಿಕ್ಚರ್ಸ್ ಮುಖಾಂತರ ಚಿತ್ರವು ಇದೇ 18ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,