Shikhandi.Film News

Tuesday, May 05, 2026

 

*ಶೀರ್ಷಿಕೆಯಲ್ಲೇ ಎಲ್ಲರ ಗಮನ ಸೆಳೆದಿರುವ "ಶಿಖಂಡಿ" ಮೇ 15 ರಂದು ತೆರೆಗೆ*

.

 *ಪೋಲಾ ಪ್ರವೀಣ್ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಗುರುಮೂರ್ತಿ ವಿ ನಿರ್ದೇಶನ*

.

ಪೋಲಾ ಪ್ರವೀಣ್ ಕುಮಾರ್ ನಿರ್ಮಾಣದ ಹಾಗೂ ಗುರುಮೂರ್ತಿ ವಿ ನಿರ್ದೇಶನದ "ಶಿಖಂಡಿ" ಚಿತ್ರ ಇದೇ ಮೇ 15 ರಂದು ಬಿಡುಗಡೆಯಾಗುತ್ತಿದೆ. ಅದಕ್ಕೆ ಪೂರ್ವಭಾವಿಯಾಗಿ ಚಿತ್ರದ ಹಾಡು ಹಾಗೂ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಶ್ರವಣಬೆಳಗೊಳದ ಶಾಸಕರಾದ ಸಿ.ಎನ್ ಬಾಲಕೃಷ್ಣ ಹಾಗೂ ಸಾಯಿ ಸತೀಶ್ ದೊಡ್ಡಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.  ಹಾಡು ಹಾಗೂ ಟ್ರೇಲರ್ ಅನಾವರಣದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

 

ಮಹಾಭಾರತದಲ್ಲಿ ಬರುವ "ಶಿಖಂಡಿ" ಪಾತ್ರವನ್ನು ಆಧರಿಸಿರುವ ಕಥಾಹಂದರ ಹೊಂದಿರುವ ಹಾಗೂ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ. ಚಿತ್ರ ಉತ್ತಮವಾಗಿ ಮೂಡಿಬರಲು ಕಲಾವಿದರು ಹಾಗೂ ತಂತ್ರಜ್ಞರ ಸಹಕಾರವೇ ಕಾರಣ. ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್ ಅವರು ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಅವರಿಗೆ ವಿಶೇಷ ಧನ್ಯವಾದ. ಯುವರಾಜ್ ಎಂಬ ಯುವಪ್ರತಿಭೆ ನಾಯಕನಾಗಿ, ಖ್ಯಾತಿ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಹಾಡುಗಳು ಹಾಗೂ ಟ್ರೇಲರ್ ಮೂಲಕ ಮೆಚ್ಚುಗೆ ಪಡೆದುಕೊಂಡಿರುವ ನಮ್ಮ ಚಿತ್ರ ಮೇ 15 ರಂದು ಕನ್ನಡದಲ್ಲಿ ಮೊದಲು ಬಿಡುಗಡೆಯಾಗುತ್ತಿದೆ. ಆನಂತರ ಉಳಿದ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ  ತೆರೆಗೆ ಬರಲಿದೆ. "ಮಾಲಾಶ್ರೀ" ಅಭಿನಯದ "ಮಾರಕಾಸ್ತ್ರ" ನಂತರ ನಾನು ನಿರ್ದೇಶಿಸಿರುವ ಎರಡನೇ ಚಿತ್ರವಿದು. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಗುರುಮೂರ್ತಿ.                         

ಹೋಟೆಲ್ ಉದ್ಯಮಿಯಾಗಿರುವ ನಾನು ಈ ಚಿತ್ರದ ಮೂಲಕ ನಿರ್ಮಾಪಕನಾಗಿದ್ದೇನೆ. ಇದಕ್ಕೆ ಕಾರಣ ಇಂದು ಬಿಡುಗಡೆಯಾಗಿರುವ ಯಲ್ಲಮ್ಮ ತಾಯಿಯ ಹಾಡು. ಈ ಚಿತ್ರ ನಿರ್ಮಾಣ‌ ಮಾಡಲು ನನ್ನನ್ನು ಗುರುಮೂರ್ತಿ ಅವರು ಎರಡು ತಿಂಗಳಿನಿಂದ ಸಂಪರ್ಕಿಸುತ್ತಿದ್ದರು. ಆದರೆ ಅವರು ಎರಡು ತಿಂಗಳ ನಂತರ  ಬಂದಾಗ ಯಲ್ಲಮ್ಮ ತಾಯಿಯ ಹಾಡನ್ನು ಕೇಳಿಸಿದರು. ಹಾಡು ಕೇಳಿದ ತಕ್ಷಣ ಒಪ್ಪಿಕೊಂಡೆ. ನನ್ನ ಕುಟುಂಬ ಹಾಗೂ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಾನು ಕೂಡ ಈ ಚಿತ್ರದಲ್ಲಿ ನಟಿಸಿದ್ದೇನೆ. ಇದೇ ಮೇ 15 ರಂದು ಚಿತ್ರ ತೆರೆಗೆ ಬರುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್ ತಿಳಿಸಿದರು.        

                                 ‌   ‌‌‌‌                                         ಮೂಲತಃ ಮೈಸೂರಿನವನಾದ ನನಗೆ ನಾಯಕನಾಗಬೇಕೆಂಬ ಹಂಬಲವಿತ್ತು. ಆ ಆಸೆ ಈ ಚಿತ್ರದ ಮೂಲಕ ಈಡೇರಿದೆ. ಸೂರ್ಯ ನನ್ನ ಪಾತ್ರದ ಹೆಸರು. ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದರು ನಾಯಕ ಯುವರಾಜ್ ಗೌಡ.

 

"ಶಿಖಂಡಿ" ನನಗೂ ಸಹ ಮೊದಲ ಚಿತ್ರ ಎಂದು ನಾಯಕಿ ಖ್ಯಾತಿ ತಿಳಿಸಿದರು. ಉತ್ತಮ ಪಾತ್ರದಲ್ಲಿ ನಟಿಸಿರುವುದಕ್ಕೆ ಖುಷಿಯಾಗಿದೆ ಎಂದು ನಟಿ ನಿಖಿತಾಸ್ವಾಮಿ ಹೇಳಿದರು. ತಮ್ಮ ಪಾತ್ರದ ಬಗ್ಗೆ "ಬಿಗ್ ಬಾಸ್" ಖ್ಯಾತಿಯ ನೀತು, ವೇದ ಹಾಗೂ ಬಳ್ಳಾರಿಯ ಚಾಂದಿನಿ ವಿವರಣೆ ನೀಡಿದರು. ಮೊದಲ ಬಾರಿಗೆ ಮಂಗಳಮುಖಿ ಪಾತ್ರದಲ್ಲಿ ಅಭಿನಯಿಸಿರುವುದಾಗಿ ನಟ ರಾಘವೇಂದ್ರ (ರಾಘು) ಹೇಳಿದರು. ಯಲ್ಲಮ್ಮ ಹಾಡಿನ‌ ಗೀತರಚನೆಕಾರ ಹಾಗೂ ಸಂಗೀತ ನಿರ್ದೇಶಕ ಮಂಜು ಕವಿ ಹಾಡಿನ ಕುರಿತು ಮಾಹಿತಿ ನೀಡಿದರು. ಸಹ ನಿರ್ಮಾಪಕಿ ಪೋಲಾ ಲಕ್ಷ್ಮೀ, ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್ ಅವರ ಪುತ್ರ ಕರಣ್, ಸೊಸೆ ಹಾಗೂ ಮಗಳು ನಮ್ರತಾ ಸಮಾರಂಭದಲ್ಲಿ ಉಪಸ್ಥಿತರಿದ್ದರು

 

Copyright@2018 Chitralahari | All Rights Reserved. Photo Journalist K.S. Mokshendra,