Dodmansa.Film News

Monday, April 20, 2026

 

 

*ಟೀಸರಿನಲ್ಲಿ ಎಂಟ್ರಿಕೊಟ್ಟ ‘ದೊಡ್ಮನ್ಸ’*

 

*ಬೆಂಗಳೂರಿನ ಆಟೋ ಡ್ರೈವರಿನ ಬದುಕಿನ ಜೀವನ ‘ಚಿತ್ರ’ಣ*

 

*ಹೊರಬಂತು ‘ದೊಡ್ಮನ್ಸ’ ಚಿತ್ರದ ಟೀಸರ್*

 

*ಹೊಸ ಪ್ರತಿಭೆಗಳ ‘ದೊಡ್ಮನ್ಸ’ ತೆರೆಗೆ ಬರಲು ರೆಡಿ*

 

ಯುವ ಪ್ರತಿಭೆ ಶರತ್ ಕೃಷ್ಣ ನಟನೆ ಮತ್ತು ನಿರ್ದೇಶನ ಹೊಸಚಿತ್ರ ‘ದೊಡ್ಮನ್ಸ’ ತೆರೆಗೆ ಬರಲು ಸಿದ್ದವಾಗಿದೆ. ಈಗಾಗಲೇ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ‘ದೊಡ್ಮನ್ಸ’ ಚಿತ್ರದ ಮೊದಲ ಟೀಸರ್ ಅನ್ನು ಬಿಡುಗೊಳಿಸಿದೆ.

 

ಬೆಂಗಳೂರಿನಲ್ಲಿರುವ ಆಟೋ ಡ್ರೈವರ್ ಒಬ್ಬನ ಜೀವನದಲ್ಲಿ ನಡೆಯುವ ಘಟನೆಗಳ ಸುತ್ತ ನಡೆಯುವ ಕಾಲ್ಪನಿಕ ಕಥಾಹಂದರವನ್ನು ಹೊಂದಿರುವ ‘ದೊಡ್ಮನ್ಸ’ ಚಿತ್ರದಲ್ಲಿ ನಾಯಕ ನಟ ಕಂ ನಿರ್ದೇಶಕ ಶರತ್ ಕೃಷ್ಣ ಆಟೋ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ರೇಷ್ಮಾ ಲಿಂಗರಾಜಪ್ಪ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಉಳಿದಂತೆ ಹುಲಿ ಕಾರ್ತಿಕ್, ಬಲರಾಜವಾಡಿ, ಶಿಲ್ಪಾ  ಮೊದಲಾದ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

 

‘ದೊಡ್ಮನ್ಸ’ ಚಿತ್ರದ ಟೀಸರ್ ಬಿಡುಗಡೆ ವೇಳೆ ಮಾತನಾಡಿದ ಚಿತ್ರದ ನಾಯಕ ನಟ ಕಂ ನಿರ್ದೇಶಕ ಶರತ್ ಕೃಷ್ಣ, ‘ಸಾಮಾನ್ಯ ಆಟೋ ಡ್ರೈವರ್ ಒಬ್ಬನ ಜೀವನದಲ್ಲಿ ಹೇಗೆ ದೊಡ್ಡ ಮನುಷ್ಯನಾಗುತ್ತಾನೆ. ಸಾಮಾನ್ಯ ಮನುಷ್ಯನೊಬ್ಬ ಜೀವನದಲ್ಲಿ ಯಾವುದರಿಂದ ‘ದೊಡ್ಮನ್ಸ’ ಆಗುತ್ತಾನೆ ಅನ್ನೋದೆ ಈ ಚಿತ್ರ. ಪಕ್ಕಾ ಮಾಸ್ ಎಂಟರ್ಟೈನ್ಮೆಂಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ.  ಎಂಬುದು ‘ದೊಡ್ಮನ್ಸ’ ಚಿತ್ರದ ನಾಯಕ ನಟ ಕಂ ನಿರ್ದೇಶಕ ಶರತ್ ಕೃಷ್ಣ ಮಾತು.

‘ದೊಡ್ಮನ್ಸ’ನ ಬಗ್ಗೆ ಮಾತನಾಡಿದ ನಾಯಕ ನಟಿ ರೇಷ್ಮಾ ಲಿಂಗರಾಜಪ್ಪ, ‘ಸಾಮಾನ್ಯವಾಗಿ ಬಹುತೇಕ ಸಿನಿಮಾಗಳಲ್ಲಿ ನಾಯಕ ನಟಿಯರಿಗೆ ಪಾತ್ರದ ಪ್ರಾಮುಖ್ಯತೆ ಕಡಿಮೆಯಿರುತ್ತದೆ. ಆದರೆ ಈ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಅದರದ್ದೇ ಆದ ಪ್ರಾಮುಖ್ಯತೆಯಿದೆ. ಸಿನಿಮಾ ತುಂಬ ಚೆನ್ನಾಗಿ ಬಂದಿದ್ದು, ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದ್ದೇವೆ’ ಎಂದರು.

 

‘ದೊಡ್ಮನ್ಸ’ ಚಿತ್ರದ ಚಿತ್ರೀಕರಣ ಅನುಭವಗಳ ಬಗ್ಗೆ ಮಾತನಾಡಿದ ನಟ ಹುಲಿ ಕಾರ್ತಿಕ್, ‘ಈ ಚಿತ್ರದ ನಾಯಕ ನಟ ಮತ್ತು ನಿರ್ದೇಶಕ ಶರತ್ ಕೃಷ್ಣ, ಇಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಈ ಸಿನಿಮಾ ಮಾಡಿದ್ದಾರೆ. ಸಿನಿಮಾದ ಆರಂಭದಿಂದ ಅಂತ್ಯದವರೆಗೂ ಈ ಚಿತ್ರತಂಡದ ಪ್ರಯಾಣದಲ್ಲಿ ಜೊತೆಯಾಗಿದ್ದು, ಅದರ ಕಷ್ಟಗಳು, ಏಳು-ಬೀಳುಗಳನ್ನು ಹತ್ತಿರದಿಂದ ಕಂಡಿದ್ದೇನೆ. ಈ ಸಿನಿಮಾ ಖಂಡಿತವಾಗಿಯೂ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

 

‘ದೊಡ್ಮನ್ಸ’ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಶ್ರೀಧರ ಕಶ್ಯಪ್ ಮತ್ತು ಅಲೆಕ್ಸ್ ಸಂಗೀತ ಸಂಯೋಜಿಸಿದ್ದಾರೆ. ಅಲ್ಟಿಮೇಟ್ ಶಿವು, ಜಾಗ್ವಾರ್ ಸಣ್ಣಪ್ಪ ಚಿತ್ರಕ್ಕೆ ಸಾಹಸ ಸಂಯೋಜಿಸಿದ್ದಾರೆ.

ಆನಂದ ಇಳಯರಾಜ ಛಾಯಾಗ್ರಹಣ, ವೇದಿಕ್ ಸಂಕಲನ ‘ದೊಡ್ಮನ್ಸ’ ಚಿತ್ರಕ್ಕಿದೆ. ‘ವೇದಿಕ್ ಕಾಸ್ಮೋಸ್’ ಬ್ಯಾನರಿನಲ್ಲಿ ವೇದಿಕ್ ವೀರ್ ನಿರ್ಮಿಸಿರುವ ‘ದೊಡ್ಮನ್ಸ’ ಚಿತ್ರಕ್ಕೆ ಕವಿತಾ ಮಂಜುನಾಥ್ ಸಹ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ.

 

ಬೆಂಗಳೂರು, ಅಹಮದಬಾದ್ ಸುತ್ತಮುತ್ತ ‘ದೊಡ್ಮನ್ಸ’ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಟೀಸರ್ ಬಿಡುಗಡೆ ಮೂಲಕ ‘ದೊಡ್ಮನ್ಸ’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಶೀಘ್ರದಲ್ಲಿಯೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,