Bengaluru inn.Film News

Saturday, April 11, 2026

 

*ಬೆಂಗಳೂರು ಇನ್: ರೋಚಕ ಮರ್ಡರ್ ಮಿಸ್ಟರಿ ಕಥೆಯ ಟ್ರೈಲರ್ ಬಿಡುಗಡೆ ಮಾಡಿದ ಅಹಿಂಸ ಚೇತನ್,

ಏ.17ಕ್ಕೆ ಚಿತ್ರ ತೆರೆಗೆ*

 

 

 

ಧರ್ಮ ಕೀರ್ತಿರಾಜ್ ಅಭಿನಯದ ಬೆಂಗಳೂರಿನಲ್ಲಿ ನಡೆಯುವ ರೋಚಕ ಮರ್ಡರ್ ಮಿಸ್ಟರಿ ಸಸ್ಪೆನ್ಸ್ ಥ್ರಿಲ್ಲರ್ ’ಬೆಂಗಳೂರು ಇನ್’ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಇದೇ ತಿಂಗಳ 17ಕ್ಕೆ ಚಿತ್ರ ತೆರೆ ಕಾಣುತ್ತಿದ್ದು, ಬೆಂಗಳೂರಿನ ಮಾಗಡಿ ರಸ್ತೆಯ ಉತ್ಸವ್ ಲೆಗೆಸಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ "ಮೈನಾ" ಖ್ಯಾತಿಯ ಅಹಿಂಸಾ ಚೇತನ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದರು. ಒಬ್ಬ ಫುಡ್ ಡೆಲಿವರಿ ಏಜೆಂಟ್ ಸುತ್ತ ಕಥೆ ಹೆಣೆಯುವ ಈ ಚಿತ್ರ, ಆಧುನಿಕ ನಗರದ ಅಂಧಕಾರವನ್ನು ಬಯಲಿಗೆಳೆಯುವ ಪ್ರಯತ್ನದಲ್ಲಿದೆ. ಕಾರ್ತಿಕ್ ಕೆ. ಮೂರ್ತಿ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ಈ ಮೊದಲು ಅವರು ಪ್ರೆಸೆಂಟ್ ಪ್ರಪಂಚ 0% ಲವ್ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಗಳಿಸಿದ್ದರು. ಧರ್ಮ ಕೀರ್ತಿರಾಜ್ ಈ ಚಿತ್ರದ ನಾಯಕನಾಗಿದ್ದರೆ, ರಿಷಾ ಗೌಡ ಮತ್ತು ಅನುಷಾ ರೈ ಧರ್ಮ ಕೀರ್ತಿರಾಜ್ಗೆ ನಾಯಕಿಯರಾಗಿದ್ದಾರೆ. ಹಿರಿಯ ನಟ ಶಶಿಕುಮಾರ್ ಚಿತ್ರದಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷಾ ರೈ ಈ ಚಿತ್ರದಲ್ಲಿ ಪತ್ರಿಕಾ ವರದಿಗಾರ್ತಿಯಾಗಿ ಅಭಿನಯಿಸಿದ್ದಾರೆ. ಏಪ್ರಿಲ್ 17 ರಂದು ಚಿತ್ರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

 

ನಿರ್ಮಾಪಕ ವೆಂಕಟೇಶಮೂರ್ತಿ ಮಾತನಾಡಿ "ನಾನು ಕಷ್ಟಪಟ್ಟು ಇಷ್ಟಪಟ್ಟು ಈ ಸಿನಿಮಾ ಮಾಡಿದ್ದೇನೆ. ಈಗ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ಸಿಗಬೇಕಿದೆ" ಎಂದು ಹೇಳಿದರು.

 

ನಿಜ ಜೀವನದ ಒಂದು ಘಟನೆ ಈ ಚಿತ್ರಕ್ಕೆ ಸ್ಕ್ರಿಪ್ಟ್ ಬರೆಯಲು ನನಗೆ ಸ್ಫೂರ್ತಿ ನೀಡಿತು ಎಂದು ನಿರ್ದೇಶಕ ಕಾರ್ತಿಕ್ ಹೇಳಿದರು. "ನಾನು ಧರ್ಮ ಕೀರ್ತಿರಾಜ್ ಅವರಿಗೆ ಸ್ಕ್ರಿಪ್ಟ್ ಹೇಳಿದಾಗ ಅವರು ಗ್ರೀನ್ ಸಿಗ್ನಲ್ ನೀಡಿದರು. ಈ ಸಿನಿಮಾದಲ್ಲಿ ಪೋಷಕರಿಗೆ ಒಂದು ಸಂದೇಶವಿದೆ. ಜೊತೆಗೆ ಕಮರ್ಷಿಯಲ್ ಅಂಶಗಳು ಮತ್ತು ಮನರಂಜನೆಯೂ ಇದ್ದು, ಮಾಧ್ಯಮದ ಮಿತ್ರರು ಸೇರಿದಂತೆ ಪ್ರತಿಯೊಬ್ಬರ ಬೆಂಬಲ ನಮ್ಮ ಚಿತ್ರಕ್ಕಿರಲಿ" ಎಂದು ನಿರ್ದೇಶಕರು ಕೇಳಿಕೊಂಡರು.

ನಾಯಕ ನಟ ಧರ್ಮ ಕೀರ್ತಿರಾಜ್ ಮಾತನಾಡಿ "ವೆಂಕಟೇಶಮೂರ್ತಿ ಹಾಗೂ ಕಾರ್ತಿಕ್ ಸೇರಿ ಈ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಈ ಹಿಂದೆ ನಿರ್ಮಾಪಕರು ಮತ್ತು ನಾನು "ಚಾಣಾಕ್ಷ" ಎನ್ನುವ ಸಿನಿಮಾ ಮಾಡಿದ್ದೆವು, ಆದರೆ ಈ ಸಿನಿಮಾದ ಕಥೆ ಅದಕ್ಕಿಂತ ತೀರಾ ವಿಭಿನ್ನವಾಗಿದೆ. ಕಾರ್ತಿಕ್ ಕಾರ್ಪೊರೇಟ್ ಬದುಕನ್ನು ತೊರೆದು ಚಿತ್ರನಿರ್ದೇಶಕರಾಗಿದ್ದಾರೆ. ಚಿತ್ರತಂಡದ ಎಲ್ಲರೂ ಒಟ್ಟಾಗಿ ಈ ಚಿತ್ರ ಸುಂದರವಾಗಿ ಮೂಡಿಬಂದಿದೆ. ಚಿತ್ರದಲ್ಲಿ ನನ್ನದು ಪಿಜ್ಜಾ ಡೆಲಿವರಿ ಬಾಯ್ ಪಾತ್ರ. ಅವನು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆನ್ನುವ ಮನೋಭಾವದಲ್ಲಿರುವ ವ್ಯಕ್ತಿ. ಹಾಗೆ ಸಿನಿಮಾ ಕಥೆ ಸಾಗುತ್ತದೆ. ಇದರಲ್ಲೊಂದು ಲವ್ ಸ್ಟೋರಿ ಸಹ ಇದೆ. ಒಟ್ಟಾರೆ ಪ್ರೇಕ್ಷಕರಿಗೆ ಬೇಕಾಗುವ ಅಂಶಗಳೆಲ್ಲಾ ಇದರಲ್ಲಿದೆ. ಪ್ರತಿಯೊಬ್ಬರೂ ಬಹಳ ಡೆಡಿಕೇಟೆಡ್ ಆಗಿ ಸಿನಿಮಾ ಮಾಡಿದ್ದಾರೆ. ಹಾಗಾಗಿ ಈ ಸಿನಿಮಾ ಇಷ್ಟು ಉತ್ತಮವಾಗಿ ಬಂದಿದೆ. ಇನ್ನು ನಿಮ್ಮೆಲ್ಲರ ಸಹಕಾರ ಬೇಕಿದೆ" ಎಂದು ಹೇಳಿದರು.

 

"ನಾನೆಂದೂ ಕುಗ್ಗಿಲ್ಲ, ಮನೆಯಲ್ಲಿರುವ ತಂದೆ ನನಗೆ ಗುರುವಿನಂತೆ. ಹಾಗಾಗಿ ಯಶಸ್ಸು ಸಿಕ್ಕಲಿಲ್ಲ ಎನ್ನುವ ಬೇಸರವೂ ಇಲ್ಲ. ಇಪ್ಪತ್ತೈದು ಸಿನಿಮಾಗಳ ಪೈಕಿ ಯಾವ ಸಿನಿಮಾಗಳ ನಿರ್ದೇಶಕರ ಕುರಿತಂತೆಯೂ ನನಗೆ ಬೇಸರವಿಲ್ಲ. ಕೆಲ ಸಿನಿಮಾಗಳ ಸೋಲಿನ ನಂತರ ನಾನು ಚೆನ್ನೈನಲ್ಲಿ ವಾಸವಾಗಿದ್ದೆ, ಆದರೆ ವೆಂಕಟೇಶಮೂರ್ತಿ ಕರೆ ಮಾಡಿ "ಚಾಣಾಕ್ಷ" ಸಿನಿಮಾದಲ್ಲಿ ಅವಕಾಶ ಕೊಟ್ಟರು. ಅಲ್ಲಿಂದೀಚೆಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದೇನೆ" ಎಂದು ನಟ ಧರ್ಮ ತಮ್ಮ ಜೀವನದ ಹಳೆಯ ದಿನಗಳನ್ನು ಮೆಲುಕು ಹಾಕಿದರು.

 

ನಾಯಕಿ ರಿಷಾ ಗೌಡ ಮಾತನಾಡಿ "ಇದು ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದ ಚಿತ್ರ. ಇದು ನನ್ನ ಎರಡನೇ ಸಿನಿಮಾ. ಮೊದಲ ಸಿನಿಮಾ ಕ್ರೇಜಿ ಕೀರ್ತಿ ಮಾಡಿದ್ದರೂ ಅದು ಮೈಸೂರಿನಲ್ಲೇ ಶೂಟ್ ಆಗಿತ್ತು. ನಾನು ಬೆಂಗಳುರು ಇನ್ ಸಿನಿಮಾ ಮಾಡಿರದೆ ಇದ್ದರೆ ಚಿತ್ರೋದ್ಯಮದಲ್ಲಿ ನಾನಿರುತ್ತಿದ್ದೆನಾ ಎನ್ನುವ ಪ್ರಶ್ನೆ ನನಗಿದೆ. ಈ ಸಿನಿಮಾ ಮೂಲಕ ನನ್ನ ಲಕ್ ಬದಲಾಗಿದೆ. ಕಥೆ ಬಹಳ ವಿಭಿನ್ನವಾಗಿದೆ. ನಾನು ಕಥೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇನೆ. ಈ ಕಥೆ ನನಗೆ ತುಂಬಾ ಇಷ್ಟವಾಗಿದೆ. ಎರಡನೇ ಸಿನಿಮಾಗೆ ಧರ್ಮ ಅವರೊಡನೆ ಮಾಡುವ ಅವಕಾಶ ಸಿಕ್ಕುತ್ತದೆ ಎಂದು ನಾನು ಊಹಿಸಿರಲಿಲ್ಲ. ಅನುಷಾ ರೈ, ಬಾಲರಾಜವಾಡಿ, ಶಶಿಕುಮಾರ್ ಅವರಂತಹಾ ಹಿರಿಯರೊಡನೆ ನಟಿಸುವ ಅವಕಾಶಕ್ಕಾಗಿ ನಾನು ಸದಾ ಧನ್ಯ. ಎಂದು ಚಿತ್ರದ ನಿರ್ಮಾಪಕರಿಗೆ ಧನ್ಯವಾದ ಹೇಳಿದರು.

 

ಇನ್ನೊಬ್ಬ ನಾಯಕಿ ಅನುಷಾ ರೈ ಮಾತನಾಡಿ "ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಒಂದು ಬ್ಯೂಟಿಫುಲ್ ಲವ್ ಸ್ಟೋರಿ ಇರುವ ಸಿನಿಮಾ. ಬೆಂಗಳುರು ಇನ್ ಹೆಸರಲ್ಲಿ ಬೆಂಗಳುರು ಮಾತ್ರವಲ್ಲ ಎಲ್ಲಾ ಕಡೆಗಳಲ್ಲಿ ನಡೆಯುವ ಕಥೆ. ಇದರಲ್ಲಿ ಯುವಕರಿಗೆ ಒಂದು ಅವೇರ್ನೆಸ್ ಮೂಡಿಸುವ ಸಂಗತಿ ಇದೆ. ನಿರ್ದೇಶಕರು ಚೊಚ್ಚಲ ಚಿತ್ರವಾಗಿ ಬಹಳ ಉತ್ತಮವಾಗಿ ಸಿನಿಮಾ ಮಾಡಿದ್ದಾರೆ. ನಿರ್ಮಾಪಕರು ಒಂದು ಉತ್ತಮ ಚಿತ್ರವನ್ನು ಕನ್ನಡಕ್ಕೆ ತಂದಿದ್ದಲ್ಲದೆ, ತಾವು ಸಹ ಉತ್ತಮ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಒಟ್ಟಾರೆ ಚಿತ್ರ ಉತ್ತಮವಾಗಿ ಮೂಡಿ ಬಂದಿದ್ದು ನಿಮ್ಮೆಲ್ಲರ ಸಹಕಾರ ಇರಲಿ" ಎಂದು ಮನವಿ ಮಾಡಿಕೊಂಡರು.

 

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಟ ಚೇತನ್ ಅಹಿಂಸಾ "ನನಗೆ ನಿರ್ಮಾಪಕ ವೆಂಕಟೇಶಮೂರ್ತಿ ಐದು ವರ್ಷಗಳಿಂದ ಗೊತ್ತು. ಕೊರೋನಾ ಸಮಯದಲ್ಲಿ ಅವರೊಂದು ಸಿನಿಮಾ ಮಾಡಬೇಕೆಂದು ಹೇಳುತ್ತಿದ್ದರು. ಅವರಲ್ಲಿ ಸಿನಿಮಾ ಬಗ್ಗೆ ಇರುವ ಒಲವು, ಕಾಳಜಿ ನನಗೆ ಇಷ್ಟವಾಗಿದೆ. ಈಗ ಬೆಂಗಳೂರು ಇನ್ ಸಿನಿಮಾ ಬಂದಿದೆ. ಈ ಹೆಸರೇ ಕುತೂಹಲ ಮೂಡಿಸುತ್ತದೆ. ನಮಗಿಂದು ಇಂತಹ ಕಂಟೆಂಟ್ ಸಿನಿಮಾ ಬೇಕು. ಕಳೆದೆರಡು ಮೂರು ವರ್ಷಗಳಲ್ಲಿ ಕನ್ನಡ ಚಿತ್ರಗಳ ಗೆಲುವಿನ ಪ್ರಮಾಣ ಅತ್ಯಂತ ಕೆಳಮಟ್ಟದಲ್ಲಿದೆ. ಕೇವಲ ಐನೂರು ಕೋಟಿ ಸಾವಿರ ಕೋಟಿಯ ಸಿನಿಮಾ ಬಂದಾಗ ಚಿತ್ರರಂಗ ಬೆಳೆಯುವುದಿಲ್ಲ ಬದಲಾಗಿ ಬೆಂಗಳೂರು ಇನ್ ನಂತಹ ಕಂಟೆಂಟ್ ಸಿನಿಮಾಗಳು ಬರಬೇಕಿದೆ. ಇಡೀ ಚಿತ್ರತಂಡಕ್ಕೆ ಶುಭವಾಗಲಿ" ಎಂದು ಹರಸಿದರು.

 

ಎಂಆರ್ ಟಿ ಆಡಿಯೋ ಸಂಸ್ಥೆಯ ಲಹರಿ ವೇಲು ಅವರು ಮಾತನಾಡಿ "ಚಿತ್ರದ ಟ್ರೈಲರ್ ಬಹಳ ಚೆನ್ನಾಗಿ ಬಂದಿದೆ. ಚಿತ್ರತಂಡಕ್ಕೆ ಶುಭವಾಗಲಿ, ನಿರ್ಮಾಪಕರು ಎಷ್ಟು ಕಷ್ಟದಲ್ಲಿ ಈ ಸಿನಿಮಾ ಮಾಡಿದ್ದಾರೆ, ಅವರಿಗೂ ಒಳ್ಳೆಯದಾಗಲಿ" ಎಂದು ಶುಭ ಹಾರೈಸಿದರು.

 

ಪೈರಸಿ ನಿಯಂತ್ರಣ ಆಗಲೇಬೇಕು!

 

ಇತ್ತೀಚೆಗೆ ತಮಿಳು ಚಿತ್ರ "ಜನನಾಯಗನ್" ಪೈರಸಿ ಸಿನಿಮಾ ಲೀಕ್ ಆಗಿರುವ ಕುರಿತು ಮಾತನಾಡಿದ ಲಹರಿ ವೇಲು ಅವರು "ಚಿತ್ರ ಬಿಡುಗಡೆಗೆ ಮುನ್ನವೇ ಎಚ್.ಡಿ. ಕ್ವಾಲಿಟಿ ಚಿತ್ರ ಲೀಕ್ ಆಗಿದೆ ಎಂದಾದರೆ ಈ ತಪ್ಪು ಮಾಡಿದವರನ್ನು ಕ್ಷಮಿಸಬಾರದು. ನಿರ್ಮಾಪಕರ ಹೊಟ್ಟೆಗೆ ಹೊಡೆಯುವ ಇಂತಹ ಕೆಲಸಗಳನ್ನು ನಾವೆಂದೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಪೈರಸಿ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

 

ಬೆಂಗಳೂರು ಇನ್ ಚಿತ್ರಕ್ಕೆ ವೆಂಕಟೇಶಮೂರ್ತಿ ನಿರ್ಮಾಪಕರಾದರೆ ರಾಜೇಶ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ನವೀನ್ ಪಂಚಾಕ್ಷರಿ ಛಾಯಾಗ್ರಹಣವಿದ್ದು ಅಸಿಫ್ ಎ. ಕಾದರ್, ಅರವಿಂದ್ ಮುರಳಿ ಸಂಗೀತವಿದೆ. ಕುಮಾರ್ ಸಿ.ಕೆ ಚಿತ್ರದ ಸಂಕಲನಕಾರರಾಗಿದ್ದಾರೆ. ಶ್ರೀ ಸಾಯಿಬಾಬಾ ಸಿನಿ ಎಂಟರ್ಪ್ರೈಸಸ್ ಬ್ಯಾನರ್ನಲ್ಲಿ ನಿರ್ಮಾಣಗೊಂಡ ಈ ಚಿತ್ರದ ಆಡಿಯೋ ಹಾಗೂ ಟ್ರೈಲರ್ ಎಂಆರ್ ಟಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಲಭ್ಯವಿದೆ. ಚಿತ್ರ ಇದೇ ಶುಕ್ರವಾರ (ಏಪ್ರಿಲ್ 17) ತೆರೆ ಕಾಣಲಿದೆ..

 

Copyright@2018 Chitralahari | All Rights Reserved. Photo Journalist K.S. Mokshendra,