Rakky.Film News

Monday, June 29, 2026

 

*ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ "ರಕ್ಕಿ" ಚಿತ್ರದ ಟ್ರೇಲರ್ ಅನಾವರಣ*

 

ಅಶ್ವಿನಿ ಪುನೀತ್ ರಾಜಕುಮಾರ್ ಅವರ ಆಶೀರ್ವಾದದೊಂದಿಗೆ, ಎಸ್ ಎನ್ ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಾಲಿಗ್ರಾಮ ಸುರೇಶ್ ಅವರು ನಿರ್ಮಿಸಿರುವ,  ವೆಂಕಟ್ ಭಾರದ್ವಾಜ್ ನಿರ್ದೇಶನದಲ್ಲಿ ರಕ್ಕಿ ನಾಯಕನಾಗಿ ನಟಿಸಿರುವ "ರಕ್ಕಿ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಈ ಚಿತ್ರದ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಪಿ.ಆರ್.ಕೆ ಆಡಿಯೋದಲ್ಲಿ ಯೂಟ್ಯೂಬ್ ಚಾನಲ್ ನಲ್ಲಿ ಈ ಟ್ರೇಲರ್ ಲಭ್ಯವಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.  .

 

ಜರ್ಮನಿಯಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಸಾಲಿಗ್ರಾಮ ಮೂಲದ  ಸುರೇಶ್ ಅವರು ನನಗೆ ಇಪ್ಪತ್ತು ವರ್ಷಗಳ ಸ್ನೇಹಿತರು. ಅವರ ಮಗ ರಕ್ಕಿ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ನಾನು ಸುರೇಶ್ ಅವರ ಬಳಿ ಎರಡು ಕಥೆ ಹೇಳಿದ್ದೆ. ಅವರು ಈ ಕಥೆಯನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಳಿ ಹೇಳಿ. ಅವರು ಒಪ್ಪುವ ಕಥೆಯನ್ನು ಸಿನಿಮಾ ಮಾಡೋಣ ಎಂದರು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಚಿತ್ರದ ಕಥೆ ಕೇಳಿ ಚೆನ್ನಾಗಿದೆ ಅಂತ ಹೇಳಿದರು. ನಂತರ ಚಿತ್ರ ಆರಂಭವಾಯಿತು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮುಹೂರ್ತದ ದಿನ ಚಿತ್ರಕ್ಕೆ ಚಾಲನೆ ನೀಡಿದ್ದರು. ಇಂದು ಟ್ರೇಲರ್ ಬಿಡುಗಡೆ ಮಾಡಿ ಕೊಟ್ಟಿದ್ದಾರೆ ಅವರಿಗೆ ಹಾಗೂ ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ. ಚಿತ್ರೀಕರಣ ಹಾಗೂ ನಂತರದ ಕೆಲಸಗಳು ಪೂರ್ಣವಾಗಿ ಚಿತ್ರ ತೆರೆಗೆ ಬರಲು ಅಣಿಯಾಗಿದೆ.  ಸೆನ್ಸಾರ್ ಮಂಡಳಿ ಯಾವುದೇ ಕಟ್ ನೀಡದೆ U/A ಪ್ರಮಾಣಪತ್ರ ನೀಡಿದೆ. ಚಿತ್ರ ಜುಲೈ 10 ರಂದು ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ‌ ವೆಂಕಟ್ ಭಾರದ್ವಾಜ್ ತಿಳಿಸಿದರು.   

                                                                       ಚಿತ್ರದ ಆರಂಭದಿಂದಲೂ ತಮಗೆ ಬೆನ್ನೆಲುಬಾಗಿ ನಿಂತಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಧನ್ಯವಾದ ತಿಳಿಸಿ ಮಾತನಾಡಿದ ನಾಯಕ ರಕ್ಕಿ, ನನ್ನ ಹೆಸರು ರಕ್ಕಿ ಹಾಗೂ ಚಿತ್ರದ ಶೀರ್ಷಿಕೆಯೂ "ರಕ್ಕಿ". ಇದೊಂದು ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ನಾನು ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಹಾಗಂತ,‌ ಮಚ್ಚು ಹಿಡಿಯುವ ಗ್ಯಾಂಗ್ ಸ್ಟರ್ ಅಲ್ಲ. ಸ್ಟೈಲಿಶ್ ಗ್ಯಾಂಗ್ ಸ್ಟರ್. ವಯಸ್ಸಿನ ಮಿತಿ ಇಲ್ಲದೆ ಎಲ್ಲರೂ ನೋಡಬಹುದಾದ ಚಿತ್ರವಿದು. ಜರ್ಮನಿಯಲ್ಲಿ ಇದಕ್ಕೆ ಬೇಕಾದ ತಯಾರಿ ಮಾಡಿಕೊಂಡು ಇಲ್ಲಿಗೆ ಬಂದು ಪರೀಕ್ಷೆ ಬರೆದಿದ್ದೇನೆ. ಜುಲೈ 10 ರಂದು ರಿಸಲ್ಟ್ ಬರಲಿದೆ. ನನ್ನ ಚೊಚ್ಚಲ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

  

ನಾನು ಮೂಲತಃ ಸಾಲಿಗ್ರಾಮದವನು. ಐಟಿ ಉದ್ಯೋಗಿ. ಇಪ್ಪತ್ತು ವರ್ಷಗಳಿಂದ ಜರ್ಮನ್ ನಲ್ಲೇ ವಾಸಿಸುತ್ತಿದ್ದೇನೆ. ನನ್ನ ತಂದೆ ರಾಜಶೇಖರ್ ಅವರು ಡಾ||ರಾಜಕುಮಾರ್ ಅಭಿನಯದ "ಹೊಸಬೆಳಕು" ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈಗ ನಾನು "ರಕ್ಕಿ" ಚಿತ್ರವನ್ನು ನಿರ್ಮಾಣ ಮಾಡಿದ್ದೇನೆ. ನನ್ನ ಮಗ "ರಕ್ಕಿ" ನಾಯಕನಾಗಿ ನಟಿಸಿದ್ದಾನೆ. ನಿರ್ದೇಶಕ ವೆಂಕಟ್ ಭಾರದ್ವಾಜ್ ಒಂದೊಳ್ಳ ಕಥೆ ಮಾಡಿದ್ದಾರೆ. ನಮ್ಮ ಕುಟುಂಬದ ಸ್ನೇಹಿತರಾದ ಅಶ್ವಿನಿ ಪುನೀತ್ ರಾಜಕುಮಾರ್ ಸಹಕಾರ ಈ ಚಿತ್ರಕ್ಕೆ ಅಪಾರ. ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಹಾಗೂ ಇಡೀ "ರಕ್ಕಿ" ಚಿತ್ರತಂಡಕ್ಕೆ  ಧನ್ಯವಾದ ಎಂದರು ನಿರ್ಮಾಪಕ ಸಾಲಿಗ್ರಾಮ ಸುರೇಶ್.

 

ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಡ್ಯಾನಿ. ಭೂಗತ ಲೋಕದ ದೊರೆಯಾಗಿ ಕಾಣಿಸಿಕೊಂಡಿದ್ದೇನೆ ಎಂದು ತಮ್ಮ ಪಾತ್ರದ ಕುರಿತು ನಟ ಬಿ.ಸುರೇಶ್ ತಿಳಿಸಿದರು.

 

ನಾಯಕಿಯರಾದ ಆಶಿಕಾ ಸೋಮಶೇಖರ್, ಪಲ್ಲವಿ ಮಂಜುನಾಥ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಗೀತದ ಕುರಿತು ಲೋಕಿ ತವಸ್ಯ ಮಾಹಿತಿ ನೀಡಿದರು. ಛಾಯಾಗ್ರಾಹಕ ಐಸಾಕ್ ಪ್ರಭಾಕರ್, ಕಲಾ ನಿರ್ದೇಶಕ ದೀಪಕ್ ಕಾಮತ್, ಕಾರ್ಯಕಾರಿ ನಿರ್ಮಾಪಕ‌ ವಜ್ರೇಶ್ವರಿ ಸ್ವಾಮಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

ರಕ್ಕಿ ಸುರೇಶ್, ಪಲ್ಲವಿ ಮಂಜುನಾಥ್, ಆಶಿಕಾ ಸೋಮಶೇಖರ್, ಬಿ.ಸರೇಶ್, ಸಂಪತ್ ಮೈತ್ರೇಯ, ರಮೇಶ್ ಪಂಡಿತ್, ಬಲ ರಾಜವಾಡಿ, ಜಿ ಜಿ, ಹರಿಣಿ ಶ್ರೀಕಾಂತ್ ಮುಂತಾದವರ ಭರ್ಜರಿ ತಾರಾಬಳಗವಿರುವ ಈ ಚಿತ್ರಕ್ಕೆ ದೀಪು ಎಸ್ ಕುಮಾರ್ ಅವರ ಸಂಕಲನವಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,