Pattedari.Film News

Wednesday, June 17, 2026

 

*ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಂದ ಅನಾವರಣವಾಯಿತು  "ಪತ್ತೇದಾರಿ" ಚಿತ್ರದ ಪೋಸ್ಟರ್* .

 

 *ಶ್ರೀನಿವಾಸ್ ಜಯರಾಮ್ ನಿರ್ದೇಶನದ ಈ ಚಿತ್ರದ ಮೂಲಕ ಕಿಝಾರ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ.* .                   

 

ಎ.ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೊಹಮ್ಮದ್ ಅತೀಕ್ ನಿರ್ಮಾಣ ಮಾಡುತ್ತಿರುವ, ಶ್ರೀನಿವಾಸ್ ಜಯರಾಮ್ ರಚನೆ & ನಿರ್ದೇಶನದ ಹಾಗೂ ಕಿಝಾರ್ ಎಂಬ ನೂತನ ಪ್ರತಿಭೆ ನಾಯಕನಾಗಿ ನಟಿಸುತ್ತಿರುವ "ಪತ್ತೇದಾರಿ" ಚಿತ್ರದ ಪೋಸ್ಟರ್ ಅನಾವರಣ ಸಮಾರಂಭ ಇತ್ತೀಚೆಗೆ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನೆರವೇರಿತು. ಕಲಾವಿದರಾದ ಮಯೂರ್ ಪಟೇಲ್, "ಶಿಷ್ಯ" ದೀಪಕ್, ಕಾಕ್ರೋಜ್ ಸುಧೀ, ಚೆಲುವರಾಜ್, ಅರವಿಂದ್, ಗಿರೀಶ್ ಜತ್ತಿ, ನಟಿ "ಭೀಮ’ ಖ್ಯಾತಿಯ ಪ್ರಿಯ, " ಕೆ.ಜಿ.ಎಫ್" ರೆಡ್ಡಿ, ವಿಕ್ಟರಿ ವಾಸು, ನಿರ್ದೇಶಕ ಸಹನಮೂರ್ತಿ, ಪತ್ರಕರ್ತ ಹಾಗೂ ನಿರೂಪಕ ಹರೀಶ್ ನಾಗರಾಜ್ ಮುಂತಾದ ಗಣ್ಯರು ಸಮಾರಂಭಕ್ಕೆ ಆಗಮಿಸಿ "ಪತ್ತೇದಾರಿ" ಚಿತ್ರದ ಪೋಸ್ಟರ್ ಅನಾವರಣ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

"ಗಜಪಡೆ" ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಎರಡನೇ ಚಿತ್ರ "ಪತ್ತೇದಾರಿ". ಶೀರ್ಷೀಕೆಯೇ ತಿಳಿಸುವಂತೆ ಇದೊಂದು ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಕ್ರೈಮ್ ಥ್ರಿಲ್ಲರ್ ಚಿತ್ರಗಳು ಸಾಕಷ್ಟು ಬಂದಿದೆಯಾದರೂ, ಚಿತ್ರಕಥೆ ಬೇರೆ ರೀತಿಯಲ್ಲಿರುತ್ತದೆ. ಸಾಕಷ್ಟು ಈ ರೀತಿಯ ಸಿನಿಮಾಗಳನ್ನು ನೋಡಿ, ಆ ಸ್ಪೂರ್ತಿಯಿಂದ ಈ ಚಿತ್ರದ ಕಥೆ, ಚಿತ್ರಕಥೆ ಬರೆದಿದ್ದೇನೆ. ಇನ್ನೂ ಕಿಝಾರ್ ಅವರು ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಉತ್ತಮ ಕಲಾವಿದರು ಅವರು. ಈ ಮುಂಚೆ ನಾನು ಅವರ ಜೊತೆಗೆ ಹತ್ತು ದಿನಗಳ ಕಾಲ ಬೇರೊಂದು ಚಿತ್ರಕ್ಕಾಗಿ ಕೆಲಸ ಮಾಡಿದ್ದೆ.  ಆ ಸಂದರ್ಭದಲ್ಲಿ ಕಿಝಾರ್ ಅವರಿಗೆ ಈ ಚಿತ್ರದ ಕಥೆ ಹೇಳಿದೆ. ಅವರು ಇಷ್ಪಪಟ್ಟರು. ಇದು ನಾಲ್ಕು ಪ್ರಮುಖಪಾತ್ರಗಳ ಸುತ್ತ ನಡೆಯುವ ಕಥೆ. ಕಿಝಾರ್ ಅವರ ಜೊತೆಗೆ ಗಿರಿ, ರೂಪ ಹಾಗೂ ಸಿದ್ದೇಶ್ ಅವರು ಪ್ರಮುಖಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಶ್ರೀನಿವಾಸ್ ಜಯರಾಮ್ ತಿಳಿಸಿದರು. 

 

ಸಮಾರಂಭಕ್ಕೆ ಆಗಮಿಸಿದ ಗಣ್ಯರಿಗೆ ಧನ್ಯವಾದ ತಿಳಿಸಿ ಮಾತನಾಡಿದ ನಾಯಕ ಕಿಝಾರ್, ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನನ್ನ ಪಾತ್ರ ಕೂಡ ಚೆನ್ನಾಗಿದೆ. ನಾನು ಯಾವುದೇ ನಟನಾ ಶಾಲೆಯಲ್ಲಿ ಕಲಿತಿಲ್ಲ. ರಾಜಕುಮಾರ್, ವಿಷ್ಣುವರ್ಧನ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್ ಮುಂತಾದ ಕನ್ನಡ ನಟರ ಚಿತ್ರಗಳನ್ನು ನೋಡಿ ನಟನೆ ಕಲಿತಿದ್ದೇನೆ. ಅವರೆ ನನಗೆ ಸ್ಪೂರ್ತಿ ಎಂದರು

.                                       

ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿರುವ ನಟ ಸಿದ್ದೇಶ್ ಮಾತನಾಡಿ, ನಿರ್ದೇಶಕರು ಒಂದೊಳ್ಳೆ ಕಥೆ ಬರೆದಿದ್ದಾರೆ. ಎ.ಕೆ. ಪ್ರೊಡಕ್ಷನ್ಸ್ ಅದ್ದೂರಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು.

                             

ಚಿತ್ರದ ಶೀರ್ಷಿಕೆಯೇ ತಿಳಿಸುವಂತೆ ಇದೊಂದು ಕ್ರೈಮ್ ಥ್ರಿಲ್ಲರ್ ಕಥೆ. ಕಥೆ ಹಾಗೂ ನನ್ನ ಪಾತ್ರ ಎರಡು ಚೆನ್ನಾಗಿದೆ ‌ಎಂದು ನಟಿ ರೂಪ ಹೇಳಿದರು. 

                               

ಈ ಹಿಂದೆ ನಿರ್ದೇಶಕರು ಹಾಗೂ ನಾಯಕರ ಜೊತೆಗೆ ಒಂದು ಚಿತ್ರದಲ್ಲಿ ಅಭಿನಯಿಸಿದ್ದೆ. ಈ ಚಿತ್ರದಲ್ಲೂ ನಟಿಸುತ್ತಿದ್ದೇನೆ ಎಂದು ನಟ ಕಾಕ್ರೋಜ್ ಸುಧೀ ತಿಳಿಸಿದರು.

 

Copyright@2018 Chitralahari | All Rights Reserved. Photo Journalist K.S. Mokshendra,