Sarkari Nyayabele Angadi.News

Tuesday, May 12, 2026

 

 

*'ಸರ್ಕಾರಿ ನ್ಯಾಯಬೆಲೆ ಅಂಗಡಿ’ಗೆ ಶಾಸಕ ಎಸ್. ಆರ್. ವಿಶ್ವನಾಥ್ ಸಾಥ್*

 

*ಕುಮಾರ ಬಂಗಾರಪ್ಪ ಪಾತ್ರದ ’ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಕ್ಯಾರೆಕ್ಟರ್ ಟೀಸರ್ ರಿಲೀಸ್*

 

*ಸಾಮಾಜಿಕ ಕಳಕಳಿಯ ’ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರಕ್ಕೆ ಶಾಸಕ ಎಸ್. ಆರ್. ವಿಶ್ವನಾಥ್ ಮೆಚ್ಚುಗೆ*

 

*’ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ*

 

*ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ತೆರೆಗೆ ಬರಲು ತಯಾರಾದ ’ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ*

 

’ಸರ್ಕಾರಿ ನ್ಯಾಯಬೆಲೆ ಅಂಗಡಿ’ ಹೀಗೊಂದು ಹೆಸರಿನಲ್ಲಿ ಕನ್ನಡದಲ್ಲಿ ಸಿನಿಮಾವೊಂದು ತೆರೆಗೆ ಬರುತ್ತಿರುವುದು ನಿಮಗೆ ಗೊತ್ತಿರಬಹುದು. ಇದೀಗ ಈ ಸಿನಿಮಾ ಸದ್ದಿಲ್ಲದೆ ತನ್ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರೈಸಿ ತೆರೆಗೆ ಬರಲು ಸಿದ್ಧವಾಗಿದೆ. ಸಿನಿಮಾದ ಹೆಸರೇ ಹೇಳುವಂತೆ, ಇದು ’ಸರ್ಕಾರಿ ನ್ಯಾಯಬೆಲೆ ಅಂಗಡಿ’ ಮತ್ತು ಪಡಿತರ ವ್ಯವಸ್ಥೆಯ ಸುತ್ತ ನಡೆಯುವಂಥ ಕಥಾಹಂದರದ ಚಿತ್ರ. ಪಕ್ಕಾ ಗ್ರಾಮೀಣ ಸೊಗಡಿನ ಕಥಾಹಂದರದ ಈ ಸಿನಿಮಾದ ಸಂಪೂರ್ಣ ಚಿತ್ರೀಕರಣವನ್ನು ಮಂಡ್ಯ ಜಿಲ್ಲೆಯಲ್ಲೇ ನಡೆಸಿರುವುದು ವಿಶೇಷ.

 

ಇನ್ನು ನಟಿ ರಾಗಿಣಿ ದ್ವಿವೇದಿ, ನಟರಾದ ಕುಮಾರ ಬಂಗಾರಪ್ಪ, ದೊಡ್ಡಣ್ಣ ಮೊದಲಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಈ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಅನ್ನು ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್ ಬಿಡುಗಡೆಗೊಳಿಸಿದರು.

 

ಇದೇ ವೇಳೆ ಮಾತನಾಡಿದ ಶಾಸಕ ಎಸ್. ಆರ್. ವಿಶ್ವನಾಥ್, ’ಜನ ಸಾಮಾನ್ಯರು, ಬಡವರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ’ಸರ್ಕಾರಿ ನ್ಯಾಯಬೆಲೆ ಅಂಗಡಿ’ಗಳ ಮೂಲಕ ದಿನಸಿ ಮತ್ತು ಆಹಾರವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಆದರೆ, ಈ ವ್ಯವಸ್ಥೆಯಲ್ಲಿರುವ ಕೆಲವು ಲೋಪಗಳಿಂದ ಇದರ ಉದ್ದೇಶ ಪರಿಣಾಮಕಾರಿಯಾಗಿ ಈಡೇರುತ್ತಿಲ್ಲ. ಈಗ ಇದೇ ವಿಷಯವನ್ನು ಸಿನಿಮಾವಾಗಿಸಿ ’ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರತಂಡ ಪ್ರೇಕ್ಷಕರ ಮುಂದೆ ಹೇಳಲು ಹೊರಟಿದೆ. ಚಿತ್ರ ತಂಡದ ಇಂಥದ್ದೊಂದು ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಸಾಮಾಜಿಕ ಕಳಕಳಿಯ ವಿಷಯಗಳನ್ನು ಸಿನಿಮಾ ಮೂಲಕ ಹೇಳಿದಾಗ, ಅದು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪುತ್ತದೆ. ಈ ಚಿತ್ರ ಜನ ಜಾಗೃತಿ ಮೂಡಿಸಿ, ಯಶಸ್ವಿಯಾಗಲಿ’ ಎಂದು ಶುಭ ಹಾರೈಸಿದರು.

ಇದೇ ವೇಳೆ ಮಾತನಾಡಿದ ಚಿತ್ರದ ನಾಯಕ ನಟ ಕುಮಾರ್ ಬಂಗಾರಪ್ಪ, ’ಇಡೀ ದೇಶದಲ್ಲಿಯೇ ಸರ್ಕಾರಿ ನ್ಯಾಯಬೆಲೆ ಅಂಗಡಿ ಮತ್ತು ಪಡಿತರ ವ್ಯವಸ್ಥೆಯ ಮೇಲೆ ಮೂಡಿ ಬರುತ್ತಿರುವ ಮೊಟ್ಟ ಮೊದಲ ಸಿನಿಮಾ ಇದಾಗಿದೆ. ಇಡೀ ಗ್ರಾಮೀಣ ಪರಿಸರದ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗುತ್ತದೆ. ಮನರಂಜನೆ ಜೊತೆಗೆ ಒಂದು ಒಳ್ಳೆಯ ಸಂದೇಶ ಕೂಡ ಈ ಸಿನಿಮಾದಲ್ಲಿದೆ. ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಏನೇನು ವ್ಯವಹಾರಗಳು, ಅವ್ಯವಹಾರಗಳು ನಡೆಯುತ್ತದೆ ಎಂಬುದನ್ನು ಸಮಾಜಕ್ಕೆ ತೋರಿಸುವಂಥ ಕಥೆ ಈ ಸಿನಿಮಾದಲ್ಲಿದೆ. ಇದು ಎಲ್ಲಾ ಥರದ ಆಡಿಯನ್ಸ್‌ಗೂ ಕನೆಕ್ಟ್‌ ಆಗುವಂಥ ಸಿನಿಮಾ. ಇಡೀ ಸಿನಿಮಾವನನ್ನು ಮಂಡ್ಯ ಜಿಲ್ಲೆಯ ಗ್ರಾಮೀಣ ಪರಿಸರದಲ್ಲಿ ಚಿತ್ರೀಕರಿಸಿದ್ದು, ಒಂದು ಅದ್ಭುತ ಅನುಭವ. ನಿರ್ಮಾಪಕರು, ನಿರ್ದೇಶಕರು ಮತ್ತು ತಂತ್ರಜ್ಞರ ಸಹಕಾರದಿಂದ ’ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರ ತುಂಬ ಚೆನ್ನಾಗಿ ಮೂಡಿಬರುತ್ತಿದೆ. ಸಿನಿಮಾದ ಚಿತ್ರೀಕರಣ ಮುಗಿದಿದ್ದೇ ಗೊತ್ತಾಗಲಿಲ್ಲ. ಬಹುಕಾಲದ ಬಳಿಕ ಇಂಥದ್ದೊಂದು ಸಾಮಾಜಿಕ ಕಳಕಳಿಯ ಚಿತ್ರದಲ್ಲಿ ಅಭಿನಯಿಸಿರುವುದಕ್ಕೆ ಖುಷಿಯಿದೆ ’ ಎಂದರು.

 

’ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಪಾರ್ವತಿ ಎಂಬ ಗ್ರಾಮೀಣ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ʼಜಯಶಂಕರ ಟಾಕೀಸ್‌ʼ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ’ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರವನ್ನು ತೇಜು ಮೂರ್ತಿ ಮತ್ತು ಪದ್ಮಾವತಿ ಚಂದ್ರಶೇಖರ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅನಂತ್‌ ಆರ್ಯನ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಬಿ. ರಾಮಮೂರ್ತಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯಿರುವ ’ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರಕ್ಕೆ ಸಾತ್ವಿಕ್‌ ಪವನ್‌ ಕುಮಾರ್‌ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. 

 

Copyright@2018 Chitralahari | All Rights Reserved. Photo Journalist K.S. Mokshendra,