*ಹೊಸಚಿತ್ರಕ್ಕೆ ಆ್ಯಕ್ಷನ್ -ಕಟ್ ಹೇಳಲು ಗುರುರಾಜ ಕುಲಕರ್ಣಿ (ನಾಡಗೌಡ) ರೆಡಿ*
*’ನಿರಂತರ ಪ್ರೊಡಕ್ಷನ್ಸ್’ ಮತ್ತು ‘ಜಿ9 ಕಮ್ಯುನಿಕೇಶನ್ ಅ್ಯಂಡ್ ಮೀಡಿಯಾ’ ಸಹಯೋಗದಲ್ಲಿ ಬಿಗ್ ಬಜೆಟ್ ಚಿತ್ರ*
*ಜ. 11ಕ್ಕೆ ಕಿಚ್ಚ ಸುದೀಪ್ ಅವರಿಂದ ಹೊಸಚಿತ್ರದ ಶೀರ್ಷಿಕೆ ಅನಾವರಣ*
ಬೆಂಗಳೂರು, ಜ. 7: ಕನ್ನಡ ಚಿತ್ರರಂಗದಲ್ಲಿ ‘ಲಾಸ್ಟ್ ಬಸ್’, ‘ಅಮೃತ್ ಅಪಾರ್ಟ್ಮೆಂಟ್’, ‘ದಿ ಜಡ್ಜ್ ಮೆಂಟ್’ ಮೊದಲಾದ ಸದಭಿರುಚಿ ಸಿನಿಮಾಗಳ ಮೂಲಕ ನಿರ್ಮಾಪಕ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಗುರುರಾಜ ಕುಲಕರ್ಣಿ (ನಾಡಗೌಡ) ಈ ಬಾರಿ ಮತ್ತೊಂದು ವಿಭಿನ್ನ ಕಥೆಯನ್ನು ಪ್ರೇಕ್ಷಕರ ಮುಂದೆ ತರಲು ತೆರೆಮರೆಯಲ್ಲಿ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನ ಮಾಡುತ್ತಿರುವ ಹೊಸಚಿತ್ರದ ಬಹುತೇಕ ಪ್ರೀ-ಪ್ರೊಡಕ್ಷನ್ಸ್ ಕೆಲಸಗಳು ಪೂರ್ಣಗೊಂಡಿದ್ದು, ಇದೇ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಈ ನೂತನ ಚಿತ್ರದ ಶೀರ್ಷಿಕೆಯನ್ನು ಕನ್ನಡ ಚಿತ್ರರಂಗದ ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅನಾವರಣ ಮಾಡಲಿದ್ದಾರೆ.
ಇನ್ನು ಗುರುರಾಜ ಕುಲಕರ್ಣಿ (ನಾಡಗೌಡ) ಆ್ಯಕ್ಷನ್-ಕಟ್ ಹೇಳುತ್ತಿರುವ ಈ ಹೊಸಚಿತ್ರದಲ್ಲಿ ಸೂರಜ್ ಗೌಡ ಮತ್ತು ಯುವ ನಟ ಪ್ರವೀಣ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶರಣ್ಯ ಶೆಟ್ಟಿ ನಾಯಕಿಯಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಕನ್ನಡದ ಚಿತ್ರರಂಗದ ಅನೇಕ ಹಿರಿ-ಕಿರಿಯ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇಂದಿನ ತಲೆಮಾರಿನ ಪ್ರೇಕ್ಷಕರಿಗೆ ಇಷ್ಟವಾಗುವಂಥ ಲವ್ ಕಂ ಕ್ರೈಂ-ಥ್ರಿಲ್ಲರ್ ಕಥೆಯನ್ನು ಗುರುರಾಜ ಕುಲಕರ್ಣಿ (ನಾಡಗೌಡ) ಈ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ತರಲು ಹೊರಟಿದ್ದಾರೆ.
ಈ ಹಿಂದೆ ಕನ್ನಡದಲ್ಲಿ ಜಯರಾಮ್ ಕಾರ್ತಿಕ್ (ಜೆ. ಕೆ) ಮತ್ತು ಅದ್ವಿತಿ ಶೆಟ್ಟಿ ಜೋಡಿಯಾಗಿ ಅಭಿನಯಿಸಿದ್ದ ‘ಐರಾವನ್’ ಚಿತ್ರವನ್ನು ನಿರ್ಮಿಸಿದ್ದ ‘ನಿರಂತರ ಪ್ರೊಡಕ್ಷನ್ಸ್’ನ ಡಾ. ನಿರಂತರ ಗಣೇಶ್ ಈ ಹೊಸಚಿತ್ರದ ನಿರ್ಮಾಣದಲ್ಲಿ ಗುರುರಾಜ್ ಕುಲಕರ್ಣಿ (ನಾಡಗೌಡ) ಅವರಿಗೆ ಸಾಥ್ ನೀಡುತ್ತಿದ್ದಾರೆ. ‘ನಿರಂತರ ಪ್ರೊಡಕ್ಷನ್ಸ್’ ಮತ್ತು ‘ಜಿ9 ಕಮ್ಯುನುಕೇಶನ್ಸ್ ಅ್ಯಂಡ್ ಮೀಡಿಯಾ’ ಸಂಸ್ಥೆಯ ಸಹಯೋಗದಲ್ಲಿ ಬಿಗ್ ಬಜೆಟ್ ನಲ್ಲಿ ಈ ಚಿತ್ರ ತಯಾರಾಗುತ್ತಿದೆ.
ಈ ಚಿತ್ರದ ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಸಂಯೋಜಿಸುತ್ತಿದ್ದು, ಪ್ರಮೋದ ಮರವಂತೆ ಗೀತೆಗಳಿಗೆ ಸಾಹಿತ್ಯ ಒದಗಿಸುತ್ತಿದ್ದಾರೆ. ಚಿತ್ರಕ್ಕೆ ಹರ್ಷ ಕುಮಾರ್ ಗೌಡ ಛಾಯಾಗ್ರಹಣ, ಬಿ. ಎಸ್. ಕೆಂಪರಾಜ್ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆಯಿದೆ. ಬೆಂಗಳೂರು, ಗೋವಾ ಮತ್ತು ಕರ್ನಾಟಕದ ಹಲವು ತಾಣಗಳಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ನಡೆಯಲಿದೆ.
ಈಗಾಗಲೇ ಈ ಚಿತ್ರದ ಬಹುತೇಕ ಪ್ರೀ-ಪ್ರೊಡಕ್ಷನ್ಸ್ ಕೆಲಸಗಳು ಪೂರ್ಣಗೊಂಡಿದ್ದು, ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದ ‘ನಿರಂತರ ಪ್ರೊಡಕ್ಷನ್ಸ್’ ಮತ್ತು ‘ಜಿ9 ಕಮ್ಯುನಿಕೇಶನ್ಸ್ ಅ್ಯಂಡ್ ಮೀಡಿಯಾ’ ಸಂಸ್ಥೆಯ ಸಹಯೋಗದಲ್ಲಿ ನಿರ್ಮಾಣದ ಈ ಚಿತ್ರದ ಹೆಸರೇನು? ಉಳಿದಂತೆ ಈ ಚಿತ್ರದ ವಿಶೇಷತೆಗಳೇನು ಎಂಬ ಕುತೂಹಲಕ್ಕೆ ಶೀಘ್ರದಲ್ಲಿಯೇ ಉತ್ತರ ಸಿಗಲಿದೆ.