Film 2+.News

Monday, December 08, 2025

 

2+ ಚಿತ್ರದ ’ನನಗೂ ನಿನಗೂ’

ಹಾಡು 34 ಭಾಷೆಗಳಲ್ಲಿ ಬಿಡುಗಡೆ

 

  ಸಂಗೀತ ನಿರ್ದೇಶಕ

 ಅಭಿಮನ್ ರಾಯ್ ಸಾಹಸ

 

 'ಖುಷಿಯಾಗಿದೆ ಏಕೋ’, ’ಕಣ್ಣಲ್ಲೇ ನನ್ನ ಚಿತ್ರ ಬರೆದೋನು’ ಹೀಗೆ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಮೆಲೋಡಿ ಹಾಡುಗಳನ್ನು ನೀಡಿದ ಸಂಗೀತ ನಿರ್ದೇಶಕ ಅಭಿಮನ್ ರಾಯ್ ಇದೀಗ ಒಂದು  ದಾಖಲೆಯ ಹೆಜ್ಜೆ ಇಟ್ಟಿದ್ದಾರೆ‌. ಹೌದು, ಅವರು 2+ ಎಂಬ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದ ಹಾಡೊಂದನ್ನು 34 ಭಾಷೆಗಳಲ್ಲಿ ಹೊರತಂದಿದ್ದಾರೆ. ಚಿತ್ರರಂಗದ ಇತಿಹಾಸದಲ್ಲೇ ಇಂಥದ್ದೊಂದು ಸಾಹಸವನ್ನು  ಯಾರೊಬ್ಬರೂ ಸಹ ಮಾಡಿಲ್ಲ. ಒಟ್ಟು 34 ಭಾಷೆಯಲ್ಲಿ ಮೂಡಿಬಂದಿರುವ ’ನನಗೂ ನಿನಗೂ ನಡುವೆ’ ಎಂಬ ಸುಂದರ ಸಾಹಿತ್ಯವಿರುವ ಈ ಹಾಡಿಗೆ ಬಹುತೇಕ ಪ್ರಸಿದ್ದ ಗಾಯಕರೇ ದನಿಯಾಗಿದ್ದಾರೆ. ಈ 34 ಭಾಷೆಯ ಹಾಡುಗಳ ಬಿಡುಗಡೆ ಸಮಾರಂಭ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು.

    ಲಹರಿ ಆಡಿಯೋ ಸಂಸ್ಥೆ ಹೊರ ತಂದಿರುವ  ಈ 34 ಹಾಡುಗಳನ್ನು  ವೇದಿಕೆಯಲ್ಲಿ 34 ಗಣ್ಯರುಗಳು ಬಿಡುಗಡೆ ಮಾಡಿದರು. ಅತಿಥಿಗಳಾಗಿದ್ದ ನಟ ಬಾಲಾಜಿ, ಲಹರಿ ವೇಲು, ರಘುರಾಮ್, ಮಂಜು ಸ್ವರಾಜ್, ವೆಂಕಟಗೌಡ, ಶಿವರಾಜ್, ತ್ಯಾಗರಾಜು, ಡಾ.ಮಹೇಂದ್ರ, ಡಾ.ಭಗವಾನ್  ಸೇರಿ 34 ಜನ ಗಣ್ಯರು, ಒಂದೊಂದು ಹಾಡನ್ನು ಬಿಡುಗಡೆ ಮಾಡಿದರು.

    ಇನ್ನು 2+  ಚಿತ್ರಕ್ಕೆ ಅಭಿಮನ್ ರಾಯ್ ಅವರೇ ಮೊದಲ ಬಾರಿಗೆ ಕಥೆ , ಚಿತ್ರಕಥೆ ಬರೆದಿದ್ದು, ಅವರ ಸಹೋದರ ಅಶೋಕ್ ರಾಯ್ ನಿರ್ದೇಶನ ಮಾಡಿದ್ದಾರೆ.

     ಈ ಸಾಂಗ್ ಕುರಿತಂತೆ ಮಾತನಾಡಿದ ಅಭಿಮನ್ ರಾಯ್, ನಾನು ಈ ಸಾಹಸಕ್ಕೆ ಕೈಹಾಕಲು ವೇಲು ಅವರೇ ಸ್ಪೂರ್ತಿ. ಆರಂಭದಲ್ಲಿ ಈ ಹಾಡನ್ನು 4 ಭಾಷೆಯಲ್ಲಿ ಮಾತ್ರವೇ ಮಾಡಿದ್ದೆ. ಹಾಡು ಕೇಳಿದ ವೇಲು ಅವರು ಈ ಸಾಂಗ್ ಎಲ್ಲ ಭಾಷೆಗಳಿಗೂ ಸಲ್ಲುವಂತಿದೆ. ಇನ್ನೂ ಬೇರೆ ಬೇರೆ ಭಾಷೆಗಳಲ್ಲಿ ಮಾಡುವಂತೆ ಹೇಳಿದರು. ಕನ್ನಡದಲ್ಲೇ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉತ್ತರ ಕರ್ನಾಟಕ, ಕೊಡವ, ಬ್ಯಾರಿ, ಕುಂದಾಪುರ, ಮಂಡ್ಯ,ಕೊಂಕಣಿ, ತುಳು ಸೇರಿದಂತೆ 8 ಶೈಲಿಯಿದೆ.  ಉಳಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಒಡಿಯಾ, ಬೆಂಗಾಲಿ, ಪಂಜಾಬಿ, ಗುಜರಾತಿ ಅಲ್ಲದೆ, ಇಂಗ್ಲೀಷ್, ರಶಿಯಾ, ಜಪಾನೀಸ್, ಇಟಾಲಿಯನ್ ಭಾಷೆಗಳಲ್ಲಿ ಈ ಹಾಡು ಮೂಡಿಬಂದಿದೆ ಎಂದರು. ನಿರ್ದೇಶಕ ಅಶೋಕ್ ರಾಯ್ ಮಾತನಾಡಿ ಈ ಹಾಡಿಗೆ 60 ಜನ ಹೊಸ ಸಿಂಗರ್ಸ್ ಕೂಡ ದನಿಯಾಗಿದ್ದಾರೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ಈಗಾಗಲೇ 60% ಚಿತ್ರೀಕರಣ ಮುಗಿದಿದ್ದು ಮಾರ್ಚ್ ಏಪ್ರಿಲ್ ವೇಳೆಗೆ ರಿಲೀಸ್ ಮಾಡುವ ಯೋಜನೆಯಿದೆ.  ಒಂದೇ ಸಿನಿಮಾದಲ್ಲಿ 2 ಕಥೆ ಇದ್ದು, ಇಂಟರ್ ವೆಲ್ ಗೂ ಮೊದಲು ಒಂದು ಕಥೆ, ಆನಂತರ  ಮತ್ತೊಂದು ಕಥೆ ‌ನಡೆಯುತ್ತದೆ. + ನಿಂದಲೇ ಕಥೆ ಶುರುವಾಗುತ್ತದೆ. ನಾಯಕ ಡಾ.ವರದರಾಜ್ ಅವರು ಚಿತ್ರದಲ್ಲೂ ಡಾಕ್ಟರ್ ಆಗೇ ನಟಿಸಿದ್ದಾರೆ. ಮೆಡಿಕಲ್ ಗೆ ಸಂಬಂಧಿಸಿದ ಕಂಟೆಂಟ್ ಕೂಡ ಚಿತ್ರದಲ್ಲಿದೆ ಎಂದು ಹೇಳಿದರು. ಅತಿಥಿಗಳಾಗಿದ್ದ ಬಾಲಾಜಿ, ವೇಲು ಮಾತನಾಡುತ್ತ ಅಭಿಮನ ರಾಯ ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

 

Copyright@2018 Chitralahari | All Rights Reserved. Photo Journalist K.S. Mokshendra,