Super Hit.Film News

Monday, December 01, 2025

 

ಗಿಲ್ಲಿ ನಟ ನಾಯಕನಾಗಿ ನಟಿಸಿರೋ `ಸೂಪರ್ ಹಿಟ್’ ಟೀಸರ್ ಬಿಡುಗಡೆ!

ಕಾಮಿಡಿ ಶೋಗಳ ಮೂಲಕ ಪ್ರವರ್ಧಮಾನಕ್ಕೆ ಬಂದು, ಇದೀಗ ಬಿಗ್ ಬಾಸ್ ಶೋನಲ್ಲಿಯೂ ಸ್ಪರ್ಧಿಯಾಗಿ ಮಿಂಚುತ್ತಿರುವವರು ಗಿಲ್ಲಿ ನಟ. ಗಿಲ್ಲಿ ನಾಯಕನಾಗಿ ನಟಿಸಿರುವ ಸೂಪರ್ ಹಿಟ್ ಚಿತ್ರವೀಗ ಬಿಡುಗಡೆಗೆ ತಯಾರಾಗಿ ನಿಂತಿದೆ. ವಿಜಯಾನಂದ್ ನಿರ್ದೇಶನದ ಈ ಸಿನಿಮಾದ ಟೀಸರ್ ಇದೀಗ ಬಿಡುಗಡೆಗೊಂಡಿದೆ. ಈ ಕುರಿತಾದ ಪತ್ರಿಕಾಗೋಷ್ಠಿಯ ಮೂಲಕ ಚಿತ್ರತಂಡ ಒಟ್ಟಾರೆ ಸಿನಿಮಾದ ಬಗೆಗಿನ ಒಂದಷ್ಟು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದೆ. ಹೀಗೆ ಬಿಡುಗಡೆಗೊಂಡಿರುವ `ಸೂಪರ್ ಹಿಟ್’ ಟೀಸರ್ ಸು ಫ್ರಂ ಸೋ ನಂತರದಲ್ಲಿ ಮತ್ತೊಂದು ಮಟ್ಟದ ಕಾಮಿಡಿಯ ಮೂಲಕ ಸಂಚಲನ ಸೃಷ್ಟಿಸುವ ಲಕ್ಷಣಗಳು ದಟ್ಟವಾಗಿ ಕಾಣಿಸುತ್ತಿವೆ.

ಸಿನಿಮಾವೊಂದು ಬಿಡುಗಡೆಯಾದ ನಂತರ ಸೂಪರ್ ಹಿಟ್ ಆಗೋದು ವಾಡಿಕೆ. ಆದರೆ, ಈ ಸಿನಿಮಾದ ಶೀರ್ಷಿಕೆಯೇ ಸೂಪರ್ ಹಿಟ್. ರನ್ನಿಂಗ್ ಸಕ್ಸಸ್‌ಫುಲಿ ಎಂಬ ಟ್ಯಾಗ್ ಲೈನ್ ಅದಕ್ಕಿದೆ. ಹೀಗೆ ಶೀರ್ಷಿಕೆಯ ಮೂಲಕವೇ ಗಮನ ಸೆಳೆದಿದ್ದ ಈ ಸಿನಿಮಾದ ಟೈಟಲ್ಲು ಹುಟ್ಟಿದ ಬಗೆಗಿನ ಇಂಟರೆಸ್ಟಿಂಗ್ ಸಂಗತಿಯನ್ನು ನಿರ್ದೇಶಕ ವಿಜಯಾನಂದ ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ಒಂದಷ್ಟು ಏಳುಬೀಳು ಕಂಡಿದ್ದ ಈ ಸಿನಿಮಾ ನಿರ್ಮಾಪಕರಾದ ಜಿ. ಉಮೇಶ್ ಅವರು ಸೂಪರ್ ಹಿಟ್ ಸಿನಿಮಾವನ್ನು ನಿರ್ಮಾಣ ಮಾಡೋ ಕನಸು ಹೊಂದಿದ್ದರಂತೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡಿದ್ದ ನಿರ್ದೇಶಕರು, 

ಕಥೆಗೂ ಹೊಂದಿಕೆಯಾಗೋದರಿಂದ ಅದನ್ನೇ ಶೀರ್ಷಿಕೆಯಾಗಿಟ್ಟಿರೋದಾಗಿ ಮಾಹಿತಿ ಹಂಚಿಕೊಂಡರು.

ಸು ಫ್ರಂ ಸೋ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲದಿಂದ ಹೊಸಾ ಹುರುಪು ತುಂಬಿಕೊಂಡಿರುವ ವಿಜಯಾನಂದ್, ಈ ಚಿತ್ರಕ್ಕೂ ಅಂಥಾದ್ದೇ ಬೆಂಬಲ ಸಿಗುವ ಆಶಯ ಮತ್ತು ಭರವಸೆ ಹೊಂದಿದ್ದಾರೆ. ಅಂದಹಾಗೆ, ಖ್ಯಾತ ಸಿನಿಮಾ ಸಾಹಿತಿ ನಾಗೇಂದ್ರ ಪ್ರಸಾದ್ ಅವರ ಸಹೋದರನಾಗಿರುವ ವಿಜಯಾನಂದ್ ಕಮರ್ಶಿಯಲ್ ಧಾಟಿಯಲ್ಲಿ, ಹಾಸ್ಯವನ್ನೇ ಪ್ರಧಾನವಾಗಿಟ್ಟುಕೊಂಡು ಈ ಸಿನಿಮಾವನ್ನು ರೂಪಿಸಿದ್ದಾರಂತೆ. ಈಗಾಗಲೇ ಇದರ ಎಲ್ಲ ಕೆಲಸ ಕಾರ್ಯಗಳೂ ಮುಕ್ತಾಯಗೊಂಡಿವೆ. ಒಂದೊಳ್ಳೆ ಸಮಯ ನೋಡಿ ಬಿಡುಗಡೆ ಮಾಡೋದಷ್ಟೇ ಬಾಕಿ ಉಳಿದಿದೆ ಎಂಬ ಮಾಹಿತಿಯನ್ನು ವಿಜಯಾನಂದ್ ಹಂಚಿಕೊಂಡಿದ್ದಾರೆ. ಇಡೀ ಸಿನಿಮಾ ಆರಂಭದಿಂದ ಕೊನೆಯವರೆಗೂ ಪ್ರತೀ ಹತ್ತು ನಿಮಿಷಕ್ಕೊಮ್ಮೆ ಪ್ರೇಕ್ಷಕರನ್ನು ಬೆರಗಾಗಿಸುವಂಥಾ ಅಂಶಗಳು, ತಿರುವುಗಳಿವೆಯಂತೆ. ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿ ಥ್ರಿಲ್ಲರ್ ಕಾಮಿಡಿ ಜಾನರಿನಲ್ಲಿ ಭಿನ್ನ ಪ್ರಯತ್ನ ನಡೆಸಿರುವ ಸುಳಿವನ್ನೂ ನಿರ್ದೇಶಕರು ಬಿಟ್ಟುಕೊಟ್ಟಿದ್ದಾರೆ.

ಈಗಿನ ಯುವ ಸಮುದಾಯಕ್ಕೆ ಹತ್ತಿರಾಗಿರೋ ಕಥೆ ಹೊಂದಿರುವ `ಸೂಪರ್ ಹಿಟ್’ ಚಿತ್ರದಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಕಾಮಿಡಿ ಸ್ಟಾರ್ ಎನಿಸಿಕೊಂಡಿರುವ ಗೌರವ್ ಶೆಟ್ಟಿ ಮತ್ತು, ಗಿಲ್ಲಿ ನಟ ನಾಯಕರಾಗಿ ನಟಿಸಿದ್ದಾರೆ. ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ವಿಜಯಲಕ್ಷ್ಮಿ ಎಂಟರ್‌ಪ್ರೈಸಸ್ ಬ್ಯಾನರಿನಡಿಯಲ್ಲಿ ಜಿ. ಉಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ, ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್  ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ಸೋಮಶೇಖರ್, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಅಶ್ವಿನಿ ರಾವ್, ಸ್ವಪ್ನ ಶೆಟ್ಟಿಗಾರ್, ಮಂಗಳೂರು ಮೀನನಾಥ ಮುಂತಾದವರ ತಾರಾಗಣವಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,