Crazy Brahma.News

Friday, March 20, 2026

 

ಮೇ 30ರಂದು ‘ಕ್ರೇಜಿ ಬ್ರಹ್ಮ’

 

ರವಿಚಂದ್ರನ್-ಹಂಸಲೇಖರ 40 ವರ್ಷಗಳ ಸಂಗೀತ ಪಯಣದ ಸಂಭ್ರಮ

 

ಕನ್ನಡ ಚಿತ್ರರಂಗ ಕಂಡ ಅದ್ಭುತ ತಂತ್ರಜ್ಞ ಜೋಡಿ ಎಂದರೆ ರವಿಚಂದ್ರನ್‍ ಮತ್ತು ಹಂಸಲೇಖ ಅವರದ್ದು. 80-90ರ ದಶಕದಲ್ಲಿ ರವಿಚಂದ್ರನ್‍ ನಿರ್ದೇಶನದ ಮತ್ತು ಹಂಸಲೇಖ ಸಂಗೀತ ನಿರ್ದೇಶನದ ಚಿತ್ರಗಳು ದೊಡ್ಡ ಮಟ್ಟಿಗೆ ಯಶಸ್ಸು ಕಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಜೋಡಿಯ ಹೆಸರೇ ಸಾಕಾಗಿತ್ತು, ಒಂದು ಚಿತ್ರಕ್ಕೆ ಪ್ರೇಕ್ಷಕರನ್ನು ಸೆಳೆಯುವುದಕ್ಕೆ. ಅಂಥ ಜನಪ್ರಿಯ ಮತ್ತು ಯಶಸ್ವಿ ಜೋಡಿಯು, 2000ದ ನಂತರ ಕಾರಣಾಂತರಗಳಿಂದ ಜೊತೆಯಾಗಿ ಕೆಲಸ ಮಾಡದಿರಬಹುದು. ಆದರೆ, ಇಂದಿಗೂ ಅವರು ಮಾಡಿದ ಹಾಡುಗಳ ಮೋಡಿಯಿಂದ ಕನ್ನಡಿಗರು ಹೊರಬರುವುದಕ್ಕೆ ಸಾಧ್ಯವಾಗಿಲ್ಲ.

 

ರವಿಚಂದ್ರನ್ ಮತ್ತು ಹಂಸಲೇಖ ಈಗ ಜೊತೆಯಾಗಿ ಕೆಲಸ ಮಾಡದಿದ್ದರೂ, ಅವರನ್ನು ಸಂಭ್ರಮಿಸುವ ಕೆಲಸ ನಡೆಯುತ್ತಿದೆ. ಇಬ್ಬರ ನಾಲ್ಕು ದಶಕಗಳ ಪಯಣವನ್ನು ಸಂಭ್ರಮಿಸುವ ಸಲುವಾಗಿ, ಪ್ರಸ್ತುತ್‍ ಇನ್ನೋವೇಟಿವ್‍ ಸಂಸ್ಥೆ ಮೇ 30ರಂದು ಸಂಜೆ 6ರಿಂದ ರಾತ್ರಿ 12ರವರೆಗೂ ‘ಕ್ರೇಜಿ ಬ್ರಹ್ಮ’ ಎಂಬ ಬೃಹತ್‍ ಕಾರ್ಯಕ್ರಮವನ್ನು ಆಯೋಜಿಸಿದೆ. Where Music Meets Magic ಎಂಬ ಅಡಿಬರಹವಿರುವ ಈ ಕಾರ್ಯಕ್ರಮದಲ್ಲಿ ರವಿಚಂದ್ರನ್‍ ಮತ್ತು ಹಂಸಲೇಖ ಜೋಡಿಯ ಕೆಲವು ಪ್ರಮುಖವಾದ ಹಾಡುಗಳನ್ನು ಹಾಡುವುದರ ಜೊತೆಗೆ ಮರುಸೃಷ್ಟಿ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಹಲವು ಜನಪ್ರಿಯ ಕಲಾವಿದರು ಭಾಗವಹಿಸುವುದರ ಜೊತೆಗೆ, ರವಿಚಂದ್ರನ್‍ ಅವರ ಜೊತೆಗೆ ನಟಿಸಿದ ಹಲವು ನಟಿಯರು ಭಾಗವಹಿಸಲಿದ್ದಾರೆ. ದೇಶದ ಜನಪ್ರಿಯ ಗಾಯಕರು ಹಾಡುಗಳನ್ನು ಹಾಡಲಿದ್ದಾರೆ. ಆರು ತಾಸುಗಳ ಈ ಬೃಹತ್‍ ಕಾರ್ಯಕ್ರಮವು ಕೆಂಗೇರಿಯ ಜೆಕೆ ಗ್ರಾಂಡ್‍ ಅರೇನಾದಲ್ಲಿ ನಡೆಯಲಿದೆ.

 

ಈ ಕಾರ್ಯಕ್ರಮ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡುವ ಸಲುವಾಗಿ ಶುಕ್ರವಾರ ರಾತ್ರಿ ಕಿಂಗ್ಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಈ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತುತತ್‍ ಇನ್ನೋವೇಟಿವ್‍ ಕ್ರಿಯೇಷನ್ಸ್ ಮತ್ತು ಸಲ್ಯೂಷನ್ಸ್ನ ನಿರ್ದೇಶಕ ನ. ವಿನಯ್, ನಟ-ನಿರ್ದೇಶಕ ರವಿಚಂದ್ರನ್ ಮತ್ತು ಗೀತರಚನೆಕರ-ಸಂಗೀತ ನಿರ್ದೇಶಕ ಹಂಸಲೇಖ ಭಾಗವಹಿಸಿದ್ದರು.

‘ಕ್ರೇಜಿ ಬ್ರಹ್ಮ’ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರ ನೀಡಿದ ನ. ವಿನಯ್, ‘ಕಳೆದ 15 ವರ್ಷಗಳಲ್ಲಿ ಯಾವುದೇ ಪಾರ್ಟಿ, ಮದುವೆ ಅಥವಾ ಯಾವುದೇ ಸಮಾರಂಭವಿರಲಿ, ಹೊಸ ಸಿನಿಮಾಗಳು ಅದೆಷ್ಟೇ ಯಶಸ್ವಿಯಾಗಿರಲಿ, ಈಗಲೂ ರವಿಚಂದ್ರನ್‍ ಮತ್ತು ಹಂಸಲೇಖ ಜೋಡಿಯ ಹಾಡುಗಳೇ ಕೇಳಿಬರುತ್ತವೆ. ಅವರಿಬ್ಬರ ಎವರ‍್ ಗ್ರೀನ್‍ ಹಾಡುಗಳನ್ನು ಮರುಸೃಷ್ಟಿ ಮಾಡುವುದಕ್ಕೆ ಪದಗಳಲ್ಲಿ ಅಥವಾ ದೃಶ್ಯಗಳಲ್ಲಿ ಯಾರಿಂದಲೂ ಸಾಧ್ಯವಿಲ್ಲ. ಆ ಕಾಲದಲ್ಲಿ ನಾವು ಏನು ನೋಡಿದ್ದೆವು, ಈ ಕಾಲದವರು ಏನು ಮಿಸ್‍ ಮಾಡಿಕೊಳ್ಳುತ್ತಿದ್ದಾರೆ ಅದನ್ನು ಮರುಸೃಷ್ಟಿ ಮಾಡಬೇಕು ಎಂದನಿಸಿತು. ಹಾಗೆ ಹುಟ್ಟಿಕೊಂಡಿದ್ದೇ ‘ಕ್ರೇಜಿ ಬ್ರಹ್ಮ’ ಕಾರ್ಯಕ್ರಮ. ಿದೊಂದು ವರ್ಣರಂಜಿತ ಕಾರ್ಯಕ್ರಮವಾಗಲಿದ್ದು, ಸುಮಾರು 10 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಚಿರಂಜೀವಿ, ಶಿಲ್ಪಾ ಶೆಟ್ಟಿ ಸೇರಿದಂತೆ ಭಾರತದ ಜನಪ್ರಿಯ ನಟ-ನಟಿಯರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದ್ದು, ಹಲವರು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಮಾಹಿತಿ ಕೊಟ್ಟರು.

 

ರವಿಚಂದ್ರನ್‍ ಮಾತನಾಡಿ, ‘ಒಂದು ಸಂಬಂಧದಲ್ಲಿ ಬಿರುಕು ಬಿಟ್ಟಾಗ, ಸಂಭ್ರಮಿಸುವವರು ಜಾಸ್ತಿ. ಆದರೆ, ನಮ್ಮನ್ನು ಸೇರಿಸುವುದಕ್ಕೆ ಹಲವರು ಪ್ರಯತ್ನ ಮಾಡುತ್ತಿದ್ದಾರೆ. ಕೋಪ, ಇಗೋ, ಯಶಸ್ಸು ಇದ್ದಾಗ ಬಿರುಕು ಸಹಜ. ಗೆಲುವು ಯಾರಿಂದ ಎಂಬ ಪರೀಕ್ಷೆ ಬಂದೇ ಬರುತ್ತದೆ. ಅದು ಜೀವನದ ಒಂದು ಭಾಗ. ಅದರಿಂದ ನಮ್ಮಿಬ್ಬರ ಜೋಡಿಯ ಮೌಲ್ಯ ಗೊತ್ತಾಗುತ್ತಿದೆ. ಹಾಗಾಗಿ, ಆ ಬಿರುಕು ಬೇಕಾಗಿತ್ತೇನೋ ಎಂದು ಕೆಲವೊಮ್ಮೆ ಅನಿಸುತ್ತದೆ. ನಮ್ಮಿಬ್ಬರದ್ದು ಚಿತ್ರರಂಗ ಕಂಡ ಬೆಸ್ಟ್ ಜೋಡಿ. ಜೊತೆಗೆ ಕೆಲಸ ಮಾಡದಿದ್ದರೂ, ಒಳ್ಳೆಯ ಸ್ನೇಹಿತರಾಗಿದ್ದೇವೆ. 40 ವರ್ಷಗಳ ಹಿಂದೆ ನನಗೆ ಏನೂ ಗೊತ್ತಿರಲಿಲ್ಲ. ಹಂಸಲೇಖ ಬರೆದುಕೊಟ್ಟಾಗಲೇ ಅದನ್ನು ಹೇಗೆ ತೆಗೆಯಬೇಕು ಎಂದು ಗೊತ್ತಾಗಿದ್ದು. ನನ್ನನ್ನು ‘ಕ್ರೇಜಿ ಸ್ಟಾರ‍್’ ಮಾಡಿದ್ದು ಅವರೇ. ನಾವು ಸಿನಿಮಾ ಮಾಡದಿರಬಹುದು. ಆದರೆ, ನಾವು ಯಾವತ್ತೂ ಕಿತ್ತಾಡಿಲ್ಲ. ಕಾರಣಾಂತರಗಳಿಂದ ನಮ್ಮ ನಡುವೆ ಬಿರುಕು ಮೂಡಿರಬಹುದು. ಾದರೆ, ನಾವು ಜಗಳ ಆಡಿಲ್ಲ. ಇವತ್ತಿಗೂ ನಾನು ಹೆಚ್ಚು ನಗುತ್ತೇನೆ ಎಂದರೆ, ಅದು ಅವರ ಜೊತೆಗೆ ಮಾತ್ರ. ಆ ನಗುವೇ ನಮ್ಮನ್ನು ಇಷ್ಟು ದೂರ ಕರೆದುಕೊಂಡು ಬಂದಿದೆ. ಆ ನಗುವಿನಿಂದಲೇ ನಾವು ಇಷ್ಟೊಂದು ಸಿನಿಮಾ ಮಾಡೋಕೆ ಸಾಧ್ಯವಾಗಿದ್ದು. ನಮ್ಮ ಸ್ನೇಹ ಪರದೆ ಮೇಲೆ ಕಾಣುತ್ತದೆ. ಯಾವುದೇ ಕಲ್ಮಶವಿಲ್ಲದೆ ಮನಃಪೂರ್ವಕವಾಗಿ ಕೆಲಸ ಮಾಡಿದ್ದೇವೆ’ ಎಂದರು.

 

ಇದೊಂದು ನಾಡು ಬಯಸಿದ ಕಾರ್ಯಕ್ರಮ ಎಂದ ಹಂಸಲೇಖ, ‘ಪತ್ರಕರ್ತ ಮಿತ್ರರು ಈ ಕಾರ್ಯಕ್ರಮ ಯಾವತ್ತೋ ಆಗಬೇಕಿತ್ತು ಎಂದು ಹೇಳಿದರು. ಇದು ನಿರೀಕ್ಷಿತ ಕಾರ್ಯಕ್ರಮ. ನೀವಿಬ್ಬರು ಯಾಕೆ ಸಿನಿಮಾ ಮಾಡೋಕೆ ಆಗುತ್ತಿಲ್ಲ ಎಂದು ಹಲವರು ಕೇಳಿದ್ದಾರೆ. ನಾವಿಬ್ಬರೂ ಜೊತೆಯಾಗಿ ಇರಬೇಕಾದರೆ ಸಿನಿಮಾದಲ್ಲೇ ಇರಬೇಕೇನೂ? ವೇದಿಕೆ ಮೇಲೆ ಜೊತೆಯಾಗಬಹುದು. ನಾವಿಬ್ಬರೂ ವೇದಿಕೆಯಲ್ಲಿ ಒಟ್ಟಾಗಿ ಇರುವುದರ ಜೊತೆಗೆ, ನಾವು ಮಾಡಿದ ಕೆಲಸಗಳನ್ನು ನೆನಪಿಸಿಕೊಳ್ಳುತ್ತೇವೆ. ಆ ನೆನಪಿನ ದೋಣಿಯಲ್ಲಿ ಅಭಿಮಾನಿಗಳನ್ನು ತೇಲಿಸುವ ಕೆಲಸವನ್ನು ಮಾಡುತ್ತೇವೆ. ಈ ಕಾರ್ಯಕ್ರಮವನ್ನು ವಿನಯ್ ಅಚ್ಚುಕಟ್ಟಾಗಿ ಸ್ಕ್ರಿಪ್ಟ್ ಮಾಡಿಕೊಂಡು ಬಂದಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಯಾದರೆ ಇಡೀ ರಾಜ್ಯದಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಮಾಡಬಹುದು’ ಎಂದರು.

 

Copyright@2018 Chitralahari | All Rights Reserved. Photo Journalist K.S. Mokshendra,