Love Mocktail-3.Film News

Saturday, March 07, 2026

 

ಬಿಡುಗಡೆಯಾಯ್ತು ಲವ್‌ಮಾಕ್ಟೇಲ್೩ ಚಿತ್ರದ ಟ್ರೈಲರ್!

ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ ನಟಿಸಿರುವ ಚಿತ್ರ ಲವ್ ಮಾಕ್ಟೇಲ್೩. ಮಾರ್ಚ್ ೧೯ರಂದು ಬಿಡುಗಡೆಗೊಳ್ಳಲಿರುವ ಈ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ. ಲವ್ ಮಾಕ್ಟೇಲ್ ಮೊದಲ ಆವೃತ್ತಿಯ ಟ್ರೈಲರ್ ಅನ್ನು ಕಿಚ್ಚಾ ಸುದೀಪ್ ಬಿಡುಗಡೆಗೊಳಿಸಿದ್ದರು. ಎರಡನೇ ಆವೃತ್ತಿಯ ಟ್ರೈಲರ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕಡೆಯಿಂದ ಬಿಡುಗಡೆಗೊಂಡಿತ್ತು. ಆದರೆ, ಮೂರನೇ ಆವೃತ್ತಿಯ ಈ ಟ್ರೈಲರ್ ಅನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಪುತ್ರಿ ಪರಿ ಬಿಡುಗಡೆಗೊಳಿಸಿರುವುದು ವಿಶೇಷ.

ಈ ಟ್ರೈಲರ್ ಬಿಡುಗಡೆಯ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಹಾಗೂ ಈ ಚಿತ್ರಕ್ಕೊಂದು ಹಾಡನ್ನು ಬರೆದಿರುವ ಶಶಾಂಕ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಸುಪ್ರೀತ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ಅಮೃತಾ ಅಯ್ಯಂಗಾರ್, ಗೀತರಚನೆಕಾರ ರಾಘವೇಂದ್ರ ಕಾಮತ್, ನಟ ಜಗದೀಶ್, ರೆಚೆಲ್ ಡೇವಿಡ್, ಶ್ರೀ ಕ್ರೇಜಿ ಮೈಂಡ್ಸ್, ಸಂವೃತ, ಅಭಿಲಾಶ್, ರಜನಿ,  ನಯಾರಾ ಮುಂತಾದವರು ಉಪಸ್ಥಿತರಿದ್ದರು.

ಈ ಪತ್ರಿಕಾಗೋಷ್ಠಿಯ ಕೇಂದ್ರಬಿಂದುಗಳಾದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ, ಲವ್ ಮಾಕ್ಟೇಲ್೩ ರೂಪುಗೊಂಡಿದ್ದರ ಹಿಂಚುಮುಂಚಿನ ವಿಚಾರಗಳನ್ನು ತೆರೆದಿಡುತ್ತಲೇ, ಇದರಲ್ಲಿ ಪಾತ್ರಗಳನ್ನು ನಿರ್ವಹಿಸಿರುವ ಕಲಾವಿದರ ನಟನಾ ಚಾತುರ್ಯವನ್ನು ತೆರೆದಿಟ್ಟರು. ಡಾರ್ಲಿಂಗ್ ಕೃಷ್ಣ ಮಾತನಾಡುತ್ತಾ `ಯಾವುದೋ ಕ್ಷಣದಲ್ಲಿ ಈ ಸಿನಿಮಾದ ಒಂದೆಳೆ ಕಥೆ ಹೊಳೆಯಿತು. ಅದರ ಗುಂಗುಹತ್ತಿಸಿಕೊಂಡ ನಂತರ ಮನೆಯಲ್ಲಿ ಕಥೆ ಬರೆಯಲು ಸಾಧ್ಯವಿಲ್ಲವೆನ್ನಿಸಿ ಮೂರು ದಿನಗಳ ಕಾಲ ಗೋವಾಕ್ಕೆ ಹೋಗಿದ್ದೆ. ಅಲ್ಲಿಯೇ ಕಥೆ ಚಿತ್ರಕಥೆಗೊಂದು ರೂಪುರೇಷೆ ಕೊಟ್ಟು ಮತ್ತೆ ಮರಳಿದ್ದೆ’ ಎನ್ನುತ್ತಲೇ ಕಥೆ ಹುಟ್ಟಿದ ಬಗೆಯನ್ನು ವಿವರಿಸಿದರು. ಇದಲ್ಲದೇ ಈ ಸಿನಿಮಾದ ಪಾತ್ರಗಳ ಬಗ್ಗೆ, ಅದನ್ನು ನಿರ್ವಹಿಸಿರುವ ಕಲಾವಿದರ ಬಗ್ಗೆ ಎಳೆ ಎಳೆಯಾಗಿ ಮಾಹಿತಿಗಳನ್ನು ಹಂಚಿಕೊಂಡರು.

ಮಿಲನಾ ನಾಗರಾಜ್ ಟ್ರೈಲರ್ ಸಿದ್ಧಗೊಂಡ ಬಗೆಗಿನ ವಿವರಗಳ ಮೂಲಕ ಮಾತುಗಳನ್ನಾರಂಭಿಸಿ `ಎಲ್ಲರೂ ಇಷ್ಟೊಂದು ಆತ್ಮವಿಶ್ವಾಸದಿಂದ ದೊಡ್ಡ ಸಿನಿಮಾದ ಮುಂದೆ ತೆರೆಗಾಣಲು ಸಿದ್ಧವಾದ ಬಗ್ಗೆ ಅಚ್ಚರಿಯಿಂದ ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ಕಾರಣವಾಗಿರೋದು ಸಿನಿಮಾ ಮೂಡಿ ಬಂದಿರುವ ರೀತಿ. ಈ ಚಿತ್ರ ಅಷ್ಟೊಂದು ಚೆನ್ನಾಗಿ ಮೂಡಿ ಬಂದಿದೆ ಅನ್ನೋ ವಿಶ್ವಾಸವಿದೆ. ಅದನ್ನು ಎಲ್ಲರೂ ನೋಡಿ, ಈ ಹಿಂದಿನ ಎರಡು ಸರಣಿಗಳಿಗೆ ಕೊಟ್ಟಷ್ಟೇ ಪ್ರೀತಿ, ಪ್ರೋತ್ಸಾಹ ಕೊಡುತ್ತಾರೆಂಬ ನಂಬಿಕೆ ಇದೆ’ ಎಂದರು.

ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ರೆಚೆಲ್ ಡೇವೀಡ್, ಶ್ವೇತಾ ಪ್ರಸಾದ್ ಮುಂತಾದವರು ಈ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ವಿವರಿಸುತ್ತಲೇ, ಇಂಥಾ ಅವಕಾಶ ದಕ್ಕಿದ ಬಗ್ಗೆ ಡಾಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,