Veera Kambala.News

Tuesday, February 17, 2026

 

ಅಚ್ಚರಿದಾಯಕ ವಿವರಗಳೊಂದಿಗೆ `ವೀರ ಕಂಬಳ’ ಟ್ರೈಲರ್ ಬಿಡುಗಡೆ!

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿ ಬಂದಿರುವ ಬಹುನಿರೀಕ್ಷಿತ ಚಿತ್ರ `ವೀರ ಕಂಬಳ’. ತುಳುನಾಡಿನ ಜನಜೀವನದೊಂದಿಗೆ ಹೊಸೆದುಕೊಂಡಿರುವ ಕಂಬಳ ಎಂಬುದು ಬಹು ಹಿಂದಿನಿಂದಲೂ ಚಿತ್ರರಂಗದವರನ್ನು ಸೆಳೆಯುತ್ತಾ ಬಂದಿದೆ. ಆದರೆ, ಅದನ್ನು ಇಡಿಯಾಗಿ ದೃಷ್ಯಗಳಲ್ಲಿ ಹಿಡಿದಿಡುವಂಥಾ ಪ್ರಯತ್ನಗಳು ನಡೆದಿರಲಿಲ್ಲ. ಮೂಲತಃ ದಕ್ಷಿಣ ಕನ್ನಡ ಭಾಗದೊಂದಿಗೆ ಕರುಳುಬಳ್ಳಿಯ ಬಂಧ ಹೊಂದಿರುವ ರಾಜೇಂದ್ರ ಸಿಂಗ್ ಬಾಬು ಅವರು ದಶಕಗಟ್ಟಲೆ ಶ್ರಮವಹಿಸಿ ಅಂಥಾದ್ದೊಂದು ಪ್ರಯತ್ನ ನಡೆಸಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಂಬಳದ ಸುತ್ತಾ ಘಟಿಸುವ ರೋಚಕ ಕಥನವಿರುವ ವೀರ ಕಂಬಳದ ಟ್ರೈಲರ್ ಅನ್ನು ನಾದಬ್ರಹ್ಮ ಹಂಸಲೇಖ ಬಿಡುಗಡೆಗೊಳಿಸಿದ್ದಾರೆ. ಇದೇ ಹೊತ್ತಿನಲ್ಲಿ ತುಳು ಆವೃತ್ತಿಯಾದ ಬಿರ್ದ್‌ದ ಕಂಬುಳದ ಟ್ರೈಲರ್ ಕೂಡಾ ಅನಾವರಣಗೊಂಡಿದೆ.

ಈ ಪತ್ರಿಕಾಗೋಷ್ಠಿಯಲ್ಲಿ ಟ್ರೈಲರ್ ಬಿಡುಗಡೆಗೊಳಿಸಿದ ನಾದಬ್ರಹ್ಮ ಹಂಸಲೇಖ ಅವರು ಅತ್ಯಂತ ಪ್ರೀತಿಯಿಂದ ಈ ಟ್ರೈಲರ್ ಅನ್ನು ಬಿಡುಗಡೆಗೊಳಿಸಿರೋದಾಗಿ ಮಾತುಗಳನ್ನು ಆರಂಭಿಸಿದರು. ಕಲೆ ಎಂಬುದು ಮುಪ್ಪಿಲ್ಲದ, ಸುಕ್ಕಿಲ್ಲದ ಕನ್ಯೆಯಿದ್ದಂತೆ. ಅದು ಮನುಷ್ಯನನ್ನು ಸದಾ ಜೀವಂತಿಕೆಯಿಂದ ಉಳಿಸುತ್ತದೆಂದಿರುವ ಹಂಸಲೇಖ, ವೀರತ್ವದ ಸಂಕೇತದಂತಿರೋ ಕಂಬಳಕ್ಕೆ ಕಲೆಯೆಂಬ ಕನ್ಯೆ ಕೊಟ್ಟ ತಾಂಬೂಲವೇ `ವೀರ ಕಂಬಳ’ ಎಂಬಂತೆ ಈ ಸಿನಿಮಾವನ್ನು ವಿಶ್ಲೇಷಿಸಿದರು. ತುಳುನಾಡಿನ ನೆಲದ ಘಮಲು ಹೊಂದಿರೋ ಕಂಬಳವನ್ನು ದೃಷ್ಯಕ್ಕೆ ಒಗ್ಗಿಸುವ ಸಾಹಸ ಮಾಡಿರುವ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಇಡೀ ತಂಡಕ್ಕೆ ಶುಭ ಕೋರುತ್ತಲೇ, ವೀರ ಕಂಬಳ ಭರ್ಜರಿ ಗೆಲುವು ಕಾಣಲೆಂದು ಹಾರೈಸಿದರು.

ಈ ಪತ್ರಿಕಾಗೋಷ್ಠಿಯ ಕೇಂದ್ರಬಿಂದುವಿನಂತಿರುವ ರಾಜೇಂದ್ರ ಸಿಂಗ್ ಬಾಬು ಅವರು ಕಥೆ ಹುಟ್ಟಿದ ಬಗ್ಗೆ, ಕಂಬಳವನ್ನು ದೃಷ್ಯಕ್ಕೆ ಒಗ್ಗಿಸಿದ ಬಗ್ಗೆ ಹಾಗೂ ಕಂಬಳದ ಸುತ್ತ ಹಬ್ಬಿಕೊಂಡಿರುವ ರೋಚಕ ಅಂಶಗಳ ಚಿತ್ರಣವನ್ನು ಕಟ್ಟಿಕೊಟ್ಟರು. ಈ ಹಾದಿಯಲ್ಲಿ ಜೊತೆಯಾದ ನಿರ್ಮಾಪಕರು, ತಂತ್ರಜ್ಞರು, ಕಲಾವಿದರು ಹಾಗೂ ತುಳು ರಂಗಭೂಮಿಯ ಹೆಸರಾಂತ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್, ನಿಖರ ಮಾಹಿತಿ ಒದಗಿಸಿದ ಗುಣಪಾಲ್ ಕಡಂಬ  ಮುಂತಾದವರನ್ನು ಅಭಿನಂದಿಸಿದರು. ಇದೇ ಹೊತ್ತಿನಲ್ಲಿ ವೀರ ಕಂಬಳದಲ್ಲಿ ಅಡಕವಾಗಿರುವ ವಿಶಿಷ್ಟ ಅಂಶಗಳ ಸುಳಿವನ್ನೂ ಬಿಟ್ಟುಕೊಟ್ಟರು. ಕಂಬಳದ ಸುತ್ತಾ ಮುಂಬೈ ಭೂಗತ ಜಗತ್ತಿನ ನಂಟಿರುವ ರೋಚಕ ಅಂಶಗಳೊಂದಿಗೆ ಈ ಕಥನ ಸೃಷ್ಟಿಯಾಗಿರುವ ಸುಳಿವನ್ನು ಜಾಹೀರು ಮಾಡಿದರು.

ಈ ಚಿತ್ರವನ್ನು ಬಾಬಾ’ಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರಿನಡಿಯಲ್ಲಿ ಡಾ. ವಿನಿತ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ರಾಜೇಶ್ ಕುಡ್ಲ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಆದಿತ್ಯ, ಪ್ರಕಾಶ್ ರೈ, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರೆ, ರಾಧಿಕಾ ನಾರಾಯಣ್ ವಿಶೇಷ ಪಾತ್ರಕ್ಕೆ ಜೀವ ತುಂಬಿದ್ದಾರೆ.  ತುಳು ಭಾಷೆಯಲ್ಲಿಯೂ ಬಿಡುಗಡೆಗೊಳ್ಳಲಿರುವ ಸದರಿ ಚಿತ್ರದಲ್ಲಿ ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ನಟರು ನಟಿಸಿದ್ದಾರೆ. ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಚಿತ್ರಕಥೆ ಸಂಭಾಷಣೆ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಆರ್.ಗಿರಿ ಛಾಯಾಗ್ರಹಣ, ಶ್ರೀನಿವಾಸ್ ಎಸ್ ಬಾಬು ಸಂಕಲನ, ಚಂದ್ರಶೇಖರ್ ಸುವರ್ಣ ಮುಲ್ಕಿ ಕಲಾ ನಿರ್ದೇಶನ, ಕಾಂತ ಪ್ರಸಾದನ ಹಾಗೂ ಭಾಷಾ ಅವರ ವಸ್ತ್ರವಿನ್ಯಾಸವಿರುವ ವೀರ ಕಂಬಳ ಫೆಬ್ರವರಿ 27ರಂದು ತೆರೆಗಾಣಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,