Yuva Sarkar.Film News

Thursday, February 12, 2026

 

ಶಿವರಾಜ್ ಕುಮಾರ್ ಕೈಜೋಡಿಸಿದ

 "ಯುವ ಸರ್ಕಾರ್ "

ಟೀಸರ್ ಮೆಚ್ಚಿದ ಕರುನಾಡ ಚಕ್ರವರ್ತಿ

  

  ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಅವರ ತಂಗಿಯ ಪುತ್ರ ಸಂತೋಷ್ ಕುಮಾರ್    ಈ ಹಿಂದೆ ಬಿಂದಾಸ್ ಗೂಗ್ಲಿ, ಕ್ಯಾಂಪಸ್ ಕ್ರಾಂತಿ ಸೇರಿದಂತೆ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದರು‌.  ಇದೀಗ  ಅವರು ಸದ್ದಿಲ್ಲದೆ ತಮ್ಮ ನಿರ್ದೇಶನದ 4 ನೇ ಚಿತ್ರದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಕೊನೇ ಹಂತಕ್ಕೆ ತಂದಿದ್ದಾರೆ. ಆ ಚಿತ್ರದ ಹೆಸರು ಯುವ ಸರ್ಕಾರ್. ತನ್ನ ಹಿಂದಿನ ಸಿನಿಮಾಗಳಂತೆ ಈ ಚಿತ್ರವನ್ನೂ ಸಹ ಸಂತೋಷ್ ಯೂಥ್ ಬೇಸ್ ಸಬ್ಜೆಕ್ಟ್ ಇಟ್ಟುಕೊಂಡೇ ಮಾಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ನ್ನು ವೀಕ್ಷಿಸಿ ಮೆಚ್ಚಿಕೊಂಡ  ಶಿವಣ್ಣ  ಸಂತೋಷ್ ನಮ್ಮ ಚಿಕ್ಕಮ್ಮನ ಮಗ, ಯುವಜನರಿಗೆ ಹತ್ತಿರವಾಗುವಂಥ ಒಂದೊಳ್ಳೆ ಕಂಟೆಂಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ ಎಂದು ಶುಭ ಹಾರೈಸಿದರು.  ಪ್ರೇಮಿಗಳ ದಿನದ ಅಂಗವಾಗಿ ಈ ಚಿತ್ರದ ರೊಮ್ಯಾಂಟಿಕ್ ಹಾಡನ್ನು ಹಿರಿಯ ನಿರ್ಮಾಪಕ  ಎಸ್.ಎ.ಚಿನ್ನೇಗೌಡ್ರು ಹಾಗೂ ಎಸ್.ಎ.ಗೋವಿಂದರಾಜ್ ಬಿಡುಗಡೆ ಮಾಡಿ ಮಾತನಾಡುತ್ತ ಸಂತೋಷ್  ನಮ್ಮ ಕುಟುಂಬದವನು, ನನ್ನ ಪ್ರೀತಿಯ ತಂಗಿ ಮಗ, ಈಗಿನ ಹುಡುಗರಿಗೆ ಉತ್ತಮ ಸಂದೇಶ ಇಟ್ಟುಕೊಂಡು ಈ ಚಿತ್ರ ಮಾಡಿದ್ದಾನೆ. ಒಳ್ಳೇದಾಗಲಿ ಎಂದು  ಶುಭ ಹಾರೈಸಿದರು. ನಂತರ ಚಿತ್ರದ ಟೀಸರನ್ನು ಭಾಮ ಹರೀಶ್, ಎ.ಗಣೇಶ್,‌ ಮಾಧವಿ ಸೇರಿ ಬಿಡುಗಡೆ ಮಾಡಿದರು.

   ಈ ಚಿತ್ರದಲ್ಲಿ ವೀರೇನ್ ಕೇಶವ್ ಅವರು ನಾಯಕನಾಗಿ ನಟಿಸಿದ್ದು, ನಾಯಕಿಯರಾಗಿ ಬಿಗ್ ಬಾಸ್ ಜಾಹ್ನವಿ, ಶೃತಿ ದೇಶಪಾಂಡೆ ಹಾಗೂ ಅಲ್ಫಿಯಾ ನಟಿಸಿದ್ದಾರೆ. ಈ ಚಿತ್ರವನ್ನು  ಕನ್ನಡ, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ನೇರವಾಗಿ ಚಿತ್ರೀಕರಿಸಲಾಗಿದೆ. ಹಾಗಾಗಿ ಚಿತ್ರದಲ್ಲಿ ಮೂರು ಭಾಷೆಯ ಕಲಾವಿದರೂ ನಟಿಸಿದ್ದಾರೆ. ನಟ ಧರ್ಮಕೀರ್ತಿರಾಜ್ ಹಾಗೂ ತಂದೆ ಕೀರ್ತಿರಾಜ್ ಕೂಡ ಚಿತ್ರದಲ್ಲಿ  ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.        

       ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ, ನಿರ್ಮಾಪಕ ಸಂತೋಷ್ ಕುಮಾರ್ , ತಾಯಿ ಮಗನ ಮಧ್ಯೆ ನಡೆಯುವ ಎಮೋಷನಲ್  ಕಥೆಯಿದು. ತಮಿಳಲ್ಲಿ ಯುವನ್ ರಾಬಿನ್ ಹುಡ್, ಹಿಂದಿಯಲ್ಲಿ ಅದೇ ಯುವ ಸರ್ಕಾರ್ ಎಂಬ ಹೆಸರನ್ನಿಟ್ಟಿದ್ದೇವೆ. ಆಕೆ ತನ್ನ ಮಗನನ್ನು ಗಾಂಧಿಯ ಥರ  ಬೆಳೆಸುತ್ತಾಳೆ, ಆದರೆ ಆ ಮಗ ಯಾಕೆ ರಾಬಿನ್ ಹುಡ್ ರೀತಿ ಆಗ್ತಾನೆ ಅನ್ನೋದೇ ಈ ಚಿತ್ರದ ಕಥೆ. ಆ ರಾಬಿನ್ ಹುಡ್ ಬಡವರಿಗೆ ಸಹಾಯ ಮಾಡ್ತಿದ್ದ, ಆತನನ್ನು ಒಬ್ಬ ದರೋಡೆಕೋರನ ಥರ ತೋರಿಸಿದ್ದರು. ಆದರೆ ನಾವಿಲ್ಲಿ ಜನಸ್ನೇಹಿಯಾಗಿ  ತೋರಿಸಿದ್ದೇವೆ. ನೇರವಾಗಿ ಮೂರು ಭಾಷೆಯಲ್ಲಿ ಚಿತ್ರೀಕರಿಸಿದ್ದೇವೆ.

ಅಸಹಾಯಕರಿಗೆ ಸಹಾಯ ಮಾಡುವುದೇ ಆತನ ವ್ಯಕ್ತಿತ್ವ. ಆತನ‌ ತಂದೆ ಒಬ್ಬ ದರೋಡೆಕೋರ‌, ಆದರೆ ತಾಯಿ ಆತನನ್ನು  ಗಾಂಧಿ ಥರ  ಬೆಳೆಸ್ತಾಳೆ. ಆದರೆ ಆತ ಈ‌ ಕಲಿಯುಗದಲ್ಲಿ ನಾನು ಗಾಂಧಿ ಥರ ಇರಲಿಕ್ಕಾಗಲ್ಲ ಎಂದು ಒಳ್ಳೆಯ ಕೆಲಸ ಮಾಡ್ತಾ ಹೋಗ್ತಾನೆ. ಮಧುವಂತಿ ಅವರ ಅಡ್ವೋಕೇಟ್ ಪಾತ್ರ ಮಾಡಿದ್ದಾರೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಚಿತ್ರದಲ್ಲಿ 5 ಹಾಡುಗಳಿದ್ದು,

4 ಫೈಟ್ ಗಳಿವೆ. ಇದೊಂದು ಇನ್ ಸ್ಪೈರ್ ಮಾಡುವಂಥ ಸಿನಿನಾ. ಚೆನ್ನೈ, ಚಿಕ್ಕಮಗಳೂರು, ಮೇಲುಕೋಟೆಯ ಸುತ್ತಮುತ್ತ  ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಏಪ್ರಿಲ್ ನಲ್ಲಿ ಚಿತ್ರದ ಫಸ್ಟ್ ಕಾಪಿ ಹೊರಬರಲಿದೆ. ಮೇ ಜೂನ್ ನಲ್ಲಿ ರಿಲೀಸ್ ಮಾಡುವ ಯೋಜನೆಯಿದೆ. ವೈಜಿ ಅವರು ಒಬ್ಬ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದಾರೆ ಎಂದು ವಿವರಿಸಿದರು.

ಉಳಿದಂತೆ ಚಿತ್ರದ ನಾಯಕ ವೀರೆನ್ ಕೇಶವ್, ಧರ್ಮ ಕೀರ್ತಿರಾಜ್, ನಾಯಕಿಯರು ತಮ್ಮ ಪಾತ್ರಗಳ ಕುರಿತಂತೆ ಮಾತನಾಡಿದರು. ಡಾ.ಶಿವಪ್ಪ ಮಾತನಾಡುತ್ತ ಸಂತೋಷ್ ಅವರಿಗೆ ಮಾರ್ಗದರ್ಶಕನಾಗಿ ಅವರ ಜತೆ ಇದ್ದೇನೆ. ಸಿನಿಮಾ ಬಗ್ಗೆ ಅವರಿಗಿರುವ ಕಾಳಜಿ ದೊಡ್ಡದು ಎಂದರು. ಬಿಗ್ ಬಾಸ್ ಅಶ್ವಿನಿಗೌಡ ಕೂಡ ಅತಿಥಿಯಾಗಿದ್ದರು

Copyright@2018 Chitralahari | All Rights Reserved. Photo Journalist K.S. Mokshendra,