Beedi Baduku.Film News

Monday, October 13, 2025

 

"ಬೀದಿ ಬದುಕು" ಟೀಸರ್ ಬಿಡುಗಡೆ:

 

ಚಿಂದಿ ಆಯುವ ಮಹಿಳೆಯ

ಬದುಕು ಬವಣೆಯ ಕಥೆ..

 

   ಬಹುತೇಕ ಭಕ್ತಿಪ್ರಧಾನ ಚಿತ್ರಗಳಿಗೆ ಹೆಸರಾದ ಪುರುಷೋತ್ತಮ್ ಓಂಕಾರ್, ಇದೀಗ ಹೊಟ್ಟೆ ಪಾಡಿಗಾಗಿ ಚಿಂದಿ ಆಯುವ ಮಹಿಳೆಯ ಜೀವನದ ಕಥೆ ಹೇಳಹೊರಟಿದ್ದಾರೆ.

   ರಸ್ತೆ ಬದಿಯಲ್ಲಿ ಚಿಂದಿ ಆಯುತ್ತ ಜೀವನ ಸಾಗಿಸುವ ಮಹಿಳೆಯೊಬ್ಬಳ ಜೀವನ, ತನ್ನ ಪುಟ್ಟ ಮಗನಿಗಾಗಿ ಆಕೆ ಪಡುವ ಕಷ್ಟ ಇದನ್ನೆಲ್ಲ ಮನಮುಟ್ಟುವ ಹಾಗೆ ತೆರೆಮೇಲೆ ತೆರದಿಡುವ ಆ ಚಿತ್ರದ ಹೆಸರು ಬೀದಿ ಬದುಕು.

  ನಟಿ ರೇಖಾ ಸಾಗರ್(ರೆಖಾರಾಣಿ) ಈ ಚಿತ್ರದ ನಾಯಕಿಯಾಗಿದ್ದು, ಜತೆಗೆ ಚಿತ್ರಕ್ಕೆ  ಬಂಡವಾಳ ಹೂಡುವ ಮೂಲಕ ನಿರ್ಮಾಪಕಿಯೂ ಆಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.ವೇದಿಕೆಯಲ್ಲಿ ನಟಿ ರೇಖಾಸಾಗರ್, ನಿರ್ದೇಶಕ ಪುರುಷೋತ್ತಮ್, ಗಣೇಶರಾವ್ ಕೇಸರಕರ್, ರಾಜ್ ಭಾಸ್ಕರ್, ಸಂಕಲನಕಾರ ಅನಿಲ್ , ಮಾ.ಸಾಕೇತ್, ಡಾ.ರೂಪೇಶ್ ಹಾಜರಿದ್ದರು.

ಸಾಕಷ್ಟು ಸೀರಿಯಲ್ ಅಲ್ಲದೆ ಕೆ.ಜಿ.ಎಫ್. ಚಿತ್ರದ ಹಪ್ಪಳದ ಮಲ್ಲಮ್ಮನಾಗಿ ರೇಖಾಸಾಗರ್ ಜನಪ್ರಿಯರಾದವರು. ಕುಡುಕ ಗಂಡನ ಉಪಟಳದ ಮಧ್ಯೆ ತನ್ನ  ಮಗನಿಗಾಗಿ ಆಕೆ ಏನೆಲ್ಲ ಕಷ್ಟಪಡುತ್ತಾಳೆ ಎಂಬುದೇ ಈ ಚಿತ್ರದ ಕಥಾಹಂದರ.

ನಿಜವಾದ ಸ್ಲಂ, ಗುಡಿಸಲುಗಳು, ಸ್ಮಶಾನ ಹಾಗೂ ಆಸ್ಪತ್ರೆಯಲ್ಲಿ  ಹೀಗೆ ಎಲ್ಲಾ ರಿಯಲ್ ಲೊಕೇಶನ್ ಗಳಲ್ಲೇ‌ 25 ದಿನಗಳ ಕಾಲ ಚಿತ್ರೀಕರಿಸಿದ್ದೇವೆ, ಅಲ್ಲದೆ ಇಡೀ ಚಿತ್ರವನ್ನು ಸಿಂಕ್ ಸೌಂಡ್ ನಲ್ಲಿ ಮಾಡಿದ್ದೇವೆ. ಹೆತ್ತ ತಾಯಿಯೊಬ್ಬಳು ತನ್ನ ಮಗನಿಗಾಗಿ ಏನೆಲ್ಲ ಹೋರಾಟ ಮಾಡುತ್ತಾಳೆ, ಅವಮಾನ ಅನುಭವಿಸುತ್ತಾಳೆ, ಅದು ಯಾತಕ್ಕೋಸ್ಕರ ಎಂಬುದನ್ನು ಚಿತ್ರದಲ್ಲೇ ನೋಡಿ ಎಂದರು.

    ನಾಯಕಿ, ನಿರ್ಮಾಪಕಿ ರೇಖಾ ರಾಣಿ ಮಾತನಾಡುತ್ತ ಇಂಥ ಪಾತ್ರವನ್ನು ನಾನೇ ಮಾಡಬೇಕೆಂದು ಚಾಲೆಂಜ್ ಆಗಿ ತೆಗೆದುಕೊಂಡೆ‌. ಸ್ಲಂಗಳಿಗೆ ಹೋಗಿ ಅವರು ಹೇಗಿರುತ್ತಾರೆ ಎಂದು ತಿಳಿದುಕೊಂಡೆ.  ಇರುವವರು ಇಲ್ಲವರಿಗೆ ಸಹಾಯ ಮಾಡಬೇಕು ಅನ್ನೋದೇ ನಮ್ಮ ಚಿತ್ರದ  ಉದ್ದೇಶ. ಚಿತ್ರವೀಗ ಬಿಡುಗಡೆಗೆ ಸಿದ್ದವಿದ್ದು ಸದ್ಯದಲ್ಲೇ ರಿಲೀಸ್ ಮಾಡುತ್ತಿದ್ದೇವೆ ಎಂದು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ವಿವರಿಸಿದರು.

 ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರಕ್ಕೆ ರಾಜ್ ಭಾಸ್ಕರ್ ಅವರ ಸಂಗೀತ ಸಂಯೋಜನೆ, ಮುತ್ತುರಾಜ್ ಅವರ ಛಾಯಾಗ್ರಹಣ, ಅನಿಲ್ ಅವರ ವಿ.ಎಫ್.ಎಕ್ಸ್. ಹಾಗೂ ಸಂಕಲನವಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,