*ರಾಷ್ಟ್ರ ಪ್ರಶಸ್ತಿ ಚಿತ್ರ ಕಂದೀಲು ಸಂತಸದ ಮಾತುಗಳು*
*ಕಂದೀಲು* ಚಿತ್ರವು 71ನೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರಿಂದ ನಿರ್ಮಾಪಕರು ಮತ್ತು ನಿರ್ದೇಶಕರು ಎಲ್ಲರಿಗೂ ಕೃತಜ್ಘತೆ ಹೇಳುವ ಸಲುವಾಗಿ ತಂಡದೊಂದಿಗೆ ಮಾಧ್ಯಮದ ಮುಂದೆ ಹಾಜರಿದ್ದು ತೆರೆಯ ಹಿಂದಿನ ಶ್ರಮವನ್ನು ನೆನಪು ಮಾಡಿಕೊಂಡರು. ಇದಕ್ಕೂ ಮುನ್ನ ಕಲಾವಿದರು, ತಂತ್ರಜ್ಘರಿಗೆ ಬೆಳ್ಳಿ ನಾಣ್ಯ ನೀಡಿ ಗೌರವಿಸಲಾಯಿತು.
*ನಿರ್ದೇಶಕಿ ಯಶೋಧ ಕೊಟ್ಟುಕತ್ತಿರ* ಮಾತನಾಡಿ ಸಿನಿಮಾ ಶುರುವಾದಾಗಿನಿಂದ ಎಲ್ಲರೂ ಶ್ರಮವಹಿಸಿ ಕೆಲಸ ನಿರ್ವಹಿಸಿದ್ದಾರೆ. ನಾನು ಎಲ್ಲರನ್ನು ನೆನೆಸಿಕೊಂಡು ಪ್ರಶಸ್ತಿ ಸ್ವೀಕರಿಸಿದೆ. ಯಾವ ರೀತಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ತೆಗೆದುಕೊಳ್ಳಬೇಕೆಂದು ಹಿಂದಿನ ದಿನ ಸುಮಾರು ನಾಲ್ಕು ತಾಸು ತಾಲೀಮು ನಡೆಸಿದರು. ಏಳೆಂಟು ವರ್ಷದಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡು, ಎರಡು ಕೊಡವ, ಎರಡು ಕನ್ನಡ ಸಿನಿಮಾ ನಿರ್ಮಾಣ ಮಾಡಿದ್ದೇನೆ. ನಂತರ ಸುಮನ್ ನಗರ್‌ಕರ್ ನಟನೆಯ ’ರಂಗಪವ್ರೇಶ’ ಚಿತ್ರದ ಮೂಲಕ ನಿರ್ದೇಶಕಿಯಾಗಿ ಪರಿಚಯವಾದೆ. ಪತಿ ನನ್ನ ಸಲುವಾಗಿ ನಿರ್ಮಾಣ ಮಾಡಿದರು. ಪ್ರೇಮಾಕಾರಂತ್, ಕವಿತಾಲಂಕೇಶ್ ನಂತರ ನಾನು ಮೂರನೇ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕಿ ಅಂತ ಹೇಳಿಕೊಳ್ಳಲು ಖುಷಿಯಾಗುತ್ತದೆ. ಅಲ್ಲದೆ ಭಾರತೀಯ ಚಿತ್ರರಂಗದಲ್ಲಿ ಮೊದಲಬಾರಿ ಒಂದೇ ಸಿನಿಮಾಕ್ಕೆ ಗಂಡ ಹೆಂಡತಿ ಪ್ರಶಸ್ತಿ ಪಡೆದುಕೊಂಡಿರುವುದು ಹೆಮ್ಮೆಯ ವಿಷಯ ಎಂದರು.
ಸೇನೆಯಿಂದ ನಿವೃತ್ತ ಆದ ತರುವಾಯ ಬಣ್ಣದಲೋಕದ ಕಡೆ ಆಸಕ್ತಿ ಬಂತು. ಚಿತ್ರೋತ್ಸವಗಳಿಗೆ ಸಿನಿಮಾ ಮಾಡುವುದು ನನ್ನ ಅಭಿರುಚಿಯಾಗಿದೆ. ನಾಗೇಶ್.ಎನ್ ಅವರ ’ಅನಾಮಿಕ ಮತ್ತು ಇತೆರೆ ಕಥೆಗಳು’ ಸಂಕಲನದಿಂದ ಆಯ್ದ ಹೆಣ ಎನ್ನುವ ಕಥೆ ಕಂದೀಲು ಚಿತ್ರ ಆಯಿತು. ಅವರು ಸಮಾಜದ ವ್ಯವಸ್ಥೆಯ ಬಗ್ಗೆ ಬರೆದಿದ್ದರು. ನಾವು ಎರಡು ಟ್ರ್ಯಾಕ್ ಬದಲಸಿಕೊಂಡೆವು. ಸದ್ಯದಲ್ಲೆ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು *ನಿಮಾಪಕ ಪ್ರಕಾಶ್ ಕಾರ್ಯಪ್ಪ* ಮಾಹಿತಿ ತೆರೆದಿಟ್ಟರು.
ಛಾಯಾಗ್ರಾಹಕನಾಗಿ ಕೆಲಸ ಮಾಡಿದ ಸಿನಿಮಾಕ್ಕೆ ಎರಡನೇ ಬಾರಿ ಪ್ರಶಸ್ತಿ ಸಿಕ್ಕಿರುವುದು ಖುಷಿಕೊಟ್ಟಿದೆ. ಇದಕ್ಕೆ ಅನ್ನದಾತರಿಗೆ ಥ್ಯಾಂಕ್ಸ್ ಹೇಳಬೇಕು. ಒಂದು ವರ್ಷ ಸ್ಕ್ರಿಪ್ಟ್‌ನಲ್ಲಿ ತೊಡಗಿಕೊಂಡಿದ್ದೇವು ಎಂಬುದು ಪಿ.ವಿ.ಆರ್.ಸ್ವಾಮಿ ನುಡಿಯಾಗಿತ್ತು.
2008ರಲ್ಲಿ ಕೇಂದ್ರ ಸಚಿವೆ ಸುಷ್ಮಸ್ವರಾಜ್ ಭಾರತ ಮೂಲದವರ ಹೆಣವನ್ನು ಬೇರೆ ದೇಶದಿಂದ ತರಿಸಿಕೊಡಲು ಸಹಾಯ ಮಾಡಿದ್ದರೂ, ವಿಳಂಬವಾಯಿತು. ಅಂತಹ ಸಮಯದಲ್ಲಿ ಮನೆಯ ಪರಿಸ್ಥಿತಿ, ಧಾರ್ಮಿಕ ಹಾಗೂ ರಾಜಕೀಯ ಸ್ಥಿತಿಗಳು ಹೇಗೆ ಇರುತ್ತದೆ. ಇವತ್ತಿಗೂ ಏಕಗವಾಕ್ಷಿ ಪದ್ದತಿ ಜಾರಿಯಾಗಿಲ್ಲ. ಇಂತಹ ಸೂಕ್ಷ ವಿಷಯಗಳನ್ನು ಇಟ್ಟುಕೊಂಡು ಕತೆ ಬರೆದಿದ್ದೆ ಎಂದು ಸಿನಿಮಾಕ್ಕೆ ಸಂಭಾಷಣೆ, ಸಂಕಲನ ಮಾಡಿರುವ ನಾಗೇಶ್.ಎನ್ ಹೇಳಿಕೊಂಡರು.
ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ’ಕಾಂತಾರ’ ಖ್ಯಾತಿಯ ಪ್ರಭಾಕರ.ಬ.ಕುಂದರ ಉಳಿದಂತೆ ವನಿತಾರಾಜೇಶ್, ಖುಷಿಕಾವೇರಮ್ಮ, ವೆಂಕಟೇಶ್‌ಪ್ರಸಾದ್, ಗುರುತೇಜಸ್, ಚಂದ್ರಕಾಂತ್, ರಮೇಶ್, ಸಂಗೀತ ಸಂಯೋಜಕ ಶ್ರೀಸುರೇಶ್ ಮುಂತಾದವರು ಸುಂದರ ಸಮಯದಲ್ಲಿ ಹಾಜರಿದ್ದು ಸಂತೋಷವನ್ನು ಹಂಚಿಕೊಂಡರು.