Maarutha.Film News

Wednesday, September 24, 2025

 

*ನವರಾತ್ರಿ ಸಂದರ್ಭದಲ್ಲಿ ಅನಾವರಣವಾಯಿತು  "ಮಾರುತ" ಚಿತ್ರದ "ನಮ್ಮಮ್ಮ ಸವದತ್ತಿ ಎಲ್ಲಮ್ಮ ಹಾಡು..*

 

 *ಭಕ್ತಿಪ್ರಧಾನ ಈ ಹಾಡಿಗೆ ಉಧೋ ಉಧೋ ಎನ್ನುತ್ತಿದೆ ಕರುನಾಡು*

 

ಹೆಸರಾಂತ ನಿರ್ದೇಶಕ ಡಾ||ಎಸ್ ನಾರಾಯಣ್ ನಿರ್ದೇಶನದ,  ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖ ಪಾತ್ರದ ಲ್ಲಿ ನಟಿಸಿರುವ ಮತ್ತು ಕೆ.ಮಂಜು - ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಬಹು ನಿರೀಕ್ಷಿತ ಚಿತ್ರ "ಮಾರುತ" ಚಿತ್ರಕ್ಕಾಗಿ ಎಸ್ ನಾರಾಯಣ್ ಅವರೆ ಬರೆದು ಸಂಗೀತ ಸಂಯೋಜಿಸಿರುವ "ನಮ್ಮಮ್ಮ ಸವದತ್ತಿ ಎಲ್ಲಮ್ಮ" ಎಂಬ ಹಾಡು ನವರಾತ್ರಿಯ ಸಂದರ್ಭದಲ್ಲಿ ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಯಿತು. ಅನನ್ಯ ಭಟ್ ಅವರ ಗಾಯನದಲ್ಲಿ ಮೂಡಿ ಬಂದಿರುವ ಈ ಹಾಡಿನಲ್ಲಿ ನಾಯಕಿ ಬೃಂದಾ ಆಚಾರ್ಯ ಅಭಿನಯಿಸಿದ್ದಾರೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.   

 

ಸಾರಸ್ವತ ಲೋಕಕ್ಕೆ ಅಪಾರ ಕೊಡಗೆ ನೀಡಿದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರ‌ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿದ ನಿರ್ದೇಶಕ ಎಸ್.ನಾರಾಯಣ್ ಅವರು "ಮಾರುತ" ಚಿತ್ರ ಸಾಗಿ ಬಂದ ಬಗ್ಗೆ ಮಾಹಿತಿ ನೀಡಿದರು. ರೈಲಿಗೆ ಎಂಜಿನ್ ಹೇಗೆ ಮುಖ್ಯವೊ ಹಾಗೆ ನಮ್ಮ ಚಿತ್ರದ ಬಹು ಮುಖ್ಯ ಪಾತ್ರಕ್ಕೆ ಪ್ರಮುಖ ಕಲಾವಿದರೊಬ್ಬರು ಬೇಕಾಗಿತ್ತು. ಆ ಪಾತ್ರದಲ್ಲಿ ದುನಿಯಾ ವಿಜಯ್ ಅಭಿನಯಿಸಿದ್ದಾರೆ. ವಿಜಯ್ ಅವರು ಬಹಳ ಅದ್ಭುತವಾಗಿ ಅಭಿನಯಿಸಿದ್ದಾರೆ. ಶ್ರೇಯಸ್ ಮಂಜು, ಬೃಂದಾ ಆಚಾರ್ಯ ಅವರ ಅಭಿನಯ ಕೂಡ ಚೆನ್ನಾಗಿದೆ. ಇನ್ನೂ ನಮ್ಮ ಚಿತ್ರದಲ್ಲಿ ತಾರಾ, ರಂಗಾಯಣ ರಘು, ಸಾಧುಕೋಕಿಲ, ಕಲ್ಯಾಣಿ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಸುಜಯ್ ಶಾಸ್ತ್ರಿ ಹೀಗೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಇದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅತಿಥಿಪಾತ್ರದಲ್ಲಿ ಅಭಿನಯಿಸಿದ್ದಾರೆ. "ಮಾರುತ", ನೋಡುಗರಿಗೆ ಬೇಕಾಗಿರುವ ಎಲ್ಲಾ ಅಂಶಗಳನ್ನೊಳಗೊಂಡ ಒಂದು ಕೌಟುಂಬಿಕ ಚಿತ್ರ. ಈ ಚಿತ್ರದಲ್ಲಿ ಇಷ್ಟು ಮಾತ್ರ ಅಲ್ಲ. ಯುವಜನತೆಗೆ ಎಚ್ಚರ ನೀಡುವ ಉತ್ತಮ ಸಂದೇಶ ಸಹ ಇದೆ. ಸಾಮಾಜಿಕ ಜಾಲತಾಣಗಳಿಂದ ಎಷ್ಟು ಉಪಯೋಗವಿದೆಯೊ, ಅದಕ್ಕಿಂತ ಹೆಚ್ಚು ಅಪಾಯವಿದೆ. ಈ ನಿಟ್ಟಿನಲ್ಲಿ ಪೋಷಕರು ಯುವಜನತೆಯ ಮೇಲೆ ಹೆಚ್ಚು ಗಮನ ನೀಡಬೇಕು ಎಂಬ ಸಂದೇಶ ಸಹ ಇದೆ. ಇಂದು ಬಿಡುಗಡೆಯಾಗಿರುವ ಹಾಡು ಕೂಡ ಚೆನ್ನಾಗಿದೆ. ನವರಾತ್ರಿ ಸಂದರ್ಭದಲ್ಲಿ ಈ ಹಾಡು ಅನಾವರಣವಾಗಿದೆ. ಅಕ್ಟೋಬರ್ 31 ಕ್ಕೆ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಎಸ್ ನಾರಾಯಣ್ ತಿಳಿಸಿದರು ‌.

ನಿರ್ದೇಶಕ ಎಸ್ ನಾರಾಯಣ್ ಅವರ ಶಿಸ್ತು ಎಲ್ಲರಿಗೂ ಮಾದರಿ. ನಾನು ಅವರಿಂದ ಈ ಚಿತ್ರದಲ್ಲಿ ಸಾಕಷ್ಟು ಕಲಿತಿದ್ದೇನೆ. ಇನ್ನೂ, ಇಂದು ಬಿಡುಗಡೆಯಾಗಿರುವ ಈ ಹಾಡು ತುಂಬಾ ಸುಮಧುರವಾಗಿದೆ. ನವರಾತ್ರಿಯ ಸಂದರ್ಭದಲ್ಲಿ ನಾಡಿನ ಜನತೆಗೆ ಒಂದೊಳ್ಳೆ ಭಕ್ತಿಗೀತೆಯನ್ನು ನಿರ್ದೇಶಕರು ನೀಡಿದ್ದಾರೆ‌. ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಅಕ್ಟೋಬರ್ 31 ರಂದು ತೆರೆಗೆ ಬರುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಟ ಶ್ರೇಯಸ್ ಮಂಜು. 

 

ಚಿತ್ರದ ನಿಜವಾದ ಹೀರೋ ಎಂದರೆ ಅದು ನಿರ್ಮಾಪಕ ಎಂದು ಮಾತನಾಡಿದ ನಿರ್ಮಾಪಕ ಕೆ.ಮಂಜು, ಎಸ್ ನಾರಾಯಣ್ ಹಾಗೂ ದುನಿಯಾ ವಿಜಯ್ ಅವರ ಜೊತೆಗೆ ಇದು ನನ್ನ ಮೂರನೇ ಚಿತ್ರ. ನನ್ನ ಸ್ನೇಹಿತರಾದ ರಮೇಶ್ ಯಾದವ್ ಅವರ ಜೊತೆಗೂಡಿ ಈಶಾ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯ ಮೂಲಕ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ಕಥೆಯನ್ನು ನಿರ್ದೇಶಕರು ಮಾಡಿಕೊಂಡಿದ್ದಾರೆ‌.  ನನ್ನ ಮಗ ಶ್ರೇಯಸ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾನೆ. ನನ್ನ ಮೇಲಿನ ಪ್ರೀತಿಯಿಂದ ದುನಿಯಾ ವಿಜಯ್, ರವಿಚಂದ್ರನ್  ಅವರು ಸೇರಿದಂತೆ ಅನೇಕ ಹಿರಿಯ ಕಲಾವಿದರು. ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇಂದು ಬಿಡುಗಡೆಯಾಗಿರುವ "ನಮ್ಮಮ್ಮ ಸವದತ್ತಿ ಎಲ್ಲಮ್ಮ" ಹಾಡಿನ ಒಂದು ದಿನದ ಚಿತ್ರೀಕರಣಕ್ಕೆ ಸುಮಾರು 65ಲಕ್ಷ ಖರ್ಚಾಗಿದೆ. ತೆರೆಯ ಮೇಲೆ ಈ ಹಾಡು ಅದ್ದೂರಿಯಾಗಿ ಮೂಡಿಬಂದಿದೆ.  ಅಕ್ಟೋಬರ್ 31 ರಂದು ಈ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದರು‌. 

 

ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರವನ್ನು ಕೆ.ಮಂಜು ಅವರ ಜೊತೆಗೂಡಿ ನಿರ್ಮಿಸಿರುವುದಕ್ಕೆ ಬಹಳ ಖುಷಿಯಿದೆ. ಇಂದು ಬಿಡುಗಡೆಯಾಗಿರುವ "ನಮ್ಮಮ್ಮ" ಹಾಡು ನಾಡಿನ ಜನರ ಮನ ಗೆದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ರಮೇಶ್ ಯಾದವ್ ತಿಳಿಸಿದರು . 

 

Copyright@2018 Chitralahari | All Rights Reserved. Photo Journalist K.S. Mokshendra,