Kantara.2.Film News

Monday, September 22, 2025

 

*ಕನ್ನಡ ಮಣ್ಣಿನ ಕಥೆಯನ್ನು ಇಡಿ ವಿಶ್ವಕ್ಕೆ ಕೊಂಡೊಯ್ಯುವ ಚಿತ್ರ ’ಕಾಂತಾರ ಅಧ್ಯಾಯ 1* '

 

*ಟ್ರೇಲರ್ ಮೂಲಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ ಈ ಚಿತ್ರ*

 

ಸದ್ಯ ಟ್ರೇಲರ್ ನಿಂದ ಇಡಿ ವಿಶ್ವದಲ್ಲಿ ಸದ್ದು ಮಾಡುತ್ತಿರುವ ಕನ್ನಡ ಚಿತ್ರವೆಂದರೆ ’ಕಾಂತಾರ-1'. ಟ್ರೇಲರ್ ಬಿಡುಗಡೆ ದಿನ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆದಿದ್ದು, ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಮಾತನಾಡಿ, ’ಕಾಂತಾರ’, ಪಂಚವಾರ್ಷಿಕ ಯೋಜನೆಯ ತರಹ ಐದು ವರ್ಷದ ದೊಡ್ಡ ಜರ್ನಿ ಎನ್ನಬಹುದು. ತುಂಬಾ ಕಷ್ಟಗಳನ್ನು ದಾಟಿ ರಿಲೀಸ್ ಹಂತಕ್ಕೆ ಬಂದಿದೆ. ಈ ಹಂತದಲ್ಲಿ ನನ್ನ ಮಡದಿ ಪ್ರಗತಿ ಎಷ್ಟು ದೇವರಿಗೆ ಹರಕೆ ಹೊತ್ತಿದ್ದಾಳೆ ಗೊತ್ತಿಲ್ಲ. ಇದು ಎಮೋಷನಲ್ ಜರ್ನಿ ಕೂಡ ಹೌದು. ನನ್ನ ಈ ಪ್ರಯತ್ನಕ್ಕೆ ಇಡಿ ತಂಡ ಶಕ್ತಿಯಾಗಿ ನಿಂತಿದೆ. ತುಂಬಾ ದೊಡ್ಡ ತಂಡವಿದು. ಫಾರೆಸ್ಟ್ ಮಿನಿಸ್ಟರ್ ನಿಂದ ಹಿಡಿದು ಊರಿನ ಜನರು ಸೇರಿದಂತೆ ಎಲ್ಲರೂ ನಮಗೆ ಸಪೋರ್ಟ್ ಮಾಡಿದ್ದಾರೆ. ತಂಡಕ್ಕೆ ಬೇಕಾಗಿದ್ದನ್ನು ಬಜೆಟ್ ಲೆಕ್ಕ ಹಾಕದೆ ನಿರ್ಮಾಪಕ ವಿಜಯ್ ಕಿರಗಂದೂರ್ ಕೊಟ್ಟಿದ್ದಾರೆ. ಮೂರು ತಿಂಗಳಿನಿಂದ ನಮ್ಮ ತಂಡ ನಿದ್ದೆ ಸರಿಯಾಗಿ ಮಾಡಿಲ್ಲ. ಅಷ್ಟು ಕೆಲಸ ಮಾಡುತ್ತಿದ್ದಾರೆ. ನಾಲ್ಕೈದು ಸಾರಿ ನಾನು ಸಾವಿನ ಬಾಗಿಲಿಗೆ ಹೋಗಿ ಬಂದಿದ್ದೇನೆ. ಆ ದೈವದ ಶಕ್ತಿ ನಮ್ಮ ಜೊತೆ ನಿಂತಿದೆ ಅನಿಸಿತು. ಈ ಚಿತ್ರಕ್ಕಾಗಿ ಸುಮಾರು ನಾಲ್ಕುವರೇ ಲಕ್ಷ ಜನರಿಗೆ ಊಟ ಹಾಕಿದ್ದಾರೆ ನಿರ್ಮಾಪಕರು. "ಕಾಂತಾರ" ಶುರು ಮಾಡಿದಾಗ ಸಿನಿಮಾ ಆಗಿತ್ತು. ಹೋಗತಾ ಭಾವನಾತ್ಮಕ ಪಯಣವಾಗಿದೆ. ನಮ್ಮ ಕನ್ನಡಿಗರು, ಮಾಧ್ಯಮಗಳು ಚಿತ್ರವನ್ನು ಇಷ್ಟು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಒಂದು ಲೈನ್ ಕಥೆಯಿಂದ ನನ್ನ ಮೇಲೆ ನಂಬಿಕೆ ಇಟ್ಟುಕೊಂಡು ನಿರ್ಮಾಪಕರು ಇಲ್ಲಿಯವರೆಗೂ ತಂದಿದ್ದಾರೆ’ ಎಂದು ತಿಳಿಸಿದರು.

ಚಿತ್ರದಲ್ಲಿ ರಾಣಿಯಾಗಿ ನಟಿಸಿರುವ ರುಕ್ಮಿಣಿ ವಸಂತ ಮಾತನಾಡಿ, ’ಇದು ಮನಸಿಗೆ ತುಂಬಾ ಹತ್ತಿರವಾದ ಚಿತ್ರ. ಕೆರಿಯರ್ ಪ್ರಾರಂಭದ ಹೆಜ್ಜಿಯಲ್ಲಿ ಇಂತಹ ಮಹತ್ವದ ಪಾತ್ರ ಸಿಕ್ಕಿದ್ದು ಖುಷಿ ಆಯ್ತು. ಈ ಪಾತ್ರ ಮಾಡೋದು ಚಾಲೆಂಜ್ ಆಗಿತ್ತು. ತಂಡದ ಸಪೋರ್ಟ್ ತುಂಬಾ ಸಿಗತಾ ಇತ್ತು.‌ ಹಾಗಾಗಿ ಅಷ್ಟಾಗಿ ಕಷ್ಟ ಎನಿಸಲಿಲ್ಲ’ ಎಂದರು.

 

’ಮೂರು ವರ್ಷ ನಾವು ಮನೆ ಬಿಟ್ಟು ಮಕ್ಕಳನ್ನು ಕಟ್ಟಿಕೊಂಡು ಕುಂದಾಪುರನಲ್ಲಿ ವಾಸವಿದ್ದು ಈ ಚಿತ್ರದಲ್ಲಿ ಪಾಲ್ಗೊಂಡಿದ್ದೇವೆ. ಹೊಂಬಾಳೆ ಫಿಲಂಸ್ ನಮಗೊಂದು ಫ್ಯಾಮಿಲಿ ಆಗಿ ನಿಂತಿದೆ. ಐದು ವರ್ಷಗಳ ಹಿಂದೆ ಪೋನ್ ನಲ್ಲಿ ಒಂದು ಲೈನ್ ಕಥೆ ಕೇಳಿ ಸಿನಿಮಾ ಮಾಡಲು ಒಪ್ಪಿದವರು ವಿಜಯ್ ಕಿರಗಂದೂರ್ ಅವರು. ಈ ಚಿತ್ರದಲ್ಲಿ ಕಾಸ್ಟೋಮ್ ಡಿಸೈನ್ ಮಾಡಿದ್ದು ಖುಷಿ ಇದೆ. ಈ ಚಿತ್ರದ ಹಿಂದೆ ಒಂದು ಶಕ್ತಿಯಿರುವುದು ಖಂಡಿತ’ ಎಂದು ಚಿತ್ರದ ವಸ್ತ್ರ ವಿನ್ಯಾಸಕಿ ಪ್ರಗತಿ ಶೆಟ್ಟಿ ಮಾಹಿತಿ ನೀಡಿದರು.

 

ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ’"ಕಾಂತಾರ" ಚಿತ್ರ, ಅಕ್ಟೋಬರ್ 2ರಂದು ಭಾರತದಾದ್ಯಂತ 7000ಕ್ಕೂ ಹೆಚ್ಚು ಸ್ಕ್ರೀನ್ ನಲ್ಲಿ ರಿಲೀಸ್ ಆಗುತ್ತದೆ. ಜೊತೆಗೆ 30 ದೇಶಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಇದೆ ಮೊದಲಬಾರಿಗೆ ಕನ್ನಡ ಸಿನಿಮಾವೊಂದು ಸ್ಪ್ಯಾನಿಷ್ ಭಾಷೆಯಲ್ಲಿ ಡಬ್ಬಿಂಗ್ ಕೂಡ ಆಗುತ್ತಿದೆ. ಮುಂದಿನ ದಿನಗಳಲ್ಲಿ ಭಾರತದ ಬೇರೆ ಮಹಾನಗರಗಳಲ್ಲೂ ಪ್ರೆಸ್ ಮೀಟ್ ಮಾಡುವ ಯೋಜನೆ ಇದೆ’ ಎಂದು ಹೇಳಿದರು.      

 

ವೇದಿಕೆಯಲ್ಲಿ ಭಾರತೀಯ ಅಂಚೆ ಇಲಾಖೆ ವತಿಯಿಂದ ಇಂಡಿಯನ್ ಪೋಸ್ಟ್‌ ಕವರ್ ಹಾಗೂ ಪಿಕ್ಚರ್ ಪೋಸ್ಟ್ ಕಾರ್ಡ್ ಬಿಡುಗಡೆ ಮಾಡಲಾಯಿತು.

 

ಬರಹಗಾರರಾದ ಅನಿರುದ್ಧ್ ಮಹೇಶ್, ಶನೀಲ್ ಗೌತಮ್ ಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕ ಆದರ್ಶ, ಸಾಹಸ ನಿರ್ದೇಶಕ ಅರ್ಜುನ್, ಸಂಕಲನಕಾರ ಸುರೇಶ್, ನೃತ್ಯ ನಿರ್ದೇಶಕ ಭೂಷಣ್  ಮುಂತಾದವರು ತಮ್ಮ "ಕಾಂತಾರ ಅಧ್ಯಾಯ ೧" ರ ಬಗ್ಗೆ ಅನುಭವ ಹಂಚಿಕೊಂಡರು.

Copyright@2018 Chitralahari | All Rights Reserved. Photo Journalist K.S. Mokshendra,