Vidhi.Film News

Thursday, November 13, 2025

 

*ಅಣ್ಣಾವ್ರ ಹಾಡು ಚಿತ್ರದ ಶೀರ್ಷಿಕೆ*

 

        ’ಅಪ್ಪು’ ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಹಾಡಿರುವ ’ವಿಧಿ ಎಂಥ ಘೋರ, ಪ್ರೇಮಿಗಳು ದೂರ ದೂರ’ ಸಾಂಗ್ ಹಿಟ್ ಆಗಿತ್ತು. ಈಗ ಅದೇ ಹೆಸರಿನಲ್ಲಿ *ವಿಧಿ* ಎನ್ನುವ ಸಿನಿಮಾವೊಂದು ಬಿಡುಗಡೆ ಹಂತಕ್ಕೆ ಬಂದಿದೆ. ಮೊನ್ನೆಯಷ್ಟೇ ಸಿರಿ ಮ್ಯೂಸಿಕ್ ಹೊರತಂದಿರುವ ಎರಡು ಹಾಡುಗಳ ಲೋಕಾರ್ಪಣೆ ಕಾರ್ಯಕ್ರಮ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಮೊಳಕಾಲ್ಮೂರು ಮೂಲದ *ಅನಸೂಯಮ್ಮ ಮತ್ತು ಟಿ.ಆನಂದ ದಂಪತಿಗಳು ಮಗನ ಸಲುವಾಗಿ ಸೆವೆನ್ ಸ್ಟಾರ‍್ಸ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ* ಮಾಡಿರುವುದು ಹೊಸ ಅನುಭವ. ’ಚಕ್ರಾದಿಪತಿ’ ನಿರ್ದೇಶನ ಮಾಡಿರುವ *ಮಲಿಯಣ್ಣ.ಹೆಚ್ ರಚಿಸಿ ಆಕ್ಷನ್ ಕಟ್* ಹೇಳಿದ್ದಾರೆ. ’ಹೆಣ್ಣಿಂದ ಕವನ, ಹೆಣ್ಣಿಂದ ಕದನ’ ಎಂಬ ಅರ್ಥಪೂರ್ಣ ಅಡಿಬರಹ ಇರಲಿದೆ.

 

        ಅರುಣ್‌ಕುಮಾರ್ ನಾಯಕ. ಹಿಂದಿಯಲ್ಲಿ ಮೂರು, ಕನ್ನಡದಲ್ಲಿ ಎರಡನೇ ಬಾರಿ ಕಾಣಿಸಿಕೊಂಡಿರುವ ಕನ್ನಡತಿ ಶಕುಂತಲಾ ನಾಯಕಿ. ಈಕೆಯ ಖಡಕ್ ಅಪ್ಪನಾಗಿ ಬಲರಾಜ್‌ವಾಡಿ, ಉಳಿದಂತೆ ಕೇಶವಮೂರ್ತಿ, ಚಂದ್ರಶೇಖರ್ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ಸೂರ್ಯೋದಯ, ಸಂಕಲನ ಅಭಿಷೇಕ್, ನೃತ್ಯ ಎ.ರವಿಕುಮಾರ್, ಸಾಹಸ ಶಿವು-ಮಲಿಯಣ್ಣ ಅವರದಾಗಿದೆ. ಬಳ್ಳಾರಿ, ಮೊಳಕಾಲ್ಮೂರು, ಅನಂತಪುರ, ಹೊಸಪೇಟೆ, ಸಂಡೂರು, ಚಿತ್ರದುರ್ಗ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಂದುಕೊಂಡಂತೆ ಆದರೆ, ಮುಂದಿನ ತಿಂಗಳು ತೆರೆಗೆ ತರಲು ತಂಡವು ಯೋಜನೆ ರೂಪಿಸಿಕೊಂಡಿದೆ.

         ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ಪ್ರಸಕ್ತ ಯುವಜನಾಂಗಕ್ಕೆ ಅನ್ವಯವಾಗುವಂತ ಸಿನಿಮಾ ಇದಾಗಿದೆ. ಮಕ್ಕಳು ಭವಿಷ್ಯದಲ್ಲಿ ಒಳ್ಳೆಯ ದಾರಿಗೆ ಬರಬೇಕೆಂದು ತಂದೆ ತಾಯಿ ಆಸೆ ಇಟ್ಟುಕೊಂಡಿರುತ್ತಾರೆ. ಅದೇ ರೀತಿ ಅವರು ಓದುವಾಗ ತಮಗೆ ತಿಳಿಯದೆ ತಪ್ಪು ಮಾಡಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಶೂಟಿಂಗ್ 25 ದಿವಸ ಅಂದುಕೊಂಡಿದ್ದು 70 ದಿನಕ್ಕೆ ಎಳೆದುಕೊಂಡು ಹೋಯಿತು. ಬದುಕಲ್ಲಿ ನಾವು ಅಂದುಕೊಂಡಂತೆ ಆಗುವುದಿಲ್ಲ. ಬೇರೆಯದೆ ಆಗುತ್ತದೆ. ಇದನ್ನೆ ವಿಧಿ ಎನ್ನುವುದು. ಸಿನಿಮಾದಲ್ಲಿ ಎರಡು ವಿಶೇಷತೆಗಳು ಇದೆ. ಹೀರೋ ಹಾಗೂ ವಿಲನ್ ಮುಖತಹ ಭೇಟಿಯಾಗುವುದಿಲ್ಲ. ಆದರೂ ಕೊನೆಯಲ್ಲಿ ಖಳನಾಯಕ ಆತನನ್ನು ಸಾಯಿಸುತ್ತಾನೆ. ಎರಡನೆಯದಾಗಿ ಕ್ಲೈಮಾಕ್ಸ್ ಇಪ್ಪತ್ತು ನಿಮಿಷ ಸಂಭಾಷಣೆಗಳು ಇಲ್ಲದೆ, ಹಿನ್ನಲೆ ಶಬ್ದದಲ್ಲೆ ಕೊನೆಗೊಳ್ಳುತ್ತದೆ. ಇದು ಏನು ಅಂತ ತಿಳಿಯಲು ನೀವುಗಳು ಚಿತ್ರಮಂದಿರಕ್ಕೆ ಬರಬೇಕು ಅಂತ ಮಲಿಯಣ್ಣ.ಹೆಚ್ ಅವಲತ್ತು ಮಾಡಿಕೊಂಡರು.

 

       ಮೂರು ಹಾಡುಗಳಿಗೆ ಸಾಹಿತ್ಯ, ಸಂಗೀತ ಒದಗಿಸಿರುವ ವಿ.ಮನೋಹರ್ ಹೇಳುವಂತೆ ಹಿರಿಯ ಸಂಗೀತ ನಿರ್ದೇಶಕರು ಮಾಡಿದ ಕೆಲಸವನ್ನು ಇಲ್ಲಿಯೂ ಮಾಡಿರುತ್ತೇನೆ. ಅಜಯ್‌ವಾರಿಯರ್ ಅಲ್ಲದೆ ನವ ಗಾಯಕರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಇಪ್ಪತು ನಿಮಿಷದ ದೃಶ್ಯಗಳಿಗೆ ಮ್ಯೂಸಿಕ್ ಸಂಯೋಜಿಸುವುದು ಸವಾಲಿನ ಕೆಲಸವಾಗಿತ್ತು. ಕಲಾವಿದರು ಮಾತನಾಡದ ದೃಶ್ಯಗಳಲ್ಲಿ ಸಂಗೀತದ ಮೂಲಕ ಮಾತನಾಡಿಸಲಾಗಿದೆ ಎನ್ನುತ್ತಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,