*ನಿಷಿದ್ಧ ಪಾಲಿಸಿದರೆ ಬದುಕು ಸುಖಮಯ*
ಹೊಸ ಪ್ರತಿಭೆಗಳ *ನಿಷಿದ್ಧ* ಚಿತ್ರವು ತೆರೆಗೆ ಬರಲು ಅಣಿಯಾಗಿದೆ. ಪ್ರಚಾರದ ಕೊನೆ ಹಂತವಾಗಿ ಟ್ರೇಲರ್ ಮತ್ತು ಹಾಡು ಬಿಡುಗಡೆ ಕಾರ್ಯಕ್ರಮ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಶ್ರೀ ಅಂಜನಿ ತನಯ ಮೂವೀಸ್ ಬ್ಯಾನರ್ ಅಡಿಯಲ್ಲಿ ಕೂರ್ಗ್ ಮೂಲದ ಉದ್ಯಮಿ *ಸಿ.ಬಿ.ಬೋಪಯ್ಯ (ಜಗನ್) ಬಂಡವಾಳ* ಹೂಡಿದ್ದಾರೆ. ಹಲವು ನಿರ್ದೇಶಕರ ಬಳಿ ಕೆಲಸ ಕಲಿತಿರುವ *ಸುಸಮಯ ದಿನೇಶ್ ಬರವಣಿಗೆ ಮತ್ತು ಆಕ್ಷನ್ ಕಟ್* ಹೇಳಿದ್ದಾರೆ.
ನಾಯಕ ಅಂಜನ್‌ತಮ್ಮಯ್ಯನನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಯುವತಿಯರಾಗಿ ಶ್ವೇತಾಪೂಜಾರಿ ಮತ್ತು ಶೃತಿರಮೇಶ್ ನಟಿಸಿದ್ದಾರೆ. ಹೀರೋಗೆ ಮಾರ್ಗದರ್ಶನ ನೀಡುವ ಪಾತ್ರದಲ್ಲಿ ಶಿವಕುಮಾರ್ ಆರಾಧ್ಯ. ಇವರೊಂದಿಗೆ ದಿನೇಶ್.ಹೆಚ್.ಸಿ, ಲಾಲುಸಾಬ್, ಮಂಜುನಾಥ್ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಸಂಗೀತ ಮನುರಾಜ್, ಛಾಯಾಗ್ರಹಣ ನಿರಂಜನ್ ಬೋಪಣ್ಣ, ಸಂಕಲನ ಸುನಯ್.ಎಸ್.ಜೈನ್, ಸಾಹಸ ರಾಕೆಟ್ ವಿಕ್ರಂ, ನೃತ್ಯ ರಾಮುಕುಮಾರ್-ಗೌರಿಶಂಕರ್ ಅವರದಾಗಿದೆ. ಮಡಕೇರಿ, ಕುಮಟೂರು ಪುರಾತನ ಏರ್ಮಾಡು ದೇವಸ್ಥಾನದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದೇ ತಿಂಗಳು ಸಿನಿಮಾವನ್ನು ಜನರಿಗೆ ತೋರಿಸಲು ವಿತರಕ ಕುಮಾರ್ ಯೋಜನೆ ಹಾಕಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಕೆಲವೊಮ್ಮೆ ನಾವುಗಳು ಇಂತಹ ಕೆಲಸಗಳನ್ನು ಮಾಡಬಾರದು ಎಂಬ ನಿಷೇದವಿದ್ದರೂ ಹಠ ಮಾಡಿ ಅದನ್ನು ಮಾಡಲು ಹೋದಾಗ ಭಿನ್ನ ಭಿನ್ನ ಅವಘಡಗಳಿಗೆ ಸಿಲುಕುತ್ತೇವೆ. ನಾಲ್ಕು ನಿರುದ್ಯೋಗಿ ಯುವಕರು ಇಂತಹುದೇ ವಿಷಯಗಳ ಹಿಂದೆ ಹೋದಾಗ ಕಷ್ಟಕ್ಕೆ ಸಿಲುಕುತ್ತಾರೆ. ಅದರಿಂದ ಮುಂದೆ ಅಗಬಹುದಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಊಹಿಸಲಾಗದ ದೃಶ್ಯಗಳು ಹಾಗೂ ಅಂದುಕೊಂಡಂತ ಸನ್ನಿವೇಶಗಳು ಬಾರದೆ ನೋಡುಗರ ಕುತೂಹಲ ಕೆರಳಿಸುತ್ತದೆ. ಕಷ್ಟಪಟ್ಟು ಇಷ್ಟದಿಂದ ಹಾರರ್ ಸಿನಿಮಾ ಸಿದ್ದಪಡಿಸಿದ್ದೇವೆ. ಮಾಧ್ಯಮದ ಸಹಕಾರಬೇಕೆಂದು ಸುಸಮಯ ದಿನೇಶ್ ಕೋರಿಕೊಂಡರು.