ಕೋಣನ ಧ್ಯಾನದಲ್ಲಿ ಕೋಮಲ್ - ತನಿಷಾ!
ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ನಾಯಕಿ ಪಾತ್ರದ ಜತೆಯಲ್ಲೇ ನಿರ್ಮಾಪಕಿಯಾಗಿಯೂ ಗುರುತಿಸಿಕೊಳ್ಳುತ್ತಿರುವ ಚಿತ್ರವೇ ಕೋಣ. ತನಿಷಾ ಮತ್ತು ಚಿತ್ರದ ನಾಯಕ ಕೋಮಲ್ ಕುಮಾರ್ ಜತೆ ನಡೆಸಿದ ಮಾತುಕತೆಯಲ್ಲಿ ಈ ಜೋಡಿ ಹಂಚಿಕೊಂಡ ವಿಶೇಷ ಮಾಹಿತಿಗಳು ಇಲ್ಲಿವೆ.
ನಟಿಯಾಗುವ ಕನಸು ಕಂಡಿದ್ದ ತನಿಷಾ ಕುಪ್ಪಂಡ ತಮಿಳು ಭಾಷೆಯಲ್ಲೂ ಅಭಿನಯಿಸಿದ್ದಾರೆ. ಇಂಥದೇ ಒಂದು ಸಂದರ್ಭದಲ್ಲಿ ಖುಷ್ಬೂ ನಟನೆಯೊಂದಿಗೆ ನಿರ್ಮಾಪಕಿಯಾಗಿಯೂ ಕಾರ್ಯನಿರ್ವಹಿಸುವುದನ್ನು ಕಣ್ಣಾರೆ ಕಾಣುವ ಅವಕಾಶ ಇವರಿಗೆ ದೊರಕಿತ್ತು. ಅಲ್ಲಿ ನಿರ್ಮಾಪಕಿಯಾಗಿ ಖುಷ್ಬೂಗೆ ದೊರಕಿದ ಸ್ಥಾನಮಾನ ಕಂಡ ಬಳಿಕ ತಾನು ಕೂಡ ನಿರ್ಮಾಪಕಿ ಆಗುವಕನಸು ಕಂಡರು. ಇದೀಗ ಕೋಣ ಸಿನಿಮಾದ ಮೂಲಕ ಅದು ನೆರವೇರಿದ ಸಂಭ್ರಮ ತನಿಷಾರದ್ದಾಗಿದೆ. ಇಲ್ಲಿ ತನಿಷಾ ಪಾಲಿಗೆ ಮತ್ತೊಂದು ಖುಷಿಯೂ ಇದೆ. ಅದೇನೆಂದರೆ ತನಿಷಾ ಪಾಲಿಗೆ ನಟನಾ ಪ್ರಧಾನ ಪಾತ್ರವೊಂದು ಕೂಡ ಲಭಿಸಿದೆ.
ಕೋಮಲ್ ಸಿನಿಮಾದಿಂದ ಸಿನಿಮಾಗೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಬಂದವರು. ಈ ಬಾರಿಯಂತೂ ಕೋಣದೊಂದಿಗೆ ಸೇರಿ ಸಾಹಸ ಮೆರೆದಿದ್ದಾರೆ. ನಾರಾಯಣ ಎನ್ನುವ ತನ್ನ ಪಾತ್ರದೊಂದಿಗೆ ಅಘೋರಿಯಾಗಿಯೂ ಕಾಣಿಸಿರುವುದಾಗಿ ಕೋಮಲ್ ಹೇಳುತ್ತಾರೆ. ಮಂತ್ರವಾದಿಯ ಪಾತ್ರಕ್ಕೆ ಅಗತ್ಯವಾದ ವಿಚಾರಗಳನ್ನು ವಿಕಿಪೀಡಿಯ, ಯೂಟ್ಯೂಬ್ ನೋಡಿ ಅಭ್ಯಾಸ ಮಾಡಿದ್ದೇನೆ ಎಂದು ಕೋಮಲ್ ಹೇಳುತ್ತಾರೆ. ಚಿತ್ರದಲ್ಲಿ ಹಿಂದಿನ ಕಾಲದ ಕಥೆ ಇದೆ. ಆದರೆ ಎಲ್ಲವೂ ಆ ಕಾಲಕ್ಕೆ ಪರ್ಫೆಕ್ಟ್ ಆಗಿರುತ್ತೆ ಎಂದು ಹೇಳಲು ಸಾಧ್ಯವಿಲ್ಲ.
ಆದರೆ ರಾತ್ರಿಯಲ್ಲೇ ಹೆಚ್ಚಿನ ದೃಶ್ಯಗಳು ಇರುವ ಕಾರಣ ಲೊಕೇಶನ್ ಯಾವುದು ಎನ್ನುವುದು ಹೆಚ್ಚು ಸಮಸ್ಯೆಯಾಗುವುದಿಲ್ಲ. ಬೇರೆ ಭಾಷೆಗೂ ಹೊಂದಿಕೊಳ್ಳುವಂತಿದೆ. ಕೋಣ ಎಲ್ಲ ಭಾಷೆಯ ಮಂದಿಗೂ ಇಷ್ಟವಾಗುವಂಥ ಚಿತ್ರ ಎನ್ನುವುದು ಕೋಮಲ್ ಅಭಿಮತ. ಚಿತ್ರದ ಹಾಡುಗಳ ಬಗ್ಗೆ ಕೋಮಲ್ ಸಂತೃಪ್ತರಾಗಿದ್ದು ಹಾಡಿನ ರೈಟ್ಸ್ ತಾವೇ ಪಡೆದಿದ್ದಾರೆ. ಹೃದಯ ಸಮುದ್ರ ಕಲಕಿ.. ಹಾಡಿನ ಖ್ಯಾತಿಯ ಸಂಗೀತ ನಿರ್ದೇಶಕ ಸಂಗೀತರಾಜರ ಪುತ್ರ ಸುಕುಮಾರ್ ಹಿನ್ನೆಲೆ ಸಂಗೀತ ನೀಡಿರುವು ಅದು ಕೂಡ ಚೆನ್ನಾಗಿ ಮೂಡಿ ಬಂದಿದೆ ಎನ್ನುತ್ತಾರೆ ಕೋಮಲ್.
ಕೋಮಲ್ ಈ ಸಿನಿಮಾದ ಶಕ್ತಿ. ಅವರು ನಟರಾಗಿ ಮಾತ್ರ ಮನಗೆದ್ದಿಲ್ಲ. ಇಲ್ಲಿ ನನಗೆ ನಿರ್ಮಾಣದಲ್ಲಿ ಹೇಗೆ ಬಜೆಟ್ ಫ್ರೆಂಡ್ಲಿಯಾಗಿ ಸಿನಿಮಾ ಮಾಡಬಹುದು ಎಂದು ಕಲಿಸಿಕೊಟ್ಟಿದ್ದಾರೆ ಎನ್ನುತ್ತಾರೆ. ಈ ವಾರಾಂತ್ಯದಲ್ಲಿ ತೆರೆಗೆ ಬರಲಿರುವ ನಮ್ಮ ಚಿತ್ರ ಖಂಡಿತವಾಗಿ ಪ್ರೇಕ್ಷಕರಿಗೆ ಮೆಚ್ಚುಗೆಯಾಗಬಲ್ಲದು ಎನ್ನುವ ನಿರೀಕ್ಷೆ ತನಿಷಾರದ್ದಾಗಿದೆ.