*ಯಶ್ ಅಮ್ಮನ ’ಕೊತ್ತಲವಾಡಿ’ ಸಿನಿಮಾದ ರಾಜ ನೀನು..ರಾಣಿ ನಾನು ಹಾಡು ರಿಲೀಸ್*
*ಕೊತ್ತಲವಾಡಿ ಸಿನಿಮಾದ ಮೆಲೋಡಿ ಗೀತೆ ಬಿಡುಗಡೆ... ರಾಜ ನೀನು, ರಾಣಿ ನಾನು ಎಂದ ಪೃಥ್ವಿ-ಕಾವ್ಯಾ*
ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ನಿರ್ಮಾಣ, ಶ್ರೀರಾಜ್ ನಿರ್ದೇಶನದ ’ಕೊತ್ತಲವಾಡಿ’ ಸಿನಿಮಾ ಮುಂದಿನ ತಿಂಗಳು, ಆಗಷ್ಟ್ 1ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಮನೆಮಾಡಿದೆ. ’ಕೊತ್ತಲವಾಡಿ’ ಪ್ರಾಜೆಕ್ಟ್ ಶ್ರೀರಾಜ್ ನಿರ್ದೇಶನದ ಮೊಟ್ಟಮೊದಲ ಚಿತ್ರವಾಗಿದ್ದು, ಒಂದೊಳ್ಳೆ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಜ್ಜಾಗಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯ ಭರದಿಂದ ಸಾಗಿದ್ದು, ಇದೀಗ ಕೊತ್ತಲವಾಡಿ ಸಿನಿಮಾದ ರಾಜ ನೀನು, ರಾಣಿ ನಾನು ಎಂಬ ಮೆಲೋಡಿ ಗೀತೆ ರಿಲೀಸ್ ಆಗಿದೆ.
ಕೊತ್ತಲವಾಡಿ ಸಿನಿಮಾದ ಹೊಸ ಹಾಡು ಎಂಆರ್ ಟಿ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದೆ. ಗೌಸ್ ಪೀರ್ ಸಾಹಿತ್ಯ ಬರೆದ ರಾಜ ನಾನು ರಾಣಿ ನೀನು ಗೀತೆಗೆ ನಿಶಾನ್ ರೈ ಹಾಗೂ ಸುರಭಿ ಭಾರದ್ವಾಜ್ ಕಂಠ ಕುಣಿಸಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ಹಾಡಿಗಿದೆ.
ಕೊತ್ತಲವಾಡಿ ಎಂಬ ಊರಿನಲ್ಲಿ ನಡೆಯುವ ಕಥೆ ಇದಾಗಿದ್ದು, ಹಳ್ಳಿ ಹೈದನಾಗಿ ಪೃಥ್ವಿ ಅಂಬಾರ್ ರಗಡ್ ಅವತಾರ ತಾಳಿದ್ದು, ನಾಯಕಿಯ ಪಾತ್ರದಲ್ಲಿ ಕಾವ್ಯ ಶೈವ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಾಜೇಶ್ ನಟರಂಗ ಅವರು ಪೊಲೀಸ್‌ಅಧಿಕಾರಿಯಾಗಿ ನಟಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಈ ಚಿತ್ರವನ್ನ ನಿರ್ಮಿಸಿದ್ದಾರೆ. ತಮ್ಮ PA ಪ್ರೊಡಕ್ಷನ್ಸ್ ಮೂಲಕವೇ ಈ ಚಿತ್ರವನ್ನ ಪ್ರೊಡ್ಯೂಸ್ ಮಾಡಿದ್ದಾರೆ. ಇದು ಇವರ ಮೊದಲ ನಿರ್ಮಾಣದ ಚಿತ್ರವೇ ಆಗಿದೆ. ಈ ಮೂಲಕ ಪುಷ್ಪ ಅರುಣ್ ಕುಮಾರ್ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಹೆಜ್ಜೆ ಇಟ್ಟಿದ್ದಾರೆ.
ಸಿನಿಮಾದ ಹಾಡುಗಳಿಗೆ ವಿಕಾಸ್ ವಸಿಷ್ಠ ಸಂಗೀತ ನೀಡಿದ್ದಾರೆ. ಹೀರೋ ಇಂಟ್ರೊಡಕ್ಷನ್ ಹಾಗೂ ಹಿನ್ನೆಲೆ ಸಂಗೀತವನ್ನು ಅಭಿನಂದನ್ ಕಶ್ಯಪ್ ಸಂಯೋಜಿಸಿದ್ದಾರೆ. ಕಾರ್ತಿಕ್ ಎಸ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ರಾಮಿಸೆಟ್ಟಿ ಪವನ್ ಸಂಕಲನ ನೋಡಿಕೊಂಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್, ಪ್ರಮೋದ್ ಮರವಂತೆ, ಗೌಸ್ ಪಿರ್ ಸಾಹಿತ್ಯ ಬರೆದಿದ್ದಾರೆ. ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ ನೀಡಿದ್ದಾರೆ.