Sangeeta Bar& Restaurant(SBR),News

Tuesday, July 01, 2025

 

 

*ಕೋಮಲ್ ಹೊಸಚಿತ್ರಕ್ಕೆ ಟೈಟಲ್ ಫಿಕ್ಸ್*

 

*ಮತ್ತೊಂದು ಕಾಮಿಡಿ ಕಮಾಲ್ ಮಾಡಲು ಕೋಮಲ್ ರೆಡಿ*

 

*’ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಮುಂದೆ ಕೋಮಲ್*

 

ನಟ ಕೋಮಲ್ ಕುಮಾರ್ ಸದ್ದಿಲ್ಲದೆ ಹೊಸಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. ಹೌದು, ಕೋಮಲ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಎಂದು ಹೆಸರಿಡಲಾಗಿದ್ದು, ಇದೀಗ ಈ ಸಿನಿಮಾದ ಟೈಟಲ್ ಪೋಸ್ಟರ್ ಪ್ರೋಮೋ ಮತ್ತು ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಹಿಂದೆ ‘ಕತ್ತಲೆ ಕೋಣೆ’, ‘ಇನಾಂದಾರ್’, ‘ಗುಂಮ್ಟಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಜ್ಯೋತಿ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ವಿಕಾಸ್ ಎಸ್. ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.

 

ಇನ್ನು ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಸಿನಿಮಾದಲ್ಲಿ ನಾಯಕ ಕೋಮಲ್ ಅವರಿಗೆ ಅನುಷಾ ರೈ ನಾಯಕಿಯಾಗಿ ಜೋಡಿಯಾಗುತ್ತಿದ್ದಾರೆ. ನಟಿ ಮೇಘನಾ ರಾಜ್ ಕೂಡ ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಎಂ. ಕೆ. ಮಠ, ಪ್ರಕಾಶ್ ತುಮ್ಮಿನಾಡು, ವರ್ಧನ್ ತೀರ್ಥಹಳ್ಳಿ, ಸಂದೇಶ್ ಶೆಟ್ಟಿ ಆಜ್ರಿ, ಸಿರಿಜಾ, ಪ್ರಶಾಂತ್ ಸಿದ್ಧಿ, ವಜ್ರಧೀರ್ ಜೈನ್, ಕಾರ್ತಿಕ್ ರಾವ್, ನಾಗರಾಜ್ ಬೈಂದೂರ್, ಕರಣ್ ಕುಂದರ್, ಚಿತ್ರಕಲಾ ರಾಜೇಶ್, ಸಿರಿ ಸೇರಿದಂತೆ ಅನೇಕರು ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಟೈಟಲ್ ಬಿಡುಗಡೆ ಬಳಿಕ ಮಾತನಾಡಿದ ನಾಯಕ ನಟ ಕೋಮಲ್, ‘ಸಿನಿಮಾದ ಟೈಟಲ್ಲೇ ಹೇಳುವಂತೆ, ಇದೊಂದು ವಿಭಿನ್ನ ಸಿನಿಮಾ. ಎರಡು ಕಾಲ ಘಟ್ಟದಲ್ಲಿ ಈ ಸಿನಿಮಾದ ಕಥೆಯನ್ನು ನಿರ್ದೇಶಕರು ವಿಭಿನ್ನವಾಗಿ ಹೇಳುತ್ತಿದ್ದಾರೆ. ಕಾಮಿಡಿ, ಮನರಂಜನೆಯ ಜೊತೆ ಬೇರೆ ಒಂದಷ್ಟು ವಿಷಯಗಳು ಕೂಡ ಈ ಸಿನಿಮಾದಲ್ಲಿರಲಿದೆ. ಈ ಸಿನಿಮಾದಲ್ಲಿ ಒಂದು ಗೆಟಪ್ ನಲ್ಲಿ ನಾನು ಸಿನಿಮಾ ಡೈರೆಕ್ಟರ್ ಪಾತ್ರ ಮಾಡಲಿದ್ದು, ಮತ್ತೊಂದು ಪಾತ್ರದ ಬಗ್ಗೆ ಈಗಲೇ ಹೇಳಲಾರೆ. ಒಟ್ಟಿನಲ್ಲಿ ಎರಡು ಶೇಡ್ ಇರುವಂಥ ಪಾತ್ರ ಇಲ್ಲಿದೆ. ಸಿನಿಮಾದ ಬಗ್ಗೆ ಮತ್ತು ಪಾತ್ರದ ಬಗ್ಗೆ ಹೇಳೋದಕ್ಕೆ ಸಾಕಷ್ಟಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಇನ್ನಷ್ಟು ಮಾತನಾಡುವುದಿದೆ’ ಎಂದರು.

 

ನಟಿ ಮೇಘನಾ ರಾಜ್ ಮಾತನಾಡಿ, ‘ನಾನು ಸಿನಿಮಾದಿಂದ ದೂರವಾಗಿದ್ದೇನೆ ಎಂದು ಅನೇಕರು ಅಂದುಕೊಂಡಿದ್ದಾರೆ. ಆದರೆ ನಾನು, ನಿಜವಾಗಿಯೂ ಸಿನಿಮಾದಿಂದ ದೂರವಾಗಿಲ್ಲ. ಒಳ್ಳೆಯ ಕಥೆ, ಒಳ್ಳೆಯ ಪಾತ್ರಗಳು, ನನಗೆ ಇಷ್ಟವಾಗುವಂತ ಪಾತ್ರಗಳು ಸಿಕ್ಕರೆ, ಖಂಡಿತವಾಗಿಯೂ ಸಿನಿಮಾ ಮಾಡುತ್ತೇನೆ. ಈಗಾಗಲೇ ಮಲೆಯಾಳಂನಲ್ಲೂ ಒಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ. ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಬಹಳ ದಿನಗಳ ನಂತರ ನಾನು ಕನ್ನಡದಲ್ಲಿ ಅಭಿನಯಿಸುತ್ತಿರುವ ಸಿನಿಮಾ. ಈ ಸಿನಿಮಾದ ಕಥೆಯನ್ನು ನಿರ್ದೇಶಕರು ಹೇಳಿದ ಕೂಡಲೇ ಇಷ್ಟವಾಗಿ ಪಾತ್ರ ಮಾಡಲು ಒಪ್ಪಿಕೊಂಡೆ. ಈ ಸಿನಿಮಾದಲ್ಲಿ 19ನೇ ಶತಮಾನದಲ್ಲಿ ಬರುವ ರಾಜಮನೆತನದ ಮಹಿಳೆಯ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ನನಗೆ ಇದೊಂದು ಹೊಸತರದ ಪಾತ್ರ. ನೋಡುಗರಿಗೂ ನನ್ನ ಪಾತ್ರ ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ’ ಎಂದರು.

 

‘ಕನ್ನಡದಲ್ಲಿ ಇದೊಂದು ವಿಭಿನ್ನ ಸಿನಿಮಾವಾಗಿ ಮೂಡಿಬರಲಿದೆ ಎಂಬ ವಿಶ್ವಾಸವಿದೆ. ಕಳೆದ ಐದಾರು ತಿಂಗಳಿನಿಂದ ಈ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ಕೆಲಸಗಳು ನಡೆಯುತ್ತಿದೆ. ತುಂಬ ಚೆನ್ನಾಗಿ ಸಿನಿಮಾ ಬರುತ್ತಿದೆ. ಕನ್ನಡಿಗರು ಇಂಥ ಸಿನಿಮಾಗಳನ್ನು ನೋಡಿ ಗೆಲ್ಲಿಸುತ್ತಾರೆ’ ಎಂದರು ನಿರ್ಮಾಪಕ ವಿಕಾಸ್ ಎಸ್. ಶೆಟ್ಟಿ

 

‘ಕೋಮಲ್ ಅವರನ್ನು ಹಿಂದೆಂದೂ ನೋಡಿರದ ರೀತಿಯಲ್ಲಿ ಈ ಸಿನಿಮಾದಲ್ಲಿ ಕಾಣುತ್ತಾರೆ. ಇಡೀ ಸಿನಿಮಾದ ಮೊದಲರ್ಧ ಹಾಸ್ಯಭರಿತವಾಗಿ ಸಾಗಿದರೆ, ದ್ವಿತೀಯರ್ಧ ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳ ಜೊತೆ ಸಾಗುತ್ತದೆ. ಹಿಸ್ಟಾರಿಕಲ್ ಕಾಮಿಡಿ ಶೈಲಿಯ ಈ ಸಿನಿಮಾದಲ್ಲಿ ಮನರಂಜನೆಯ ಜೊತೆಗೆ, ಇಂದಿನ ಕೆಲ ಸಾಮಾಜಿಕ ವಿಷಯಗಳನ್ನೂ ಹೇಳುತ್ತಿದ್ದೇವೆ. ಕುಂದಾಪುರ, ಕಾಸರಗೋಡು, ಕೇರಳ, ರಾಜಸ್ಥಾನ, ಹಂಪಿ ಮೊದಲಾದ ಕಡೆಗಳಲ್ಲಿ ಚಿತ್ರೀಕರಣಕ್ಕೆ ಪ್ಲಾನ್ ಮಾಡಿಕೊಂಡಿದ್ದೇವೆ. ಮುಂದಿನ ವರ್ಷದ ಆರಂಭದಲ್ಲಿಯೇ ಈ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಿದೆ’ ಎಂದರು ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ.

 

‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರದ ಹಾಡುಗಳಿಗೆ ಪ್ರಾಂಶು ಜಾ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಸಜೀಶ್ ರಾಜ್ ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನವಿದೆ.   ಮೂಡಿಬರುತ್ತಿರುವ ಹಿಸ್ಟಾರಿಕಲ್ ಕಾಮಿಡಿ ಜಾನರ್ ನ

"ಸಂಗೀತ ಬಾರ್ & ರೆಸ್ಟೋರೆಂಟ್" ಚಿತ್ರದ ಟೆಕ್ನಿಷಿಯನ್ ಪ್ರೋಮೋ ಬಿಡುಗಡೆಯಾಗಿದೆ.

 

 

 

Copyright@2018 Chitralahari | All Rights Reserved. Photo Journalist K.S. Mokshendra,