*ಭಾರತದ ಹಿರಿಮೆ ಸಾರುವ ಓ ಮೈ ಇಂಡಿಯಾ*
ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ *ಓ ಮೈ ಇಂಡಿಯಾ* ಚಿತ್ರದ ಹಾಡು ಮತ್ತು ಟ್ರೇಲರ್ ಬಿಡುಗಡೆ ಸಮಾರಂಭವು ಶ್ರೀ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಹಿರಿಯ ನಟ ಎಂ.ಎಸ್.ಉಮೇಶ್, ಸಮಾಜ ಸೇವಕ ಮಹೇಂದ್ರಮುನ್ನೋತ್ ಮತ್ತು ನಿರ್ಮಾಪಕ ಡಾ.ಲಯನ್.ಎಸ್.ವೆಂಕಟೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.
ಸಾನ್ವಿಶ್ರೀಯಾ ಪ್ರೊಡಕ್ಷನ್ಸ್ ಅಡಿಯಲ್ಲಿ ಹಾಸನದ *ರಮ್ಯಾಲೋಕೇಶ್ ನಿರ್ಮಾಣ* ಮಾಡಿದ್ದಾರೆ. ಹಿರಿಯ ಪತ್ರಕರ್ತ *ಜಿ.ಎನ್.ಕೃಷ್ಣಮೂರ್ತಿ ಸಿನಿಮಾಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್* ಹೇಳಿದ್ದಾರೆ. *ರತನ್‌ದೇವ್ ನಾಯಕ*. *ಶಿಕ್ಷಕಿಯಾಗಿ ಧರಣಿಶ್ರೀ ನಾಯಕಿ* ವಿಶೇಷ ಪಾತ್ರದಲ್ಲಿ ಸಾಯಿಕುಮಾರ್. ಉಳಿದಂತೆ ಅವಿನಾಶ್,ಸುಚೇಂದ್ರಪ್ರಸಾದ್, ಚಿತ್ರಾಶಣೈ, ಇರ್ಷಾದ್ ಅಹ್ಮದ್ ಮುಂತಾದವರು ನಟಿಸಿದ್ದಾರೆ. ಮೂರು ಹಾಡುಗಳಿಗೆ ಜಿ.ಭಟ್ ಸಂಗೀತ, ಛಾಯಾಗ್ರಹಣ ಅಭಿನಂದನ್, ಸಾಹಸ ಕೌರವ ವೆಂಕಟೇಶ್, ಸಂಕಲನ ವಿನಯ್.ಜಿ.ಆಲೂರು, ನೃತ್ಯ ಎಂ.ಆರ್.ಕಪಿಲ್ ಅವರದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರತನ್‌ದೇವ್, ಚಿತ್ರದಲ್ಲಿ ಜಿಲ್ಲಾಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಭಾರತದ ಪ್ರಸ್ತುತ ಪರಿಸ್ಥಿತಿಯನ್ನು ಮನಗಂಡು ಸುಧಾರಣೆ ಮಾಡಲು ಚಿಂತನೆ ನಡೆಸುತ್ತೇನೆ. ಸರ್ಕಾರಿ ಅಧಿಕಾರಿ ಮನಸ್ಸು ಮಾಡಿದರೆ ಸಮಾಜವನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ಪಾತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ ಎಂದರು.
ನಿರ್ದೇಶಕರು ಹೇಳುವಂತೆ ನಮ್ಮ ಹೆಮ್ಮೆಯ ಭಾರತವನ್ನು ಬೇರೆ ದೇಶದವರು ಹೊಗಳುತ್ತಿದ್ದಾರೆ. ಆದರೆ ನಮ್ಮವರು ಇಲ್ಲಿಯ ಗಾಳಿ, ಶಿಕ್ಷಣ ಪಡೆದು ಬದುಕನ್ನು ಕಟ್ಟಿಕೊಳ್ಳಲು ನೆರೆಯ ದೇಶಕ್ಕೆ ಹೋಗಿ, ನಾಡನ್ನು ಹರಾಜು ಹಾಕುತ್ತಿದ್ದಾರೆ. ದೇಶದ ಭ್ರಷ್ಟ ವ್ಯವಸ್ಥೆಯನ್ನು ಹೇಗೆ ಸರಿಪಡಿಸಕೊಳ್ಳಬೇಕು. ದೇಶದ ಅಭಿವೃದ್ದಿಗಾಗಿ ಪ್ರಧಾನ ಮಂತ್ರಿಯಿಂದ ಗ್ರಾಮ ಪಂಚಾಯತಿ ಸದಸ್ಯರು ಇದ್ದರೂ ಏನೂ ಮಾಡಲಿಕ್ಕೆ ಆಗುತ್ತಿಲ್ಲ. ಶೇಕಡ 95ರಷ್ಟು ಪ್ರಜೆಗಳನ್ನು, ಶೇಕಡ 5ರಷ್ಟು ರಾಜಕಾರಣಿಗಳು ಆಳುತ್ತಿದ್ದಾರೆ. ಪ್ರಜೆಗಳೇ ಪ್ರಭುಗಳು ಆಗಬೇಕಾದವರು, ಇಂದು ಚುನಾಯಿತ ಪ್ರತಿನಿಧಿಗಳ ಹತ್ತಿರ ಗುಲಾಮರಾಗುತ್ತಿದ್ದೇವೆ. ಇಂತಹ ಕೆಟ್ಟ ವ್ಯವಸ್ಥೆ ತೊಲಗಬೇಕು. ಇದರ ವಿರುದ್ದ ಒಬ್ಬ ಹೋರಾಡಲು ಮುಂದೆ ಬಂದರೆ, ಇತರರು ಕೈ ಜೋಡಿಸುತ್ತಾರೆ. ಆಗ ದೇಶ ಸರಿಯಾದ ಹಾದಿಗೆ ಬರುತ್ತದ. ನಮ್ಮ ದೇಹ ನಮ್ಮ ಸಮಾಜ, ಇದನ್ನು ನಾವುಗಳು ಅರ್ಥ ಮಾಡಿಕೊಳ್ಳಬೇಕು. ಇಂತಹ ಅರ್ಥಪೂರ್ಣ ಅಂಶಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನ ದೃಷ್ಟಿಕೋನ ಬದಲಾಗುತ್ತದೆಂದು ಜಿ.ಎನ್.ಕೃಷ್ಣ ಮೂರ್ತಿ ಹೇಳಿದರು.
ಬೆಂಗಳೂರು, ಹಾಸನ, ಸಕಲೇಶಪುರ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸ್ವಾತಂತ್ರ ದಿನಾಚರಣೆ ಸಮಯದಲ್ಲಿ ಚಿತ್ರವನ್ನು ಜನರಿಗೆ ತೋರಿಸಲು ನಿರ್ಮಾಪಕರು ಯೋಜನೆ ರೂಪಿಸಿಕೊಂಡಿದ್ದಾರೆ