Gangs Of UK.News

Tuesday, September 02, 2025

 

ಗ್ಯಾಂಗ್ಸ್ ಆಫ್ ಯುಕೆ ಟ್ರೈಲರ್ ಉಪೇಂದ್ರ ಬಿಡುಗಡೆ

 

ಸೆನ್ಸಾರ್ ಮಂಡಳಿ ನಿರ್ಲಕ್ಷ್ಯ

ರವಿ ಶ್ರೀವತ್ಸ ಬೇಸರ

 

     ಡೆಡ್ಲಿ ಸೋಮ, ಮಾದೇಶ ಖ್ಯಾತಿಯ ರವಿ ಶ್ರೀವತ್ಸ ಅವರ ನಿರ್ಮಾಣ ಹಾಗೂ ನಿರ್ದೇಶನದ  ’ಗ್ಯಾಂಗ್ಸ್ ಆಫ್ ಯುಕೆ’ ಚಿತ್ರದ ಹಾಡು ಹಾಗೂ ಟ್ರೈಲರ್  ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ರಿಯಲ್ ಸ್ಟಾರ್ ಉಪೇಂದ್ರ ಅವರು ಟ್ರೈಲರ್ ಗೆ ಚಾಲನೆ ನೀಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ನಿರ್ಮಾಪಕ ಕೆ.ಮಂಜು, ಉಮೇಶ್ ಬಣಕಾರ್, ನ್ಯಾಯವಾದಿ ಟಿ.ಪ್ರಸನ್ನಕುಮಾರ್, ರಾಧಾಕೃಷ್ಣ ಅಡಿಗ, ಪ್ರವೀಣ್, ಉದಯ್, ಸೇತು ಮುಕುಂದನ್, ಥ್ರಿಲ್ಲರ್ ಮಂಜು  ಹಾಗೂ ರವಿ ಶ್ರೀವತ್ಸ ಅವರ ಹಿತೈಶಿಗಳು ಹಾಗೂ ಸ್ನೇಹಿತರನೇಕರು ಹಾಜರಿದ್ದರು‌.

    ತಮ್ಮ ಡೆಡ್ಲಿ ಆರ್ಟ್ಸ್ ಬ್ಯಾನರ್  ಮೂಲಕ ’ಗ್ಯಾಂಗ್ಸ್ ಆಫ್ ಯುಕೆ’ ಚಿತ್ರವನ್ನು ರವಿ ಶ್ರೀವತ್ಸ ಅವರೇ ನಿರ್ಮಿಸಿದ್ದಾರೆ.

 ಬಾಗಲಕೋಟೆಯ ಪಿಲ್ಲಾರಿ ಫಾಲ್ಸ್ ನಲ್ಲಿ ನಡೆದ ನೈಜ ಘಟನೆ ಇಟ್ಟುಕೊಂಡು ರವಿ ಶ್ರೀವತ್ಸ ಅವರು ಕಥೆಗಾರ ಎಂ.ಎಸ್‌. ರಮೇಶ್ ಜತೆಗೂಡಿ  ಈ ರಾ ಸಬ್ಜೆಕ್ಟ್ ಗೆ ಚಿತ್ರಕಥೆ, ಸಂಭಾಷಣೆ ಹೆಣೆದಿದ್ದಾರೆ.

ಈ ಸಂದರ್ಭದಲ್ಲಿ ಚಿತ್ರವನ್ನು ರಿಲೀಸ್ ಹಂತದವರೆಗೆ ತರುವಾಗ  ಎದುರಿಸಿದ ಸಂಕಷ್ಟಗಳನ್ನು ವಿವರಿಸಿದರು.

ಪ್ರಾದೇಶಿಕ ಸೆನ್ಸಾರ್ ಮಂಡಳಿ ವೈಲೆನ್ಸ್ ಆಗಿದೆ ಎಂಬ ಕಾರಣ ನೀಡಿ, ನಮ್ಮ ಚಿತ್ರವನ್ನು ಬ್ಯಾನ್ ಮಾಡಿದ್ದಲ್ಲದೆ, ಆರ್.ಸಿ.ಗೆ ಹೋಗಿ ಸೆನ್ಸಾರ್ ಮಾಡಿಸಿಕೊಳ್ಳಿ ಎಂದರು. ಅಲ್ಲದೆ ನಾವು ಕಷ್ಟಪಟ್ಟು ನಿರ್ಮಿಸಿದ ಸಿನಿಮಾನ ಸೆನ್ಸಾರ್ ಅಧಿಕಾರಿಗಳು ಪೂರ್ತಿ ವೀಕ್ಷಿಸದೆ ಬೇಜವಾಬ್ದಾರಿತನ ತೋರಿಸಿದರು‌. ಇದರಿಂದ ನನ್ನ ಮನಸಿಗೆ ತುಂಬಾ ನೋವಾಯಿತು. ನಂತರ ರಿವೈಸಿಂಗ್ ಕಮಿಟಿಗೆ ಹೋಗಿ ಚಿತ್ರವನ್ನು ಸೆನ್ಸಾರ್ ಮಾಡಿಸಿಕೊಂಡಿದ್ದಾಗಿ ಬೇಸರದಿಂದಲೇ  ವಿವರಿಸಿದರು.

  ರಕ್ತ ತನ್ನ ಕುರುಹನ್ನು ಬಿಟ್ಟು ಹೋಗುತ್ತೆ, ಜಿದ್ದು ಒಬ್ಬರಿಂದ ಒಬ್ಬರಿಗೆ ಟ್ರಾವೆಲ್ ಆಗುತ್ತೆ ಅನ್ನೋ ಕಾನ್ಸೆಪ್ಟ್ ಇಟ್ಟುಕೊಂಡು ರವಿ ಶ್ರೀವತ್ಸ ಈ ಚಿತ್ರವನ್ನು ನಿರೂಪಿಸಿದ್ದಾರೆ. ಭೀಮೆಯ ಮಡಿಲಲ್ಲಿ ಎಂಬ ಟ್ಯಾಗ್ ಲೈನ್ ಈ ಚಿತ್ರಕ್ಕಿದ್ದು ಚಿತ್ರವೀಗ ಬಿಡುಗಡೆ ಹಂತಕ್ಕೆ ಬಂದಿದ್ದು ಸದ್ಯದಲ್ಲೇ ರಿಲೀಸ್ ಮಾಡೋ ಸಿದ್ದತೆ ಮಾಡಿಕೊಂಡಿದ್ದಾರೆ ನಿರ್ದೇಶಕ ರವಿ ಶ್ರೀವತ್ಸ.

    ಒರಟ ಪ್ರಶಾಂತ್, ಜ್ಯೋತಿ ಶೆಟ್ಟಿ, ಕೋಟೆ ಪ್ರಭಾಕರ್, ಪದ್ಮಾ ವಾಸಂತಿ, ಮುನಿ ಅಲ್ಲದೆ ಕೆವಿ‌.ರಾಜು ಅವರ ಪುತ್ರ ಅಮೋಘ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋನು ಉಪಾಧ್ಯ, ಪ್ರವೀಣ್, ಉಗ್ರಂ ರೆಡ್ಡಿ, ಸತ್ಯ, ಧಿಲ್ಲಾನ್, ನವೀನ್, ಪ್ರಜ್ವಲ್ ಮಸ್ಕಿ, ಉಮೇಶ್, ವಿಕಾಸ್, ಹಿರಿಯನಟ ಬಾಲಕೃಷ್ಣ ರೀತಿ ಕಾಣುವ  ಟಂಕಸಾಲೆ ಉಮೇಶ್, ಮಹಂತೇಶ್ ಹುಲ್ಲೂರು ಸೇರಿ ಒಂದಷ್ಡು ಸ್ಥಳೀಯ ಪ್ರತಿಭೆಗಳನ್ನು  ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ನಿರ್ಮಾಪಕರಾಗಿ ಎಲ್.ಎನ್. ರೆಡ್ಡಿ ಅವರು ರವಿ ಶ್ರೀವತ್ಸ ಜೊತೆ ಕೈಜೋಡಿಸಿದ್ದಾರೆ.

 ನಟ ಮುನಿ ಕಾಳ ಎಂಬ ಪಾತ್ರದಲ್ಲಿ ನಟಿಸಿದ್ದು, ಬಾಗಲಕೋಟೆಯ ಬಿಸಿಲಲ್ಲಿ ಅನುಭವಿಸಿದ ಪರಿಪಾಟಲುಗಳನ್ನು ವಿವರಿಸಿದರು. ಕೋಟೆ ಪ್ರಭಾಕರ್, ಒರಟ ಪ್ರಶಾಂತ್ ತಮಗಾದ ಅನುಭವಗಳನ್ನು ಹೇಳಿಕೊಂಡರು. ಎಂ.ಎಸ್.ರಮೇಶ್ ಮಾತನಾಡಿ ರವಿ ೨ ವರ್ಷಗಳ ಹಿಂದೆ ಈ ಕಥೆ ಹೇಳಿದ್ದರು. ಬಾಗಲಕೋಟಿಗೆ ಹೋದಾಗ ನನ್ನ ಗುರುಗಳು (ಕೆವಿ.ರಾಜು) ನೆನಪಾದರು ಎಂದು ನೆನಪಿಸಿಕೊಂಡರು.

ನಟ,  ನಿರ್ದೇಶಕ ಉಪೇಂದ್ರ ಮಾತನಾಡುತ್ತ ನಾವು ಕಾಶಿನಾಥ್ ಸರ್ ಸ್ಕೂಲ್ ನಿಂದ ಬಂದ ನಂತರ ನಮಗೆ  ಇನ್ನೊಂದು ಸ್ಕೂಲ್ ಇದೆ ಅಂತ ಗೊತ್ತಾಯ್ತು. ಇವರೆಲ್ಲ ಅಲ್ಲಿದ್ದರು. ರವಿ ಶ್ರೀವತ್ಸ ತುಂಬಾ ಎಮೋಷನಲ್. ಅವರ ಸಿನಿಮಾ ಕೂಡ ಹಾಗೇ ಇರುತ್ತದೆ. ಎಲ್ಲಾ ಕಲಾವಿದರು ಚೆನ್ನಾಗಿ ಮಾಡಿದ್ದಾರೆ. ನಾನು ಎ ಸಿನಿಮಾ ಮಾಡಿದಾಗಲೂ  ಇದೇ ಸಿಚುಯೇಶನ್ ಎದುರಿಸಿದ್ದೆ. ಇಲ್ಲಿ ಪಾಸಿಟಿವ್ ವೈಬ್ರೇಶನ್ ಕಾಣಿಸ್ತಿದೆ ಎಂದರು.

ನಿರ್ಮಾಪಕ ಕೆ.ಮಂಜು ಮಾತನಾಡಿ ರವಿ ಈ ಸಿನಿಮಾನ ತುಂಬಾ ಕಷ್ಟಪಟ್ಟು ಮಾಡಿದ್ದಾರೆ ಎಂದರು.

 ನಂತರ ಉಮೇಶ್ ಬಣಕಾರ್ ಮಾತನಾಡಿ ನಾನು ಈ ಸಿನಿಮಾ ನೋಡಿದಾಗಲೇ ರವಿಗೆ ನಿಮ್ಮ ಚಿತ್ರ ಸೆನ್ಸಾರಾಗಲ್ಲ ಎಂದು ಹೇಳಿದ್ದೆ.  ಹಾಗೇ ಆಯಿತು. ಆದರೂ ಅವರು ಎಲ್ಲವನ್ನೂ ಗೆದ್ದು ಬಂದಿದ್ದಾರೆ ಎಂದರು.

ಪ್ರಸನ್ನಕುಮಾರ್ ಮಾತನಾಡುತ್ತ ಆರಂಭದಲ್ಲಿ ರವಿ ಶ್ರೀವತ್ಸ ನನ್ನ ಮನೆ ಬಾಡಿಗೆ ಕೇಳಿಕೊಂಡು ಬಂದಿದ್ದರು. ಆಗ ನಾನು ಸಿನಿಮಾದವ್ರಿಗೆ ಮನೆ ಕೊಡಲ್ಲ ಎಂದಿದ್ದೆ, ಸಿನಿಮಾ ಅದ್ಭುತವಾಗಿದೆ. ಒಂದೊಂದು ಸೀನ್ ನೋಡುವಾಗ ಮೈ ಜುಂ ಎನಿಸುತ್ತದೆ ಎಂದು  ಹೇಳಿದರು.

ಶಿಶುನಾಳ‌ ಷರೀಫರ  ಗೀತೆಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,