Film 45.News

Thursday, August 21, 2025

 

*ಡಿಸೆಂಬರ್ 25 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಬಹು ನಿರೀಕ್ಷಿತ ಮಲ್ಟಿಸ್ಟಾರರ್ ಪ್ಯಾನ್ ಇಂಡಿಯಾ ಚಿತ್ರ "45"* .

 

 ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ನಿರ್ದೇಶನದ ಹಾಗೂ ಸೂರಜ್ ಪ್ರೊಡಕ್ಷನ್ ಲಾಂಛನದಲ್ಲಿ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ “45”,  ಆಗಸ್ಟ್ 15ರಂದು ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ಸಿಜಿ ವರ್ಕ್ ಇನ್ನೂ ಪೂರ್ಣವಾಗಿರದ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿತ್ತು. ಈಗ ಡಿಸೆಂಬರ್ 25 ರಂದು "45" ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ನಿರ್ದೇಶಕ ಅರ್ಜುನ್ ಜನ್ಯ ಘೋಷಣೆ ಮಾಡಿದರು. ಆನಂತರ ಚಿತ್ರದ ಕುರಿತು ಮಾತನಾಡಿದರು.

 

ನಾವು ಈ ಹಿಂದೆ ನಮ್ಮ ಚಿತ್ರವನ್ನು ಆಗಸ್ಟ್ 15ರಂದು ಬಿಡುಗಡೆ ಮಾಡುವುದಾಗಿ ತಿಳಿಸಿದ್ದೆವು. ಕೆನಡಾದಲ್ಲಿ ನಮ್ಮ ಚಿತ್ರದ ವಿ.ಎಫ್.ಎಕ್ಸ್ ನಡೆಯುತ್ತಿದೆ. ನಮ್ಮ ಚಿತ್ರದಲ್ಲಿ ಸಿಜಿ ವರ್ಕ್ ಮಹತ್ವದ ಪಾತ್ರ ವಹಿಸಲಿದೆ. ಚಿತ್ರದಲ್ಲಿ ಶೇಕಡಾ 40% ಗ್ರಾಫಿಕ್ ಇರುತ್ತದೆ. ಕೆನಡಾದ "MARZ" ಸಂಸ್ಥೆಯಲ್ಲಿ ಸಾಕಷ್ಟು ನುರಿತ ಹಾಲಿವುಡ್ ತಂತ್ರಜ್ಞರು ವಿಎಫ್‌ಎಕ್ಸ್ ಕೆಲಸ ಮಾಡುತ್ತಿದ್ದಾರೆ.  ಸ್ವಲ್ಪ ತಡವಾದರೂ ಎಲ್ಲರೂ ಮೆಚ್ಚಿಕೊಳ್ಳುವ ಚಿತ್ರವನ್ನು ಪ್ರೇಕ್ಷಕರಿಗೆ ನೀಡುವ ಉದ್ದೇಶ ನಮ್ಮದು. ಇನ್ನೂ ಕೆಲವೆ ದಿನಗಳಲ್ಲಿ ಸಿಜಿ ವರ್ಕ್ ಪೂರ್ಣವಾಗಲಿದೆ. ಡಿಸೆಂಬರ್ 25 ರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಸಾಲುಸಾಲು ರಜೆ ಇದ್ದರೆ, ಜನರು ಕುಟುಂಬ ಸಮೇತ ಚಿತ್ರ ನೋಡಲು‌ ಬರುವುದಕ್ಕೆ ಸಮಯ ಸಿಗುತ್ತದೆ.  ಡಿಸೆಂಬರ್ 25 ರಂದು ಕ್ರಿಸ್ಮಸ್ ಹಬ್ಬ ಹಾಗೂ ಕ್ರಿಸ್ಮಸ್ ರಜೆಯ ಸಮಯ ಮತ್ತು ಅಂದು ಗುರುಗಳು ತಿಳಿಸಿರುವಂತೆ ಒಳ್ಳೆಯ ದಿನ ಕೂಡ. ಹಾಗಾಗಿ ಆ ದಿವಸ ನಮ್ಮ ಚಿತ್ರವನ್ನು ಬಿಡುಗಡೆ‌ ಮಾಡುತ್ತಿದ್ದೇವೆ. ಈ ಚಿತ್ರ ಆರಂಭವಾಗಲು ಶಿವರಾಜಕುಮಾರ್ ಅವರೆ ಕಾರಣ ಈ ಸಮಯದಲ್ಲಿ ಅವರಿಗೆ, ಉಪೇಂದ್ರ, ರಾಜ್ ಬಿ ಶೆಟ್ಟಿ ಅವರಿಗೆ ಹಾಗೂ ವಿಶೇಷವಾಗಿ ಚಿತ್ರವನ್ನು ಇಷ್ಟು ಪ್ರೀತಿಯಿಂದ ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಅರ್ಜುನ್ ಜನ್ಯ.

ನಿರ್ಮಾಪಕ ರಮೇಶ್ ರೆಡ್ಡಿ ಮಾತನಾಡಿ, ಇಂದು ತುಂಬಾ ಒಳ್ಳೆಯ ದಿವಸ ಹಾಗಾಗಿ ನಮ್ಮ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡುತ್ತಿದ್ದೇವೆ. ನಮ್ಮ"45" ಚಿತ್ರ ಇದೇ ಡಿಸೆಂಬರ್ 25 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಎಲ್ಲಾ ಅಂದುಕೊಂಡಂತೆ ಆದರೆ ಆಗಸ್ಟ್‌ 15 ಕ್ಕೆ ಚಿತ್ರ ಬಿಡುಗಡೆಯಾಗಬೇಕಾಗಿತ್ತು. ಚಿತ್ರದ ವಿ ಎಫ್ ಎಕ್ಸ್ ಚಿತ್ರದ ಕೆಲಸಗಳು ಕೆನಡಾದಲ್ಲಿ ನಡೆಯುತ್ತಿದೆ. ಮೈಸೂರಿನವರೆ ಆದ ಯಶ್ ಗೌಡ ಅವರು ಸಾರಥ್ಯದಲ್ಲಿ ನಮ್ಮ ಚಿತ್ರದ ವಿಎಫ್‌ಎಕ್ಸ್ ಕಾರ್ಯಗಳು ಬಿರುಸಿನಿಂದ ಸಾಗುತ್ತಿದೆ. ಇದು "MARZ" ಸಂಸ್ಥೆ ವಿ ಎಫ್ ಎಕ್ಸ್ ಮಾಡುತ್ತಿರುವ ಮೊದಲ ಕನ್ನಡ ಚಿತ್ರವೂ ಹೌದು. ಈವರೆಗೂ ನನಗೆ ತಿಳಿದಿರುವ ಹಾಗೆ ಕನ್ನಡದ ಯಾವುದೇ ಚಿತ್ರಗಳಲ್ಲಿ ಇಷ್ಟು ಗ್ರಾಫಿಕ್ ವರ್ಕ್ ಇಲ್ಲ. ನಾವು ಬೇಕು ಅಂತ ಅಷ್ಟು ಸಿಜಿ ವರ್ಕ್ ಮಾಡಿಸುತ್ತಿಲ್ಲ. ಸಿನಿಮಾ ಕಥೆ ಅದನ್ನು ಕೇಳುತ್ತದೆ. ಯಾವುದೇ ಕೊರತೆ ಬಾರದ ಹಾಗೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇನೆ. ನಮ್ಮ ಚಿತ್ರ ಪ್ರೇಕ್ಷಕರಿಗೆ ನಿರಾಸೆ ಮಾಡುವುದಿಲ್ಲ. ಅಂತಹ ಉತ್ತಮ ಚಿತ್ರವಾಗಿ "45" ಮೂಡಿ ಬರುತ್ತಿದೆ. ಚಿತ್ರದ ವಿತರಣೆ ಬಗ್ಗೆ ತೆಲುಗಿನ ಮೈತ್ರಿ ಮೂವಿ ಮೇಕರ್ಸ್ ಅವರು ವಿತರಣೆ ಹಕ್ಕು ಕೇಳಿದರು. ನಾನು ವಿ ಎಫ್ ಎಕ್ಸ್ ಕೆಲಸ ನಡೆಯುತ್ತಿದೆ. ಚಿತ್ರ ಪೂರ್ಣವಾದ ಬಳಿಕ ನಿಮಗೆ ತೋರಿಸುತ್ತೇನೆ. ಆನಂತರ ಮಾತನಾಡೋಣ ಎಂದು ಹೇಳಿದ್ದೇನೆ.   ಚಿತ್ರ ಉತ್ತಮವಾಗಿ ಮೂಡಿಬರಲು ಸಹಾಕಾರ ನೀಡುತ್ತಿರುವ ನಿರ್ದೇಶಕರಿಗೆ,‌ ನಾಯಕರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ನಿರ್ಮಾಪಕ ರಮೇಶ್ ರೆಡ್ಡಿ ಧನ್ಯವಾದ ತಿಳಿಸಿದರು.

 

Copyright@2018 Chitralahari | All Rights Reserved. Photo Journalist K.S. Mokshendra,