Nodiddu Sullagabahudu.News

Tuesday, August 12, 2025

 

*ಮೊದಲ ಹಾಡಿನಲ್ಲಿ "ನೋಡಿದ್ದು ಸುಳ್ಳಾಗಬಹುದು"* .  

 

 *ಹಾಡು ಬಿಡುಗಡೆ ಮಾಡಿ ಹಾರೈಸಿದ ಸಿನಿರಂಗದ ಗಣ್ಯರು* .                

 

ಅನಿಲ್ ಕುಮಾರ್ ಕೆ.ಆರ್ ನಿರ್ಮಾಣ ಮಾಡುವುದರೊಂದಿಗೆ ನಾಯಕನಾಗೂ ನಟಿಸಿರುವ, ವಿಜಯ್ ಚಲಪತಿ ನಿರ್ದೇಶನದ ಹಾಗೂ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ "ನೋಡಿದ್ದು ಸುಳ್ಳಾಗಬಹುದು" ಚಿತ್ರದ "ಕನಸುಗಳ ಮೆರವಣಿಗೆ" ಎಂಬ ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು. ಅನಿರುದ್ಧ್ ಶಾಸ್ತ್ರಿ ಬರೆದಿರುವ, ಗುಮ್ಮಿನೆನಿ ವಿಜಯ್ ಸಂಗೀತ ಸಂಯೋಜಿಸಿರುವ ಹಾಗೂ ಅನಿರುದ್ಧ್ ಶಾಸ್ತ್ರಿ ಮತ್ತು ಪೃಥ್ವಿ ಭಟ್ ಹಾಡಿರುವ ಈ ಹಾಡನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ‌ ನರಸಿಂಹಲು, ಉಪಾಧ್ಯಕ್ಷ ಶಿಲ್ಪ ಶ್ರೀನಿವಾಸ್ ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ತಮ್ಮ ಪ್ರೋತ್ಸಾಹಭರಿತ ಮಾತುಗಳ ಮೂಲಕ ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು

ನನಗೆ ಸುಮಾರು ಹತ್ತು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟು. "ಪೊಗರು" ಸೇರಿದಂತೆ ಹಲವು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಸ್ವತಂತ್ರ ನಿರ್ದೇಶಕನಾಗಿ ಇದು ಮೊದಲ ಚಿತ್ರ. ಅವಕಾಶ ನೀಡಿದ ನಿರ್ಮಾಪಕ ಅನಿಲ್ ಕುಮಾರ್ ಅವರಿಗೆ ಧನ್ಯವಾದ. ಇನ್ನೂ ಚಿತ್ರಕ್ಕೆ ಇದೇ ಶೀರ್ಷಿಕೆ ಏಕೆ ? ಎಂಬುದಕ್ಕೆ ಕಾರಣ ನಿಮಗೆ ಚಿತ್ರ ನೋಡಿದಾಗ ತಿಳಿಯುತ್ತದೆ. ಇದೊಂದು ನೈಜ ಘಟನೆ ಆಧಾರಿತ ಚಿತ್ರ. ಈಗಾಗಲೇ ಚಿತ್ರೀಕರಣ ಪೂರ್ಣವಾಗಿ,‌ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಚಿತ್ರ ಬ್ಯುಸಿಯಾಗಿದೆ. ಸದ್ಯದಲ್ಲೇ ಪ್ರಥಮಪ್ರತಿ ಸಿದ್ದವಾಗಲಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಚಿತ್ರ ಮೂಡಿಬಂದಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಗುಮ್ಮಿನೆನಿ ವಿಜಯ್ ಎರಡು ಹಾಡುಗಳಿಗೆ ಹಾಗೂ ಮಿಹಿರಾಮ್ಸ್ ಎರಡು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿನ್ನೆಲೆ ಸಂಗೀತವನ್ನು ಮಿಹಿರಾಮ್ಸ್ ಅವರೆ ನೀಡಿದ್ದಾರೆ. ಕೆ.ವಿ.ಕಿರಣ್ ಛಾಯಾಗ್ರಹಣ, ಶ್ರೀನಿವಾಸ್ ಕಲಾಲ್ ಸಂಕಲನ, ಪ್ರಭು ನೃತ್ಯ ನಿರ್ದೇಶನ ಹಾಗೂ ನರಸಿಂಹ ಮಾಗಡಿ ಅವರ ಸಾಹಸ ನಿರ್ದೇಶನ ನಮ್ಮ ಚಿತ್ರಕ್ಕಿದೆ ಎಂದು ನಿರ್ದೇಶಕ ವಿಜಯ್ ಚಲಪತಿ ತಿಳಿಸಿದರು.

 

ಮೂಲತಃ ಚಿಕ್ಕಬಳ್ಳಾಪುರದವನಾದ ನನಗೆ ಮೊದಲಿನಿಂದಲೂ ನಟನೆಯಲ್ಲಿ ಆಸಕ್ತಿ. ಉಷಾ ಭಂಡಾರಿ ಅವರ ನಟನಾ ಶಾಲೆಯಲ್ಲಿ ಕಲಿತು ಬಂದಿದ್ದೇನೆ. ಈಗ ನಟನಾಗುವ ಕಾಲ ಕೂಡಿ ಬಂದಿದೆ. ಗೆಳೆಯ ಅಕ್ಷಯ್ ಮೂಲಕ ನಿರ್ದೇಶಕ ವಿಜಯ್ ಚಲಪತಿ ಪರಿಚಯವಾದರು. ಈ ಚಿತ್ರದ ಕಥೆ ಹೇಳಿದರು‌. ಕಥೆ ಹಾಗೂ ಶೀರ್ಷಿಕೆ ಎರಡು ಇಷ್ಟವಾಯಿತು. ನಾನೇ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ಮಾಣ ಕೂಡ ಮಾಡಿದ್ದೇನೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇಂದು ನಮ್ಮ ಚಿತ್ರದ ಮೊದಲ ಹಾಡು ಅನಾವರಣವಾಗಿದೆ. ಹಾಡು ಬಿಡುಗಡೆ ಮಾಡಿ ಹಾರೈಸಿದ ಗಣ್ಯರಿಗೆ ಧನ್ಯವಾದ ಎಂದು ನಾಯಕ ಹಾಗೂ ನಿರ್ಮಾಪಕ ಅನಿಲ್ ಕುಮಾರ್ ತಿಳಿಸಿದರು.

 

 ಚಿತ್ರದಲ್ಲಿ ನಟಿಸಿರುವ ಶ್ರೀಕಾಂತ್, ಪ್ರಿಯ ತರುಣ್, ಗಣೇಶ್ ರಾವ್ ಕೇಸರ್ಕರ್, ಛಾಯಾಗ್ರಾಹಕ ಕೆ.ವಿ.ಕಿರಣ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

 

Copyright@2018 Chitralahari | All Rights Reserved. Photo Journalist K.S. Mokshendra,