Kamal Studios.News

Tuesday, August 05, 2025

 

ಕಮಲ್‌ರಾಜ್ ನಿರ್ಮಾಣದ

 3 ಚಿತ್ರಗಳ ಪೋಸ್ಟರ್ ಬಿಡುಗಡೆ

 

   ಚಿತ್ರರಂಗದಲ್ಲಿ ನಟ, ಸಹನಿರ್ಮಾಪಕನಾಗಿದ್ದ, ಇತ್ತೀಚೆಗೆ  ದ ಸೂಟ್  ಎಂಬ ಚಿತ್ರದಲ್ಲಿ ನಟಿಸಿದ್ದ ಕಮಲ್‌ರಾಜ್ ಅವರು ಇದೀಗ ಒಟ್ಟಿಗೇ ಮೂರು ಚಿತ್ರಗಳನ್ನು ಆರಂಭಿಸಿದ್ದಾರೆ, ಮೊಹಬ್ಬತ್ ಜಿಂದಾಬಾದ್, ಟಾಸ್ಕ್ ಹಾಗೂ ನಾಳೆ ನಮ್ಮ ಭರವಸೆ, ಈ ಮೂರೂ ಚಿತ್ರಗಳಲ್ಲಿ ಅಭಿನಯಿಸುವ ಜೊತೆಗೆ ಕಮಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಅವರೇ ಚಿತ್ರ ನಿರ್ಮಾಣ ಸಹ ಮಾಡುತ್ತಿದ್ದಾರೆ. ಮೊಹಬ್ಬತ್ ಜಿಂದಾಬಾದ್ ಹಿಂದಿ ಚಿತ್ರ. ಅಲ್ಲದೆ ನಾಳೆ ನಮ್ಮ ಭರವಸೆ ಚಿತ್ರವನ್ನು 10 ಜನ ನಿರ್ದೇಶನ ಮಾಡಲಿದ್ದು, ಇದರಲ್ಲಿ ನಾಯಕ ಕಮಲ್‌ರಾಜ್ 50 ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿಗೆ  ಈ ಮೂರೂ ಚಿತ್ರಗಳ ಶೀರ್ಷಿಕೆ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು, ಡಾ.ವಿ.ನಾಗೇಂದ್ರಪ್ರಸಾದ್, ಉಮೇಶ್ ಬಣಕಾರ್, ನಿರ್ದೇಶಕರಾದ ಸಾಯಿಪ್ರಕಾಶ್, ರವಿ ಶ್ರೀವತ್ಸ, ನಟಿ ಪ್ರಿಯಾಂಕ ಉಪೇಂದ್ರ ಅತಿಥಿಗಳಾಗಿ ಆಗಮಿಸಿದ್ದರು.

    ಈ ಸಂದರ್ಭದಲ್ಲಿ ಮಾತನಾಡಿದ ಕಮಲ್‌ರಾಜ್, ಈ ಮೊದಲು ದಿ ಸೂಟ್ ಚಿತ್ರದಲ್ಲಿ ನಟಿಸಿದ್ದೆ. ನಾಳೆ ನಮ್ಮ ಭರವಸೆ ಚಿತ್ರದಲ್ಲಿ 50 ಪಾತ್ರಗಳನ್ನು ಮಾಡುತ್ತಿದ್ದೇನೆ. 75 ಸೀನ್‌ಗಳಿರುವ ಈ ಚಿತ್ರವನ್ನು ಹತ್ತು ಜನ ನಿರ್ದೇಶಿಸಲಿದ್ದಾರೆ. ಇನ್ನು ಮೊಹಬ್ಬತ್ ಜಿಂದಾಬಾದ್ ಚಿತ್ರದಲ್ಲಿ 14 ಹಾಡುಗಳಿದ್ದು, ಬಾಲಿವುಡ್ ಸೇರಿದಂತೆ ಹಲವಾರು ಕಲಾವಿದರು ನಟಿಸುತ್ತಿದ್ದಾರೆ.  ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಯಲ್ಲಿ ಈ ಚಿತ್ರ ತಯಾರಾಗಲಿದೆ. ಈಗಾಗಲೇ ಮೂರು ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಡಿಸೆಂಬರ್ ವೇಳೆಗೆ ಬಿಡುಗಡೆ ಮಾಡುವ ಯೋಜನೆಯಿದೆ. ಈ ಚಿತ್ರಗಳಲ್ಲಿ ನಾನು ಲವರ್‌ಬಾಯ್,  ಡಿಟೆಕ್ಟಿವ್ ಮುಂತಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನಾನು 40ಕ್ಕೂ ಹೆಚ್ಚು ಚಿತ್ರಗಳಿಗೆ ಇನ್ವೆಸ್ಟ್ ಮಾಡಿದ್ದು, ಆಪೈಕಿ ಒಂದೆ ಸಿನಿಮಾ ರಿಲೀಸಾಗಿದೆ. ಹಾಗಾಗಿ ಇಂಡಸ್ಟ್ರಿ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೇನೆ ಎಂದರು.

    ಟಾಸ್ಕ್ ಚಿತ್ರವನ್ನು ಐದು ಜನ ನಿರ್ದೇಶನ ಮಾಡಲಿದ್ದಾರೆ. ಆಪೈಕಿ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಒಂದು ಕಥೆಗೆ ಆಕ್ಷನ್ ಕಟ್  ಹೇಳಲಿದ್ದಾರೆ. ಅವರು  ಮಾತನಾಡುತ್ತ  ಥೇಟರಿಗೆ ಜನ ಬರ್ತಾ ಇಲ್ಲ ಎಂಬ ಕೊರಗನ್ನು ಮಾದೇವ, ಎಕ್ಕ, ಸು ಫ್ರಂ ಸೋ ಹಾಗೂ ನರಸಿಂಹ ನೀಗಿಸಿವೆ. ನನ್ನ ಸೆ.10  ಚಿತ್ರದ ವಿತರಣೆಗೆ ಕಮಲ್ ಕೈಜೋಡಿಸಿದ್ದಾರೆ. ಅವರು ರಿಯಲ್ ಎಸ್ಟೇಟ್‌ನಲ್ಲಿ ಸಾಧನೆ ಮಾಡಿದವರು, ಈಗ ಸಿನಿಮಾದಲ್ಲಿ ಏನಾದರೂ ಮಾಡಲು ಬಂದಿದ್ದಾರೆ. ನಾನು 150 ಚಿತ್ರ ಮಾಡಿದವನಾದರೂ, 5 ಜನರಲ್ಲಿ ಒಬ್ಬ ನಿರ್ದೇಶಕನಾಗಲು ಒಪ್ಪಿದೆ.  ಇದು ಗಿವ್ ಅಂಡ್ ಟೇಕ್ ಪಾಲಿಸಿ ಅಷ್ಟೇ ಎಂದರು.

ಪ್ರಿಯಾಂಕಾ ಉಪೇಂದ್ರ ಮಾತನಾಡಿ ಕಮಲ್ ನನಗೆ ಒಂದು  ಸಮಾರಂಭದಲ್ಲಿ ಪರಿಚಯ. ಅವರ 200 ಮಿನಿ ಥೇಟರ್ ಮಾಡುವ ಪ್ಲಾನ್, ಅವುಗಳಲ್ಲಿ ಬಹುತೇಕ ಕನ್ನಡ ಸಿನಿಮಾ ಪ್ರದರ್ಶಿಸುವ ಯೋಜನೆ ಕೇಳಿ ನನಗೆ ತುಂಬಾ ಖುಷಿಯಾಯ್ತು. ಅವರು 50 ಪಾತ್ರಗಳನ್ನು  ಮಾಡ್ತಿರುವುದು ಕೇಳಿದಾಗಂತೂ ಎಕ್ಸೈಟ್ ಆದೆ ಎಂದರು.

ಉಮೇಶ್ ಬಣಕಾರ್ ಮಾತನಾಡಿ ಕಮಲ್ ನನಗೆ 15 ವರ್ಷಗಳ ಸ್ನೇಹಿತರು. ಅವರು ಬಹುಮುಖ ಪ್ರತಿಭೆ. 50 ಪಾತ್ರಗಳಷ್ಟೇ ಅಲ್ಲ, 50 ವ್ಯವಹಾರಗಳನ್ನೂ ಮಾಡ್ತಿದಾರೆ. ಸಿನಿಮಾಗಳ ಮೂಲಕ  ಹೊಸ  ಪ್ರತಿಭೆಗಳಿಗೆ ಅವಕಾಶ ಕೊಡ್ತಿದ್ದಾರೆ ಎಂದರು.  

ಡಾ.ವಿ. ನಾಗೇಂದ್ರಪ್ರಸಾದ್ ಮಾತನಾಡಿ ಕಮಲ್‌ಗೆ ಸಿನಿಮಾ ಮೇಲೆ ದೊಡ್ಡ ಹುಚ್ಚಿದೆ. ಅತಿಯಾದ ಗೀಳಿದೆ. ಹಾಗಿದ್ದರೇನೇ ಏನಾದರೂ ಸಾಧಿಸಲು ಸಾಧ್ಯ, ಅವರ ಆಸಕ್ತಿ, ಉತ್ಸಾಹ ನೋಡಿದರೆ ತುಂಬಾ ಖುಷಿಯಾಗುತ್ತಿದೆ. ಈಗಾಗಲೇ ಎಲ್ಕಾ ಸಿನಿಮಾಗಳ ಗ್ರೌಂಡ್‌ವರ್ಕ್ ಮಾಡಿಕೊಂಡಿದ್ದು, ಶೂಟಿಂಗ್ ಹೋಗುವುದಷ್ಟೇ ಬಾಕಿಯಿದೆ ಎಂದರು. ಮತ್ತೊಬ್ಬ ನಿರ್ದೇಶಕ ರವಿ ಶ್ರೀವತ್ಸ ಮಾತನಾಡಿ ಕಮಲ್ ಅವರು ಬಹುಮುಖ ಪ್ರತಿಭ. ಅವರ ಯೋಜನೆ, ಯೋಚನೆ ಕೇಳಿ ನನಗೆ ತುಂಬಾ ಖುಷಿಯಾಯ್ತು ಎಂದರು.

 

Copyright@2018 Chitralahari | All Rights Reserved. Photo Journalist K.S. Mokshendra,