Ondu Sundara Devvada Kathe.News

Monday, June 23, 2025

51

 

ಒಂದು ಸುಂದರ ದೆವ್ವದ ಕಥೆ ಚಿತ್ರಕ್ಕೆ

ಲೀಲಾವತಿ ದೇಗುಲದಲ್ಲಿ ಚಾಲನೆ

  

    ಆರ್ಯ ಫಿಲಂಸ್ ಲಾಂಛನದಲ್ಲಿ ಆರ್. ಲಕ್ಷ್ಮಿ ನಾರಾಯಣಗೌಡ್ರು  ನಿರ್ಮಿಸುತ್ತಿರುವ, ನೃತ್ಯ ಸಂಯೋಜಕ ಎಂ.ಆರ್. ಕಪಿಲ್ ಅವರು  ನಿರ್ದೇಶಿಸುತ್ತಿರುವ  ಒಂದು ಸುಂದರ ದೆವ್ವದ ಕಥೆ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಭೈರನಹಳ್ಳಿ ಬಳಿ ಇರುವ  ಹಿರಿಯನಟಿ ಲೀಲಾವತಿ ಅವರ ಸ್ಮಾರಕದ ಮುಂದೆ ನೆರವೇರಿತು. ಚಿತ್ರದ ಮುಹೂರ್ತ ದೃಶ್ಯಕ್ಕೆ ನಟ ವಿನೋದ್ ರಾಜ್ ಅವರು ಕ್ಲಾಪ್ ಮಾಡಿದರು. ಫಿಲಂ ಚೆಂಬರ್ ಅಧ್ಯಕ್ಷ ನರಸಿಂಹಲು, ವೆಂಕಟೇಶ್ , ಬಾಮ ಹರೀಶ್, ನಟ ಪ್ರಥಮ್ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

      ಈಗಾಗಲೇ ದಾಸರಹಳ್ಳಿ, ಹಸಿವು, ದೇವದೂತದಂಥ ವಿಭಿನ್ನ ಚಿತ್ರಗಳನ್ನು  ನಿರ್ದೇಶಿಸಿದ ಕಪಿಲ್ ಅವರ 10ನೇ ಚಿತ್ರವಿದು.

 ಇಂದಿನ ಎಜುಕೇಶನ್ ಸಿಸ್ಟಂ ಕುರಿತಂತೆ ಹೆಣೆಯಲಾಗಿರುವ  ವಿಭಿನ್ನ ಕಥಾವಸ್ತು ಇರೋ ಈ ಚಿತ್ರದಲ್ಲಿ  ಮೊದಲಬಾರಿಗೆ ನಾಯಕ ನಟರಾಗಿ  ಸಾಹಸ ನಿರ್ದೇಶಕ‌ ಕೌರವ ವೆಂಕಟೇಶ್ ಅಭಿನಯಿಸುತ್ತಿದ್ದಾರೆ.

   ಮುಹೂರ್ತದ ನಂತರ ಮಾತನಾಡಿದ ನಿರ್ದೇಶಕ‌ ಕಪಿಲ್,  ೩೫ ವರ್ಷಗಳ ಹಿಂದೆ ನಾನು ಕೌರವ ವೆಂಕಟೇಶ್ ಅವರ ಸ್ಟೂಡೆಂಟ್ ಆಗಿದ್ದೆ. ಈಗ ಅವರ ಸಿನಿಮಾ ನಿರ್ದೇಶಿಸುವ ಅವಕಾಶ ದೊರೆತಿದೆ. ಇದೊಂದು ವಿಭಿನ್ನ ಟೈಟಲ್, ಸಿನಿಮಾದಲ್ಲೂ ವಿಭಿನ್ನತೆಯಿದೆ. ಎಜುಕೇಶನ್ ಬಗ್ಗೆ ಒಂದು ಗಟ್ಟಿಯಾದ ಕಥೆಯಿದೆ. ವಿದ್ಯಾರ್ಥಿಗಳಿಗೆ ಓದು ಮುಖ್ಯನಾ ಲಂಚ ಮುಖ್ಯನಾ ಎಂಬ ಬಗ್ಗೆ ಒಂದು ಸಂದೇಶ ಹೇಳಿದ್ದೇವೆ. ಚಿತ್ರದಲ್ಲಿ ಅನೇಕ ಊಹಿಸಲಾಗದ ದೃಶ್ಯಗಳಿವೆ. ನಾಯಕ ಒಬ್ಬ ಸೆಕ್ಯೂರಿಟಿ ಗಾರ್ಡ್ ಆಗಿದ್ದು, ಆತನ ಸುತ್ತ ನಡೆಯುವ ಕಥೆಯೇ ಚಿತ್ರದ ಕಾನ್ಸೆಪ್ಟ್ . ಧರಣಿ ಚಿತ್ರದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಲಿಲಾವತಿ ದೇಗುಲದಲ್ಲಿ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರದ  ಚಿತ್ರೀಕರಣ ನಡೆಸಲಾಗುವುದು  ಎಂದು ಹೇಳಿದರು. 

   ನಂತರ ನಿರ್ಮಾಪಕ ಆರ್. ಲಕ್ಷ್ಮೀ ನಾರಾಯಣಗೌಡ ಮಾತನಾಡುತ್ತ ದಶಕದ ಹಿಂದೆ ಕೋಲಾರ ಸಿನಿಮಾ ಮಾಡಿದ್ದೆ. ಕಪಿಲ್ ಬಂದು ಈ ಹೇಳಿದಾಗ ಸ್ವಲ್ಪ ಯೋಚಿಸಿದೆ. ಕಥೆ ನನಗೆ ಹಿಡಿಸಿತು. ವಿಭಿನ್ನವಾಗಿದೆ ಅನಿಸಿತು. ಎಲ್ಲಿ ಕಳೆದುಕೊಂಡಿದ್ದೇವೋ ಅಲ್ಲೇ ಹುಡುಕಬೇಕು ಎಂದು ಮತ್ತೆ ನಿರ್ಮಾಣಕ್ಕಿಳಿದೆ. ನಾನು ನಿರ್ಮಾಪಕನಾಗಲು ಅದಕ್ಕೆ ಕಾರಣವೂ ಇದೆ. ನಾನು ಚಿಕ್ಕವನಿದ್ದಾಗ ಒಂದು ಶೂಟಿಂಗ್ ನಡೆಯುತ್ತಿತ್ತು. ಅದನ್ನು ನಾನು ನೋಡುತ್ತಿದ್ದಾಗ ಒಬ್ಬ ಇದು ಫೀಲ್ಡ್ ಅಂತ ನನ್ನನ್ನು ದೂರ ತಳ್ಳಿದ. ಆನಂತರ ನಾನವನಿಗೆ ಇವರಲ್ಲಿ ಯಾರು ದೊಡ್ಡವರೆಂದು ಕೇಳಿದೆ. ಆಗವನು ನಿರ್ಮಾಪಕರೇ ದೊಡ್ಡವರೆಂದು ಹೇಳಿದ. ಅಂದೇ ನಾನು ಆದರೆ ಪ್ರೊಡ್ಯೂಸರ್ ಆಗಬೇಕೆಂದುಕೊಂಡೆ. ಆಗಿದ್ದೇನೆ ಎಂದು ನೆನಪಿಸಿಕೊಂಡರು.

  ನಾಯಕ ಕೌರವ ವೆಂಕಟೇಶ್ ಮಾತನಾಡಿ ಇದುವರೆಗೆ ಸಾಕಷ್ಟು ಚಿತ್ರಗಳಿಗೆ ಕೊರಿಯಾಗ್ರಾಫರ್ ಆಗಿ ಕೆಲಸ ಮಾಡಿದ್ದೆ. ಈಗ ನಾಯಕನಾಗುತ್ತಿದ್ದೇನೆ. ನನ್ನದು  ಸೆಕ್ಯೂರಿಟಿ ಗಾರ್ಡ್ ಪಾತ್ರ. ವಂಚನೆಗೊಳಗಾದ  ಹೆಣ್ಣುಮಕ್ಕಳಿಗೆ ಹೇಗೆ ನ್ಯಾಯ ಕೊಡಿಸುತ್ತೇನೆ ಎನ್ನುವುದೇ ಮುಖ್ಯಕಥೆ ಎಂದು ಹೇಳಿದರು. ನಾಯಕಿ ಧರಣಿ ಮಾತನಾಡಿ ತನ್ನ ಪಾತ್ರ ಪರಿಚಯಿಸಿಕೊಂಡರು. ಚಿತ್ರದಲ್ಲಿ ಫಿಲಂ ಚೆಂಬರ್ ಅಧ್ಯಕ್ಷ ಆರ್. ನರಸಿಂಹಲು ಅವರು ಒಬ್ಬ ಅರ್ಚಕರ ಪಾತ್ರ ನಿರ್ವಹಿಸುತ್ತಿದ್ದಾರೆ. 

    ಸಾಯಿ ಕೃಷ್ಣ ಹೆಬ್ಬಾಳ ಅವರ ಚಿತ್ರಕಥೆ, ಸಂಭಾಷಣೆ,   ಹರ್ಷ ಕೊಗೋಡ್ ಅವರ ಸಂಗೀತ, ಶಂಕರ್ ಆರಾಧ್ಯ ಅವರ ಛಾಯಾಗ್ರಹಣ, ವಿನಯ್. ಜಿ. ಆಲೂರು ಅವರ ಸಂಕಲನ, ಶರಣ್ ಗದ್ವಾಲ್ ಅವರ ತಾಂತ್ರಿಕ  ನಿರ್ದೇಶನ ಈ ಚಿತ್ರಕ್ಕಿದೆ.

  ಕೆ.ಟಿ. ಮುನಿರಾಜ್, ಆರ್. ಲಕ್ಷ್ಮೀನಾರಾಯಣಗೌಡ, ವಿ. ಸಿ.ಎನ್. ಮಂಜು,

 ಗುರು ಪ್ರಸಾದ್, ಸುರೇಶ್ ಮುರಳಿ,  ವಿಕ್ಟರಿ ದಯಾಲನ್, ನಾರಾಯಣಸ್ವಾಮಿ, ವಿಕ್ಟರಿ ವಾಸು, ಶಂಕರ್ ಭಟ್, ಪ್ರೇಮ್ ಪಾವಗಡ ಸೇರಿದಂತೆ  ಸಾಕಷ್ಟು ಜನ ರಂಗಕಲಾವಿದರುಗಳು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,