Production 1.Film News

Saturday, June 21, 2025

64

 

ಫ್ಯಾಮಿಲಿ ಥ್ರಿಲ್ಲರ್ ಚಿತ್ರದಲ್ಲಿ ಕೃಷ್ಣ ಅಜಯರಾವ್

 

 ಯೋಗರಾಜ ಭಟ್- ದಿನಕರ್ ಚಾಲನೆ

 

  ನನ್ ಮಗಳೇ ಹೀರೋಯಿನ್ ಸೇರಿದಂತೆ ಹಲವು  ಸದಭಿರುಚಿಯ ಚಿತ್ರಗಳ ನಿರ್ದೇಶಕ ಎಸ್.ಕೆ. ಬಾಹುಬಲಿ ಇದೀಗ ಕೃಷ್ಣ ಅಜೇಯ್ ರಾವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

 ಪಿ.ಕೆ. ಪ್ರೊಡಕ್ಷನ್ಸ್ ಮೂಲಕ ನಿರ್ಮಾಪಕ ಕಿರಣ್ ಅವರು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಮುಹೂರ್ತ ಸಮಾರಂಭ ಶ್ರೀ ಬಂಡೆ ಮಹಾಕಾಳಮ್ಮ  ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಪ್ರಥಮ ದೃಶ್ಯಕ್ಕೆ ಯೋಗರಾಜ ಭಟ್ಟರು ಕ್ಲಾಪ್ ಮಾಡಿದರೆ,

ದಿನಕರ್ ತೂಗುದೀಪ ಕ್ಯಾಮೆರಾ ಚಾಲನೆ ಮಾಡಿದರು. ನಿರ್ದೇಶಕ ಎಂ.ಡಿ. ಶ್ರೀಧರ್, ಎಸ್. ನಾರಾಯಣ್, ಶಿವತೇಜಸ್  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

   ಲವರ್ ಬಾಯ್, ಆಕ್ಷನ್ ಹೀರೋ, ಭಗ್ನ ಪ್ರೇಮಿಯಾಗಿ ಕಾಣಿಸಿಕೊಂಡಿದ್ದ ಅಜಯ್ ರಾವ್ ಈ ಚಿತ್ರದ ಮೂಲಕ  ರಗಡ್ ಹೀರೋ ಆಗುತ್ತಿದ್ದಾರೆ.

     ಮುಹೂರ್ತದ ನಂತರ ನಿರ್ದೇಶಕ ಬಾಹುಬಲಿ ಮಾತನಾಡುತ್ತ ಇದೊಂದು ಫ್ಯಾಮಿಲಿ ಥ್ರಿಲ್ಲರ್ ಚಿತ್ರ. ನ್ಯಾಷನಲ್ ಲೆವೆಲ್ ನಲ್ಲಿ ನಡೆಯುವ ಕಥೆ. ಒಂದು ಘಟನೆಯನ್ನು ಇನ್ ಸ್ಪಿರೇಶನ್ ಆಗಿ ತೆಗೆದುಕೊಂಡು ಸ್ಕ್ರಿಪ್ಟ್ ಮಾಡಿದ್ದೇವೆ. ನಾನೀ ಕಥೆ ಮಾಡಿಕೊಂಡಾಗಲೇ ಈ ಕ್ಯಾರೆಕ್ಟರನ್ನು  ಅಜಯ್ ರಾವ್ ಕೈಲೇ ಮಾಡಿಸಬೇಕೆಂದುಕೊಂಡೆ. ಅವರು ಫ್ಯಾಮಿಲಿ ಹೀರೋ, ಕಥೆ ಕೇಳಿದ ತಕ್ಷಣ ಅವರೂ ಸಹ ಒಪ್ಪಿದರು. ಅವರ ಪಾತ್ರಕ್ಕೆ 4-5 ಶೇಡ್ಸ್ ಇದೆ. ಅದರಲ್ಲಿ ಈ ಬೋಳು ತಲೆಯ ಗೆಟಪ್ ಕೂಡ ಒಂದು. ಇದಕ್ಕೆ ಬಾಂಬೆಯಿಂದ ವಿಗ್ ಮೇಕರ್ ಕರೆಸಿದ್ದೆವು‌. ಅವರು ನಾಲ್ಕೈದು ಗಂಟೆ ತೆಗೆದುಕೊಂಡು ಅಜಯ್‌ರಾವ್ ಅವರಿಗೆ ಈ ವಿಗ್ ಕೂರಿಸಿದರು. ಚಿತ್ರದಲ್ಲಿದು 2-3 ಸೀನ್ ಮಾತ್ರ ಬರುತ್ತದೆ. ಬೆಂಗಳೂರು, ಮೈಸೂರು, ಪಾಂಡಿಚೇರಿ ಸುತ್ತಮುತ್ತ 60 ರಿಂದ 70 ದಿನ ಶೂಟಿಂಗ್ ನಡೆಸುವ ಪ್ಲಾನಿದೆ. ಉಪಾಧ್ಯಕ್ಷ ಖ್ಯಾತಿಯ ಮಲೈಕಾ ಟಿ.ವಸುಪಾಲ್ ಅವರು ಚಿತ್ರದ ನಾಯಕಿ ಪಾತ್ರ ಮಾಡುತ್ತಿದ್ದಾರೆ ಎಂದರು.

    ನಾಯಕ ಅಜೇಯ್ ರಾವ್ ಮಾತನಾಡಿ ಯುದ್ದಕಾಂಡ ಟೈಮಲ್ಲಿ ಬಾಹುಬಲಿ ಬಂದು ಈ ಕಥೆ ಹೇಳಿದರು. ಕೇಳಿದಕೂಡಲೇ ಇಷ್ಟವಾಯ್ತು. ಯೋಗಾನಂದ್ ಅದ್ಭುತವಾದ ಡೈಲಾಗ್ ಬರೆದಿದ್ದಾರೆ.

   ಫಿಟ್ ನೆಸ್ ಬಗ್ಗೆ ಏನೋ ಒಂದು ಸಾಧನೆ ಮಾಡಬೇಕೆಂದು ಹೊರಟಾಗ ಆತ ಏನೆಲ್ಲಾ  ಎದುರಿಸಬೇಕಾಗುತ್ತದೆ ಎಂಬುದನ್ನು ಈ ಸಿನಿಮಾ ಮೂಲಕ ಬಾಹುಬಲಿ ಅವರು ಹೇಳಹೊರಟಿದ್ದಾರೆ. ನನ್ನ ಪಾತ್ರಕ್ಕೆ ಫಿಸಿಕಲ್ ಟ್ರಾನ್ಸ್ ಫಾರ್ಮೇಶನ್ ತುಂಬಾ ಇರುತ್ತದೆ, ನಿರ್ಮಾಪಕರಿಗೆ ಸಿನಿಮಾ ಬಗ್ಗೆ ತುಂಬಾ ಕಾನ್ಫಿಡೆನ್ಸ್ ಇದೆ  ಎಂದು ಹೇಳಿದರು.

ಚಿತ್ರದ ನಿರ್ಮಾಪಕ ಕಿರಣ್ ಮಾತನಾಡುತ್ತ ಬಾಹುಬಲಿ ನನಗೆ ಬಹಳ ದಿನಗಳಿಂದ ಪರಿಚಯ. ತುಂಬಾ ಕಥೆ ಹೇಳಿದ್ದರು. ಅದರಲ್ಲಿ ಈ ಕಥೆ ಇಷ್ಟವಾಯಿತು ಎಂದು ಹೇಳಿದರು.

ಛಾಯಾಗ್ರಾಹಕ ಸುಜ್ಞಾನ್ ಮಾತನಾಡುತ್ತ ನಿರ್ದೇಶಕರು ತುಂಬಾ ಚೆನ್ನಾಗಿ ಸ್ಕ್ರಿಪ್ಟ್ ಮಾಡಿಕೊಂಡಿದ್ದಾರೆ. ಅಜಯರಾವ್ ಅವರಿಗೆ ಬೇರೆ ಬೇರೆ ಗೆಟಪ್  ಇರೋದ್ರಿಂದ ನಾವು ತುಂಬಾಕೆಲಸ ಮಾಡಬೇಕಿದೆ. ತುಂಬಾ ಚಾಲೆಂಜ್  ಇರುತ್ತೆ ಎಂದರು. ಉಳಿದಂತೆ ನಟ ಉಗ್ರಂ ಮಂಜು, ಸಂಭಾಷಣೆಗಾರ ಯೋಗಾನಂದ್ ಮದ್ದಾನ್ ಚಿತ್ರದ ಕುರಿತಂತೆ ಮಾತನಾಡಿದರು.

    ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಅಲ್ಲದೆ ಈ ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಮಾಂತ್ರಿಕ  ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಿದ್ದು ಯೋಗರಾಜ ಭಟ್, ಕವಿರಾಜ್, ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ಕೆ.ಎಂ.ಪ್ರಕಾಶ್ ಅವರ ಸಂಕಲನ, ಡಿಫರೆಂಟ್ ಡ್ಯಾನಿ, ರವಿವರ್ಮ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,