Kapata Nataka Sutradhari.News

Friday, June 20, 2025

53

 

ಕಪಟ ನಾಟಕ ಸೂತ್ರಧಾರಿಯ ಟ್ರೈಲರ್ ಬಿಡುಗಡೆ!

ಧೀರಜ್ ಎಂ.ವಿ ನಿರ್ದೇಶನದ, ಅಭಿರಾಮ ಅರ್ಜುನ ಬ್ಯುಸಿನೆಸ್ ಹೆಡ್ ಆಗಿ ಕಾರ್ಯನಿರ್ವಹಿಸಿರುವ ಕಪಟ ನಾಟಕ ಸೂತ್ರಧಾರಿ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಜುಲೈ ೪ರಂದು ತೆರೆಗಾಣಲಿರುವ ಈ ಸಿನಿಮಾದ ಪ್ರಧಾನ ಕಥಾ ಸುಳಿವೊಂದು ಈ ಮೂಲಕ ಜಾಹೀರಾದಂತಾಗಿದೆ. ಭಾರತದ ಪ್ರಥಮ ನ್ಯೂ ಏಜ್ ಪೊಲಿಟಿಕಲ್ ಸಟೈರ್ ಸಿನಿಮಾ ಎಂಬುದೂ ಸೇರಿದಂತೆ ಒಂದಷ್ಟು ವಿಶೇಷತೆಗಳ ಮೂಲಕ ಗಮನ ಸೆಳೆದುಕೊಂಡಿದ್ದ ಚಿತ್ರವಿದು. ಬಿಡುಗಡೆಗೆ ಕೆಲ ದಿನಗಳು ಬಾಕಿ ಇರುವಾಗಲೇ ಚಿತ್ರತಂಡ ಟ್ರೈಲರ್ ಅನ್ನು ಪ್ರೇಕ್ಷಕರ ಮುಂದಿಟ್ಟಿದೆ. ನಮ್ಮ ಸಮಾಜದಲ್ಲಿನ ಪ್ರಸ್ತುತ ಸ್ಥಿತಿಗತಿಗತಿಗಳನ್ನು ಕಣ್ಣೆದುರು ತರುವಂಥಾ ದೃಶ್ಯಗಳ ಮೂಲಕ ಈ ಟ್ರೈಲರ್ ಒಂದಷ್ಟು ಚರ್ಚೆಗೆ ಗ್ರಾಸವಾಗುವ ಮುನ್ಸೂಚನೆ ಕೂಡಾ ನಿಖವಾಗಿಯೇ ಸಿಗುವಂತಿದೆ.

ಈ ನೆಲದ ಜನಸಾಮಾನ್ಯರಲ್ಲಿ ಸಹಜವಾಗಿ ನೆಲೆಗೊಂಡಿರುವ ಧಾರ್ಮಿಕ ಭಾವನೆಗಳು ರಾಜಕಾರಣದ ಕಪಿಮುಷ್ಠಿಗೆ ಸಿಲುಕಿಕೊಂಡಿರುವ ಕಾಲಮಾನವಿದು. ಒಂದು ಸಮುದಾಯದ ನಂಬಿಕೆಯ ತಾಣಕ್ಕೆ ಮತ್ತೊಂದು ಸಮುದಾಯದ ಯುವಕ ಸಹಜ ಕುತೂಹಲದಿಂದ ಭೇಟಿ ನೀಡಿದಾಗ ಘಟಿಸುವ ಕಥನದ ಬಿಂದುವಿನಿಂದ ರೋಚಕ ಕಥನವೊಂದು ಬಿಚ್ಚಿಕೊಳ್ಳುವ ಬಿಂದುವೊಂದು ಈ ಟ್ರೈಲರಿನಲ್ಲಿ ಕಾಣಿಸಿದೆ. ಸಹಜವಾದ ದೃಶ್ಯಗಳ ಮೂಲಕ, ಗಹನಾದ ಕಥೆ ಹೇಳ ಹೊರಟಂತೆ ಭಾಸವಾಗುವ ಟ್ರೈಲರ್ ಮೂಲಕ ಕಪಟ ನಾಟಕ ಸೂತ್ರಧಾರಿ ಪ್ರೇಕ್ಷಕರನ್ನು ಸೆಳೆದುಕೊಂಡಂತಿದೆ.

ಹೊಸಬರೇ ಸೇರಿ ಈ ಸಿನಿಮಾವನ್ನು ರೂಪಿಸಿದ್ದಾರೆ. ಈ ಹಿಂದೆ ಫಸ್ಟ್ ಲುಕ್ ಸೇರಿದಂತೆ ಒಂದಷ್ಟು ಬಗೆಯಲ್ಲಿ ಚಿತ್ರತಂಡ ಪ್ರೇಕ್ಷಕರನ್ನು ಮುಖಾಮುಖಿಯಾಗಿತ್ತು. ಈ ಮೂಲಕ ಮೂಡಿಕೊಂಡಿದ್ದ ಕುತೂಹಲದ ನಡುವೆಯೇ ಟ್ರೈಲರ್ ಲಾಂಚ್ ಆಗಿದೆ. ವಿಎಸ್ ಕೆ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಅಭಿರಾಮ ಅರ್ಜುನ ಈ ಸಿನಿಮಾದ ಬ್ಯುಸಿನೆಸ್ ಹೆಡ್ ಆಗಿ ಕಾರ್ಯ ನಿರ್ವಹಿಸಿರುವುದಲ್ಲದೆ, ಪ್ರಧಾನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಐಟಿ ವಲಯದಿಂದ ಬಂದಿರುವ ಧೀರಜ್ ಎಂ.ವಿ ಈ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ವೀರೇಶ್ ಎನ್ ಟಿ ಎ ಛಾಯಾಗ್ರಹಣ, ಪ್ರಸನ್ನ ಕುಮಾರ್ ಎಂ.ಎಸ್ ಸಂಗೀತ ನಿರ್ದೇಶನ ಹಾಗೂ ಮುರಳಿ ಶಂಕರ್ ಸಹ ನಿರ್ದೇಶನವಿರುವ ಈ ಚಿತ್ರದಲ್ಲಿ ಹರೀಶ್ ರಂಗರಾವ್ ಕ್ರಿಯೇಟಿವ್ ಹೆಡ್ ಆಗಿ, ವರುಣ್ ಗುರುರಾಜ್ ಪ್ರೊಡಕ್ಷನ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಪಟ ನಾಟಕ ಸೂತ್ರಧಾರಿ ಜುಲೈ ೪ರಂದು ಪ್ರೇಕ್ಷಕರ ಮುಂದೆ ಬಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,