September 10.News

Monday, June 02, 2025

26

ಸೆಪ್ಟೆಂಬರ್ 10: ಎಲ್ಲಾ ಸಮಸ್ಯೆಗಳಿಗೆ 

ಆತ್ಮಹತ್ಯೆ ಒಂದೇ ಪರಿಹಾರವಲ್ಲ

 

  *  ಸಾಯಿಪ್ರಕಾಶ್ ನಿರ್ದೇಶನದ 105ನೇ ಚಿತ್ರ

 

ಜೀವನದಲ್ಲಿ ಎದುರಾಗುವಂಥ ಹಲವಾರು  ಸಮಸ್ಯೆಗಳಿಗೆ  ಆತ್ಮಹತ್ಯೆ ಒಂದೇ ಪರಿಹಾರವಲ್ಲ  ಎಂಬ ಉತ್ತಮ ಸಂದೇಶ ಇಟ್ಟುಕೊಂಡು ಶತ ಸಿನಿಮಾಗಳ ಸರದಾರ ಓಂ ಸಾಯಿ ಪ್ರಕಾಶ್ ಅವರು ’ಸೆಪ್ಟೆಂಬರ್ 10' ಎಂಬ ಚಿತ್ರವನ್ನು  ನಿರ್ದೇಶನ ಮಾಡಿದ್ದಾರೆ. ಶ್ರೀದೇವಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ರಾಜಮ್ಮ ಸಾಯಿಪ್ರಕಾಶ್ ಅವರು ನಿರ್ಮಾಣ ಮಾಡಿರುವ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿರುವ, ಕೋವಿಡ್ ಸಮಯದಲ್ಲಿ ಲಕ್ಷಾಂತರ ಜನರಿಗೆ ಸಹಾಯ ಮಾಡಿದ ಡಾ.ಎಸ್. ರಾಜು ಅವರು ಈ  ಚಿತ್ರದ ಕಂಟೆಂಟ್ ಆಧರಿಸಿ ಮಾಡಿರುವ ತುಣುಕುಗಳು ಹಾಗೂ ಮೇಕಿಂಗ್ ವಿಡಿಯೋ ಟೀಸರ್ಗೆ ಚಾಲನೆ ನೀಡಿದರು.

  ಬಿಬಿಎಂಪಿ ಮಾಜಿ ಸದಸ್ಯರೂ ಆದ ಡಾ.ಎಸ್. ರಾಜು ಅವರು ಚಿತ್ರದ ಕಾನ್ಸೆಪ್ಟ್ ಹಾಗೂ ಅದರಲ್ಲಿರುವ ಮೆಸೇಜ್ ಎಲ್ಲಾ ಜನರಿಗೂ  ತಲುಪಬೇಕೆಂಬ ಸದುದ್ದೇಶದಿಂದ ಈ ಚಿತ್ರದ  ಬಿಡುಗಡೆಗೆ ತಮ್ಮ ಸಹಕಾರ ನೀಡುತ್ತಿದ್ದಾರೆ. 

      ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸಾಯಿಪ್ರಕಾಶ್ ಈಗಿನ‌ ಕಾಲದಲ್ಲಿ ಒಂದು ಸಿನಿಮಾ ಮಾಡುವುದೇ‌ ಕಷ್ಟ, ಮಾಡಿದರೂ ಅದನ್ನು ಜನರಿಗೆ ತಲುಪಿಸುವುದು ಇನ್ನೂ ಕಷ್ಟ. ನಾನು ೨೦೨೦ರಲ್ಲಿ ಸೆಪ್ಟೆಂಬರ್ 10 ಎಂಬ ಟೈಟಲ್ ಇಟ್ಟುಕೊಂಡು ಸಿನಿಮಾ ಸ್ಟಾರ್ಟ್ ಮಾಡಿದೆ. ಅಷ್ಟರಲ್ಲಿ ಕೊರೋನಾ ಬಂತು. ನಂತರ ಜನ ಬರ್ತಾರೋ ಇಲ್ವೋ ಎಂಬ ಭಯದಿಂದ ಅದನ್ನು ರಿಲೀಸ್ ಮಾಡಲೇ ಇಲ್ಲ. ಈಗಲೂ ಆ ಭಯ ಇತ್ತು. ದೊಂಬರ ಕೃಷ್ಣ ಸುರೇಶ್ ಅವರು ಡಾ.ರಾಜು ಅವರ ಬಗ್ಗೆ ಹೇಳಿದರು. ರಾಜು ಅವರು ನಾನು ವಿಜಯನಗರದಲ್ಲಿ ಮನೆ ಮಾಡಿದಾಗಿನಿಂದಲೂ ಪರಿಚಯ. ನಂತರ ಹೋಗಿ ರಾಜು ಅವರಿಗೆ ಕಥೆ ಹೇಳಿದಾಗ ತುಂಬಾ ಇಷ್ಟಪಟ್ಟರು. ಈಗಿನ‌ ಕಾಲದಲ್ಲಿ ಇಂಥ ಸಿನಿಮಾಗಳು ಹೆಚ್ಚು ಹೆಚ್ಚು ಬರಬೇಕು. ಸಿನಿಮಾ ನೋಡಿದ ಕೆಲವರಾದರೂ ತಮ್ಮ‌ಮನಸು ಬದಲಾಯಿಸಿಕೊಂಡರೆ ನಮಗದೇ ಖುಷಿಯ ವಿಚಾರ. ಇದರಲ್ಲಿ ಸೆಂಟಿಮೆಂಟ್, ಕಾಮಿಡಿ ಹೀಗೆ  ಎಲ್ಲಾ ಥರದ ಮನರಂಜನಾತ್ಮಕ ಅಂಶಗಳೂ ಚಿತ್ರದಲ್ಲಿದೆ. ಏನಾದರಾಗಲಿ ನಾನು ನಿಮ್ಮ ಜತೆ ಇರುತ್ತೇನೆ ಎಂದು ನಮ್ಮ‌ ಜತೆ ನಿಂತರು. ಅವರು ಕೊಟ್ಟ  ದೈರ್ಯದಿಂದ ರಿಲೀಸ್ ಮಾಡುತ್ತಿದ್ದೇನೆ. ಅಲ್ಲದೆ ಕರವೇ ನಾರಾಯಣಗೌಡರೂ ನಮ್ಮ ಜತೆ ನಿಂತಿದ್ದಾರೆ. ನಮ್ಮ ಎಲ್ಲ ಸದಸ್ಯರಿಗೂ ಈ ಸಿನಿಮಾ ನೋಡಿ ಎಂದು ಹೇಳುತ್ತೇನೆ ಎಂದಿದ್ದಾರೆ. ಜತೆಗೆ  ಆ ಶಿರಡಿ ಸಾಯಿಬಾಬಾ ಕೂಡ ನಮ್ಮ‌ಜತೆ ಇದ್ದಾರೆ ಎಂದು ಹೇಳಿದರು.

  ನಂತರ ಹಿರಿಯನಟ ರಮೇಶ್ ಭಟ್ ಮಾತನಾಡುತ್ತ ಸಿನಿಮಾ ಬಗ್ಗೆ ನಾನೇನೂ ಹೇಳುವಂತಿಲ್ಲ. ಆಗಲೇ ಚಿತ್ರದಲ್ಲಿರುವ ಎಲ್ಲ ವಿಚಾರಗಳನ್ನು ಬಗ್ಗೆ ಮಾತಾಡಿದ್ದಾರೆ. ನಾನು ಇದರಲ್ಲಿ ಒಬ್ಬ ಲಾಯರ್ ಪಾತ್ರ ಮಾಡಿದ್ದೇನೆ. ಸಾಯಿಪ್ರಕಾಶ್ ಅವರ ಎಲ್ಲ ಚಿತ್ರಗಳಲ್ಲಿ ನಾನಿರಬೇಕು ಎನ್ನುವುದು ಅವರಿಚ್ಚೆ. ಹಾಗಾಗಿಯೇ ನಾನಿಲ್ಲಿದ್ದೇನೆ. ನಮ್ಮಂಥ ಕಲಾವಿದರಿಗೆ ಯಾರೂ ಕರೆಯಲ್ಲ‌. ಈ ಚಿತ್ರಕ್ಕೆ ಹೆಚ್ಚಿನ ಪ್ರಚಾರ ಕೊಡಿ ಎಂದು ಮಾಧ್ಯಮದವರಿಗೆ ಕೇಳಿಕೊಂಡರು.

   ನಟ ಗಣೇಶ ರಾವ್ ಕೇಸರಕರ್ ಮಾತನಾಡುತ್ತ ಕರೊನಾ ಕಾಲದಲ್ಲು ನಾನು ಹಾಗೂ ಡಾ.ರಾಜು ಸೇರಿ  ಅನೇಕ ಮೆಡಿಕಲ್ ಕ್ಯಾಂಪ್ ಮಾಡಿದ್ದೇವೆ. ಆನಂತರವೂ ರಾಜು ಅವರು ನಮ್ಮ‌ ಜತೆಗಿದ್ದಾರೆ. ಅಷ್ಟೊಂದು ಸಿನಿಮಾ ಮಾಡಿದರೂ ಸಾಯಿಪ್ರಕಾಶ್ ಅವರು ನಮ್ಮ ಸಿನಿಮಾ ನೋಡಿ ಎಂದು ರಿಕ್ವೆಸ್ಟ್ ಮಾಡಿಕೊಳ್ಳುವುದು ನಿಜಕ್ಕೂ ಬೇಸರದ ಸಂಗತಿ ಎಂದರು.

   ನಂತರ  ನಟಿ ಶ್ರೀರಕ್ಷಾ ಮಾತನಾಡಿ ನಾನು ಸಾಯಿಪ್ರಕಾಶ್ ಅವರ ೨-೩ ಸಿನಿಮಾಗಳಲ್ಲಿ  ನಟಿಸಿದ್ದೇನೆ. ಇದರಲ್ಲೂ ಒಂದೊಳ್ಳೆ ಪಾತ್ರ ನೀಡಿದ್ದಾರೆ ಎಂದು ಹೇಳಿದರು.

ಅವರ ಪತಿ  ಶಿವಕುಮಾರ್ ಸೇರಿದಂತೆ ಹಲವಾರು ಕಲಾವಿದರು ತಂತಮ್ಮ ಅನುಭವಗಳನ್ನು ಹಂಚಿಕೊಂಡರು.

   ವೇದಿಕೆಯಲ್ಲಿ ಕರ್ನಲ್ ರಾಜು, ಛಾಯಾಗ್ರಾಹಕ ಜೆ.ಜಿ.ಕೃಷ್ಣ, ಕಮಲ್ ಮೂವಿ ಡಿಸ್ಟ್ರಿಬ್ಯೂಟರ್ಸ್ ,  ಶ್ರೀರಕ್ಷಾ, ಶಿವಕುಮಾರ್, ರಮೇಶ್ ಭಟ್, ಸಂಧ್ಯಾರಾಣಿ ವೇದಿಕೆಯಲ್ಲಿದ್ದರು. ಮ್ಯೂಸಿಕ್ ಬಜಾರ್ ಈ ಚಿತ್ರದ ಹಾಡುಗಳನ್ನ ಹೊರತಂದಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,